ದೇಸೀ ದನಕರು ಕಣ್ಮರೆ; ವಿದೇಶಿ ಹಸುಗಳ ಲಗ್ಗೆ…
ಬೆಂಗಳೂರು: ರೈತ ಹಾಗೂ ಜಾನುವಾರುಗಳ ನಡುವೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ, ಆಧುನೀಕರಣ ಒಗ್ಗಿಕೊಂಡಂತೆ, ಯಾಂತ್ರೀಕರಣವೂ ಕೃಷಿ, ತೋಟಗಾರಿಕೆಯಲ್ಲಿ ಹಾಸುಹೊಕ್ಕಾಗಿದೆ.
ರೈತನಿಲ್ಲದೆ, ದನಕರುಗಳು ಇಲ್ಲ; ದನಕರುಗಳು ಇಲ್ಲದೆ ರೈತನಿಲ್ಲ ಎಂಬ ಮಾತು ಚಿರಪರಿಚಿತವಾಗಿತ್ತು.
ಜಾನುವಾರು ರೈತರ ಪರಮ ಮಿತ್ರವಾಗಿವೆ. ಅವಿಲ್ಲದೇ ಕೃಷಿ ಇರಲಿಲ್ಲ. ಬೇಸಾಯಕ್ಕೆ ರೈತನಷ್ಟೇ ಅವು ಕೂಡ ಹೆಗಲು ಕೊಡುತ್ತಿದ್ದವು. ಎತ್ತು, ಹಸು, ಹೋರಿ, ಎಮ್ಮೆ, ಕುರಿ, ಮೇಕೆಗಳು ರೈತರ ಜೀವನದ ಭಾಗವೇ ಆಗಿದ್ದವು. ಇಂತಹ ಜಾನುವಾರು ಇಲ್ಲದೆ, ರೈತರ ಬದುಕು ಸಾಗುತ್ತಿರಲಿಲ್ಲ. ಅವುಗಳಿಂದ ಕೃಷಿ ಬೇಕಾದ ಉಪಯುಕ್ತ ಗೊಬ್ಬರವೂ ಸಿಗುತ್ತಿತ್ತು.
ಹೈಬ್ರಿಡ್ ತಳಿಗಳ ಹಾವಳಿ; ರೈತ ಪರಾವಲಂಬಿ
ಅನಾದಿ ಕಾಲದಿಂದಲೂ ಬಳಕೆಯಲ್ಲಿದ್ದ ಮೂಲ ತಳಿಗಳ ವಿವಿಧ ಬೆಳೆಯನ್ನು ಹೈಬ್ರೀಡ್ ತಳಿಗಳು ಈಗಾಗಲೇ ಆಪೋಷನ ತೆಗೆದುಕೊಂಡಿವೆ. ಅಧಿಕ ಇಳುವರಿಯ ಆಸೆಯಿಂದ ಮೂಲತಳಿಯನ್ನೇ ಕೈ ಚೆಲ್ಲಿ ಪರಾವಲಂಬಿ ಆಗಿದ್ದೇವೆ.
ಇದರ ಜತೆಜತೆಗೆ ರಸಗೊಬ್ಬರ, ಕೀಟನಾಶಕಗಳು ಕೃಷಿಯಲ್ಲಿ ಬೆರತು ಹೋಗಿವೆ. ಇವಿಲ್ಲದೇ ಬೇಸಾಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಜಾನುವಾರುಗಳ ಸೆಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸಲಾಗುತ್ತಿತ್ತು. ಆರೋಗ್ಯಕರ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈಗ ತಳಿಯೂ ಬದಲಾಗಿದೆ, ಗೊಬ್ಬರವೂ ಬದಲಾಗಿ ವಿಷಯುಕ್ತ ಬೆಳೆ ಬೆಳೆಯುವ ಪರಿಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಪ್ರಕೃತಿಯ ವಿರುದ್ಧದ ಮಾನವನ ಅವಿರತ ಪ್ರಯತ್ನ ಫಲವೆಂದರೆ ತಪ್ಪಾಗಲಾರದು.
