ಯೋಜನೆಗೆ ಸಿದ್ದರಾಮಯ್ಯ ಚಾಲನೆ
ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5ನೇ ಗ್ಯಾರಂಟಿ ಘೋಷಣೆಯಾದ ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಉದ್ಯೋಗ ಭತ್ಯೆ ನೀಡುವ ’ಯುವನಿಧಿ’ ಯೋಜನೆಗೆ ನಾಳೆ ಶಿವಮೊಗ್ಗದಲ್ಲಿ ಚಾಲನೆ ದೊರೆಯಲಿದೆ.
ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ಬೆಳಗ್ಗೆ 11 ಗಂಟೆಗೆ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗದು ವರ್ಗಾವಣೆ ಮಾಡುವ ಮೂಲಕ ವಿದ್ಯುಕ್ತವಾಗಿ ಯೋಜನೆ ಉದ್ಘಾಟಿಸಲಿದ್ದಾರೆ.
ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ
ಕಾರ್ಯಕ್ರಮಕ್ಕಾಗಿ ಶಿವಮೊಗ್ಗದ ಫ್ರೀಡಂಪಾರ್ಕ್ (ಹಳೆ ಕಾರಾಗೃಹ) ಜಾಗದಲ್ಲಿ 85 ಸಾವಿರಕ್ಕೂ ಹೆಚ್ಚು ಆಸನಗಳ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವನಿಧಿ ಫಲಾನುಭವಿಗಳು ಮೊದಲ ಕಂತಿನ ಹಣ ಬಿಡುಗಡೆಗೆ ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮದ ರೂವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ, ಕಾರ್ಯಕ್ರಮ ಯಶಸ್ವಿಗೆ ಅಗತ್ಯವಿರುವ ಕ್ರಮಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಮಧು ಬಂಗಾರಪ್ಪ, ಡಾ.ಎಂ.ಸಿ. ಸುಧಾಕರ್, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.