ರಾಜ್ಯದೆಲ್ಲೆಡೆ ಉದ್ಯೋಗ ಮೇಳ: ಸಿದ್ದರಾಮಯ್ಯ ಘೋಷಣೆ
ಶಿವಮೊಗ್ಗ: ನಿರುದ್ಯೋಗ ಸಮಸ್ಯೆ ಬಗೆಹರಿಸಲು ರಾಜ್ಯದೆಲ್ಲೆಡೆ ಉದ್ಯೋಗ ಮೇಳಗಳನ್ನು ಏರ್ಪಡಿಸಿ ದೇಶ-ವಿದೇಶಗಳಲ್ಲಿ ನಮ್ಮ ಯುವಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ದಶಕದ ಹಿಂದೆ ನೂರಕ್ಕೆ ಐದು ಮಂದಿ ನಿರುದ್ಯೋಗಿಗಳಾಗಿದ್ದರೆ, ಇಂದು ಅದರ ಪ್ರಮಾಣ ಶೇ.10.5ಕ್ಕೆ ಹೆಚ್ಚಳವಾಗಿದೆ, ಇದರಿಂದ ಯುವ ಸಮುದಾಯ ಆತಂಕ ಸ್ಥಿತಿಯಲ್ಲಿದೆ.
ಇದನ್ನು ಮನಗಂಡು ನಾವು ಪದವಿ ಹಾಗೂ ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ಜಾರಿಗೆ ತಂದು ಮಾಸಿಕ 3,000 ಹಾಗೂ 1,500 ರೂ. ಉದ್ಯೋಗ ಭತ್ಯೆ ನೀಡುತ್ತಿದ್ದೇವೆ.
ಉದ್ಯೋಗ ಭತ್ಯೆ ಸಂದರ್ಭದಲ್ಲೇ ಕೌಶಲ್ಯ ತರಬೇತಿ
ಶಿವಮೊಗ್ಗದಲ್ಲಿ ಸರ್ಕಾರದ ಐದು ಮತ್ತು ಕೊನೆಯ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಭತ್ಯೆ ಪಡೆಯುವ ಸಂದರ್ಭದಲ್ಲೇ ಕೌಶಲ್ಯ ತರಬೇತಿ ನೀಡಿ, ದೇಶ-ವಿದೇಶಗಳಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದರು.
ನಿರುದ್ಯೋಗ ಸಮಸ್ಯೆಯಿಂದ ನನ್ನ ಯುವಕ-ಯುವತಿಯರು ಭ್ರಮನಿರಸನರಾಗಿದ್ದಾರೆ, ಅವರ ಭವಿಷ್ಯಕ್ಕೆ ಶಕ್ತಿ ತುಂಬಲು ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ.
ಐದು ಗ್ಯಾರಂಟಿ ಯೋಜನೆ ಜಾರಿಗೆ
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆಯಲ್ಲಿ ಘೋಷಿಸಿದೆವು.
ಚುನಾವಣಾ ಪೂರ್ವ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವುದು ಇಡೀ ರಾಷ್ಟ್ರದಲ್ಲಿ ಮಾದರಿಯಾಗಿದೆ.
ಬಡ-ಬಗ್ಗರು ಸಮನಾಗಿ ಜೀವನ ನಡೆಸಬೇಕು
ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು, ಅದನ್ನು ಮೂಲವಾಗಿಟ್ಟುಕೊಂಡು ಎಲ್ಲಾ ಬಡ-ಬಗ್ಗರು ಸಮನಾಗಿ ಜೀವನ ನಡೆಸಬೇಕೆಂಬ ಹಾಗೂ ಕೊಳ್ಳುವ ಶಕ್ತಿ ಹೆಚ್ಚಿಸುವಲ್ಲಿ ನಮ್ಮ ಯೋಜನೆಗಳು ಸಹಕಾರಿಯಾಗಿವೆ.
ನಮ್ಮ ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು 1.50 ಕೋಟಿ ಮಂದಿಗೆ ಮಾಸಿಕ 5,000 ದಿಂದ 5,500 ರೂ. ವರೆಗೆ ಆರ್ಥಿಕ ಶಕ್ತಿ ತುಂಬಿದ್ದೇವೆ.
ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಇದನ್ನೇ ಎಂದರು.
ಮೊದಲ ಗ್ಯಾರಂಟಿ ಯೋಜನೆಯಿಂದಾಗಿ ಇದುವರೆಗೆ 130 ಕೋಟಿ 28 ಲಕ್ಷ ಮಹಿಳೆಯರು, ಯುವತಿಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ ೨೦೦ ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ.
ಇದೇ ರೀತಿ 5 ಕೆ.ಜಿ. ಅಕ್ಕಿ, 5 ಕೆ.ಜಿ. ಅಕ್ಕಿಯ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ. ತಲುಪಿಸುತ್ತಿದ್ದೇವೆ. ಇಂಥಾ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದೇ ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಸಮರ್ಥಿಸಿಕೊಂಡರು.
ಯೋಜನೆ ಅನುಕೂಲ ಪಡೆದುಕೊಳ್ಳಿ
ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.
ಆದ್ದರಿಂದ ಪ್ರತಿ ಯುವಕ-ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಿ ಎಂದು ಕರೆ ನೀಡಿದರು.