ಬಿಡದಿ ತೋಟಕ್ಕೆ ತೆರಳಿ ಕೋರಿದ ಆಶೀರ್ವಾದ
ಬೆಂಗಳೂರು:ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿಯಲ್ಲಿ ಪೈಪೋಟಿ ನಡೆದಿರುವ ಬೆನ್ನಲ್ಲೇ ಹಾಲಿ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕಳೆದ ಎರಡು ಅವಧಿಗೆ ಈ ಕ್ಷೇತ್ರದಿಂದ ಸಂಸದರಾಗಿರುವ ಸಿಂಹಗೆ ಬರುವ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲು ಸ್ವಪಕ್ಷೀಯ ಮುಖಂಡರೆ ಕಸರತ್ತು ನಡೆಸಿದ್ದಾರೆ.
ಇದರ ಬೆನ್ನಲ್ಲೇ ಸಿಂಹ ಪರವಾಗಿ ಮಾಜಿ ಸಚಿವ ವಿ.ಸೋಮಣ್ಣ ಕಳೆದ ವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ವಿಷಯವೂ ಸೇರಿದಂತೆ ಚರ್ಚೆ ಮಾಡಿದ್ದರು.
ಪ್ರತಾಪ್ ಸಿಂಹ ಪರ ಬ್ಯಾಟಿಂಗ್
ಸೋಮಣ್ಣ ಭೇಟಿ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿ, ಅಕ್ರಮ ಮರ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಹಾಗೂ ಅವರ ಸಹೋದರನ ಪರ ಬ್ಯಾಟಿಂಗ್ ಮಾಡಿದ್ದರು.
ಎನ್‌ಡಿಎ ಕೂಟದಲ್ಲಿ ಭಾಗಿಯಾಗಿರುವ ಜೆಡಿಎಸ್, ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿಯುವ ಆಸಕ್ತಿ ತೋರಿಲ್ಲ, ಇದು ಸಿಂಹಗೆ ಬಲ ಬಂದಂತಾಗಿದೆ.
ಕುಮಾರಸ್ವಾಮಿ ಇತ್ತೀಚೆಗೆ ತಮ್ಮ ಪರ ನಿಂತಿರುವುದನ್ನು ಮನಗಂಡ ಸಿಂಹ, ಇಂದು ಬಿಡದಿ ತೋಟಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.
ಮಾಡದ ತಪ್ಪಿಗೆ ಸರ್ಕಾರ ತಮ್ಮ ಕುಟುಂಬದ ಮೇಲೆ ಸೇಡಿನ ಮನೋಭಾವ ತೋರಿದ ಸಂದರ್ಭದಲ್ಲಿ ನೀವು ಮಧ್ಯೆ ಪ್ರವೇಶಿಸಿ ನಮ್ಮ ಬೆಂಬಲಕ್ಕೆ ಬಂದಿದ್ದು, ಆನೆ ಬಲ ಬಂದಂತಾಗಿದೆ ಎಂದಿದ್ದಾರೆ.