ಕೃಷಿ ಚಟುವಟಿಕೆಗಳಲ್ಲಿ ಜಾನುವಾರು ಬದಲಿಗೆ ಯಂತ್ರೋಪಕರಣಗಳದ್ದೇ ಕಾರುಬಾರು. ನೇಗಿಲು, ಕುಂಟೆ, ಹಲುಬೆ, ನೋಗ ಮೊದಲಾದ ಪರಿಕರಗಳು ಮೂಲೆ ಸೇರಿವೆ. ಅವುಗಳ ಬಳಕೆಯ ಸ್ಥಾನದಲ್ಲಿ ಟ್ರಾಕ್ಟರ್, ಟಿಲ್ಲರ್, ಜೆಸಿಬಿ ಸೇರಿದಂತೆ ನಾನಾ ರೀತಿಯ ಯಂತ್ರೋಪಕರಣಗಳ ಬಳಕೆ ಅನಿವಾರ್ಯ ಎನಿಸಿದೆ. ಹೀಗಾಗಿ ಜಾನುವಾರು ಅವಲಂಬನೆ ಕಡಿಮೆ ಆಗಿದೆ. ಉಳುಮೆಯಿಂದ ಒಕ್ಕಣೆಯವರೆಗೂ ಬಹುತೇಕ ರೈತರು ಯಂತ್ರಗಳನ್ನು ಅವಲಂಬಿಸಿದ್ದಾರೆ.
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಡಗರದಲ್ಲಿ ಗತಕಾಲದ ವೈಭವವನ್ನು ಮರೆತಿದ್ದೇವೆ. ಸುಗ್ಗಿಯ ಹಬ್ಬ ಸಂಕ್ರಾಂತಿ. ಇದಕ್ಕಿರುವ ವಿಶೇಷವಾದ ವೈಶಿಷ್ಟ್ಯ ಮತ್ಯಾವುದೇ ಹಬ್ಬದಲ್ಲಿ ಕಾಣುವುದಿಲ್ಲ.
ಬೇರೆ ಯಾವುದೇ ಹಬ್ಬದಲ್ಲಿ ಜನ-ಜಾನುವಾರುಗಳು ಒಟ್ಟಾಗಿ ಹಬ್ಬ ಆಚರಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗಿಂತ ಜಾನುವಾರುಗಳಿಗೆ ಮೀಸಲಿಟ್ಟ ಹಬ್ಬವಾಗಿತ್ತು.
ಆದರೆ, ಯಾಂತ್ರಿಕರಣದ ಮಹಿಮೆಯ ಫಲವಾಗಿ ಜಾನುವಾರು ಮಾಯವಾಗಿವೆ. ಹಳ್ಳಿಕಾರ್ (ನಾಟಿ), ಅಮೃತ್ ಮಹಲ್ ಮೊದಲಾದ ನೆಲಮೂಲದ ತಳಿಯ ದನಕರು, ಎತ್ತು, ಹೋರಿಗಳು ದಿನಕ್ರಮೇಣ ಕಡಿಮೆಯಾಗಿವೆ. ಊರಿನ ಪ್ರತಿಮನೆಯಲ್ಲಿ ಸಾಮಾನ್ಯವಾಗಿದ್ದ ಇವು ಈಗ ಪ್ರತಿ ಗ್ರಾಮದಲ್ಲೂ ಬೆರಳೆಣಿಕೆಯಷ್ಟು ಇವೆ. ಮುಂದೆ ಅವು ಇಲ್ಲವಾಗಬಹುದು ಎಂಬ ಆತಂಕ ಮನೆ ಮಾಡಿದೆ.
ಲಾಭದಾಯಕ ಹೈನುಗಾರಿಕೆಗೆ, ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರು ವಾಲಿದ್ದಾರೆ. ಇದರ ಪರಿಣಾಮವಾಗಿ ಅಧಿಕ ಹಾಲು ನೀಡುವ ವಿದೇಶಿ ತಳಿಯ ಹಸುಗಳು ನಗರ, ಗ್ರಾಮೀಣ ಎಂಬ ಬೇಧವಿಲ್ಲದೆ ನೋಡಬಹುದು.
ಹಿಂದೆಲ್ಲಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳನ್ನು ಶುಚಿಗೊಳಿಸಿ, ಬಣ್ಣದ ಕಾಗದ, ಬಲೂನ್, ಟೇಪು, ಬಣ್ಣಗಳಿಂದ ತರಾವೇರಿ ಸಿಂಗರಿಸಿ ಊರ ಮುಂದೆ ಎಲ್ಲರೂ ತಮ್ಮ ತಮ್ಮ ಜಾನುವಾರುಗಳೊಂದಿಗೆ ಒಂದೆಡೆ ಸೇರಿತ್ತಿದ್ದರು.
