ಭಾಷೆ, ಅಸ್ಮಿತೆ, ಸಂಸ್ಕೃತಿ ರಕ್ಷಣೆಗೆ
ಸರ್ಕಾರ ಬದ್ಧವಾಗಿದೆ
ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪುನರ್ ಪರಿಶೀಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿದ್ದು, ಕನ್ನಡ ಭಾಷೆ ಭಾವಾನಾತ್ಮಕ ವಿಚಾರ, ಕರ್ನಾಟಕದಲ್ಲಿ ಇದ್ದೀರಿ, ನಮ್ಮ ರಾಜ್ಯಪಾಲರಾಗಿದ್ದೀರಿ. ಸರ್ಕಾರದ ಇಂತಹ ನೀತಿಯಲ್ಲಿ ತಪ್ಪು ಕಂಡು ಹಿಡಿಯಬಾರದು ಎಂದರು.
ಸುಗ್ರೀವಾಜ್ಞೆಗೆ ಯಾರೂ ಆಕ್ಷೇಪಿಸಿಲ್ಲ
ಸುಗ್ರೀವಾಜ್ಞೆಯಲ್ಲಿ ತಪ್ಪುಗಳಿವೆ ಎಂಬುದಾಗಿ ಯಾರಾದರೂ ನಾಗರಿಕರು ಅಥವಾ ರಾಜಕೀಯ ಪಕ್ಷಗಳವರು ರಾಜ್ಯಪಾಲರ ಗಮನಕ್ಕೆ ತಂದಿಲ್ಲ, ಯಾರೂ ಆಕ್ಷೇಪ ಸಲ್ಲಿಸಿಲ್ಲ, ಆದ್ದರಿಂದ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸರ್ಕಾರದ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.
ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಇರಬೇಕು ಎಂಬ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ಸಹಿ ಹಾಕದೆ ಏಕೆ ವಾಪಸ್ಸು ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ, ರಾಜ್ಯಪಾಲರು ವಿಧಾನಸಭೆ ಅಧಿವೇಶನ ನಡೆಯುವ ತನಕ ಕಾಯಬಾರದಿತ್ತು, ಈಗಲೇ ಸಹಿ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು
ದೇಶದ ರಕ್ಷಣೆ ವಿಚಾರದಲ್ಲಿ ಸರ್ಕಾರಗಳು ಬದ್ಧವಾಗಿರುವಂತೆ, ರಾಜ್ಯದ ಗೌರವದ ವಿಚಾರದಲ್ಲೂ ನಾವು ಬದ್ಧವಾಗಿದ್ದೇವೆ, ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು ಎಂಬುದಾಗಿ ಸುಗ್ರಿವಾಜ್ಞೆ ಹೊರಡಿಸಲಾಗಿದೆ, ಕನ್ನಡ ಭಾಷೆ, ಅಸ್ಮಿತೆ ಮತ್ತು ಸಂಸ್ಕೃತಿ ರಕ್ಷಣೆ ಇದಾಗಿದೆ.
ಕನ್ನಡ ನಾಮಫಲಕ ವಿಷಯವಾಗಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತರುವ ಮೂಲಕ ಕನ್ನಡ ಪರ ತೀರ್ಮಾನ ತೆಗೆದುಕೊಂಡಿದ್ದೇವೆ.
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕೆಂಬ ಬಗ್ಗೆ ವಿಧಾನಸಭೆ ಅಧಿವೇಶನಲ್ಲಿ ವಿಧೇಯಕ ಮಂಡಿಸಿ ಜಾರಿಗೆ ತರುತ್ತೇವೆ, ಇದರಲ್ಲಿ ಯಾವುದೇ ಅನುಮಾನ ಬೇಡ, ಇನ್ನು 10-15 ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ವಿಧೇಯಕ ಮಂಡನೆಯಾಗಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂಬ ರೀತಿ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಕೊಟ್ಟಿಲ್ಲ, ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂಬುದಾಗಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಾಸಕ ಬಾಲಕೃಷ್ಣ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆಗೆ ಉತ್ತರಿಸುವುದಿಲ್ಲ ಎಂದರು.
ಫೆಬ್ರವರಿ 17ರಂದು ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದರು.

1 comment
[…] ರಾಜಕೀಯ […]