ಕಮಾಂಡ್ ಸೆಂಟರ್‌ಗೆ ಅತ್ಯಾಧುನಿಕ ಸೌಲಭ್ಯ
ಬೆಂಗಳೂರು:ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಇಂದಿಲ್ಲಿ ತಿಳಿಸಿದ್ದಾರೆ.
’ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಇದೆ, ಕಮಾಂಡ್ ಸೆಂಟರ್‌ನ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಮೂಲಕ ಟ್ರಾಫಿಕ್ ನಿಯಂತ್ರಿಸಲಾಗುತ್ತಿದೆ, ಮತ್ತಷ್ಟು ಸುರಕ್ಷಿತ ಸಂಚಾರ ದೃಷ್ಟಿಯಿಂದ ಜಾಗತಿಕ ಮಟ್ಟದ ತಂತ್ರಜ್ಞಾನ ಬಳಸಲಾಗುವುದು ಎಂದರು.
ಪ್ರಾಣ ರಕ್ಷಣೆ ಹೊಣೆ ಚಾಲಕರದ್ದು
ವಾಹನ ಚಾಲನೆ ವೇಳೆ ಸುರಕ್ಷತೆ ಜೊತೆ ಬೇರೆಯವರ ಪ್ರಾಣ ರಕ್ಷಣೆ ಹೊಣೆಯೂ ಚಾಲಕರ ಮೇಲಿರುತ್ತದೆ, ಟ್ರಾಫಿಕ್ ನಿಯಮಗಳ ಕಡ್ಡಾಯ ಪಾಲನೆಯಿಂದ ಅನಾಹುತಗಳನ್ನು ತಪ್ಪಿಸಬಹುದು.
ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ವಾಹನಗಳಿವೆ, 2023ರಲ್ಲಿ 900 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಸಾಮಾಜಿಕ ಜಾಲತಾಣದ ಮೂಲಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಟ್ರಾಫಿಕ್ ನಿಯಮಗಳ ಜಾಗೃತಿ ಮೂಡಿಸಲಾಗುತ್ತಿದೆ.
ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಮೂಲಕ ಟ್ರಾಫಿಕ್ ನಿಯಂತ್ರಿಸುವ “ಬೆಂಗಳೂರು ಟ್ರಾಫಿಕ್ ಇಂಜಿನ್”ಗೆ ಚಾಲನೆ ನೀಡಲಾಗಿದ್ದು, ಈ ತಂತ್ರಜ್ಞಾನವು ತುರ್ತುಸೇವಾ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.