ವೈವಿಧ್ಯಮಯ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದ್ದವು ಜಾನುವಾರು. ಕೊಟ್ಟಿಗಳನ್ನೂ ಸಹ ರಂಗೋಲಿ ಹಾಕಿ ಸಿಂಗರಿಸಲಾಗುತ್ತಿತ್ತು. ಹೀಗಾಗಿ ಮನೆ ಮಂದಿ, ಜಾನುವಾರುಗಳ ಸಂಭ್ರಮದ ಹಬ್ಬವಾಗಿತ್ತು.
ವಿದೇಶಿ ಹಸುಗಳ ಮಹಿಮೆ,; ಸಂಭ್ರಮವಿಲ್ಲದ ಸಂಕ್ರಾಂತಿ
ವಿದೇಶಿ ತಳಿಯ ಸೀಮೆ ಹಸುಗಳು ಮನೆಯಲ್ಲೇ ಸಾಕಾಣೆ ಮಾಡುವುದು ಹೆಚ್ಚು. ಇವುಗಳನ್ನು ಕಿಚ್ಚು ಹಾಯಿಸಲು ಕರೆದೊಯ್ಯವುದು ವಿರಳ.
ಸಂಕ್ರಾಂತಿ ಮೂರ್ತಿಯನ್ನು ಪ್ರತಿವರ್ಷ ಹೊಸದಾಗಿ ಮಣ್ಣಿನಲ್ಲಿ ನಿರ್ಮಿಸಿ ಅಲಂಕರಿಸಿ, ಪೊಂಗಲ್ ನೈವೇದ್ಯ ಮಾಡಿ ಪರಸ್ಪರ ಹಂಚಿ ಸಂಭ್ರಮಿಸುತ್ತಿದ್ದರು.
ಸಂಕ್ರಾಂತಿ ಹಬ್ಬದಲ್ಲಿ ಒಂದೆಡೆಯಲ್ಲಿ ಸೇರುವ ಜಾನುವಾರು ಕಿಚ್ಚು (ಬೆಂಕಿ ದಾಟಿ) ಹಾಯ್ದು ಮನೆಗೆ ಬರಬೇಕಿತ್ತು. ( ಈ ರೀತಿ ಮಾಡುವುದರಿಂದ ಹುನ್ನಿಗಳು ಬೆಂಕಿಯ ಬಿಸಿಗೆ ನಾಶವಾಗುತ್ತವೆ ಎಂಬ ಪ್ರತೀತಿ ) ಕಿಚ್ಚು ಹಾಯುವುದರಲ್ಲೂ ಸ್ಪರ್ಧೆ, ಸಂಭ್ರಮ ಇರುತ್ತಿತ್ತು.
ಈಗ ಅದೆಲ್ಲವೂ ಮಾಯವಾಗುತ್ತಿದೆ. ಮಣಿನ ಸಂಕ್ರಾಂತಿ ಮೂರ್ತಿ ಬದಲು ಬಹುತೇಕ ಗ್ರಾಮಗಳಲ್ಲಿ ಸಿಮೆಂಟ್ ಮೂರ್ತಿ ನಿರ್ಮಾಣ ಆಗಿವೆ. ಅದೇ ರೀತಿ ಜಾನುವಾರು ಇಲ್ಲದ ಸಂಕ್ರಾಂತಿ ಆಗಿದೆ. ಸಾಂಪ್ರದಾಯಿಕ ಹಬ್ಬವಾಗಿದೆ ಅಷ್ಟೇ.
ನಗರ, ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಎಳ್ಳು ಬೀರುವುದು ಹಳ್ಳಿಯಲ್ಲೂ ಶುರುವಾಗಿದೆ. ಎಳ್ಳು, ಬೆಲ್ಲ, ಕಬ್ಬು, ಗೆಣಸು, ಕಡಲೆಕಾಯಿ ಮುನ್ನೆಲೆಗೆ ಬಂದಿವೆ. ಹೀಗೆ ಜನ-ಜಾನುವಾರುಗಳ ಸುಗ್ಗಿ ಜನರಿಗೆ ಮಾತ್ರ ಹುಗ್ಗಿ ಎಂಬಂತಾಗಿದೆ.