ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ
ಬೆಂಗಳೂರು:ಭೀಕರ ಬರಗಾಲದ ನಡುವೆಯೇ ಬರುವ ಮಾರ್ಚ್-ಏಪ್ರಿಲ್‌ನಲ್ಲಿ ಬಿಸಿಲಿನ ಬೇಗೆ ಹೆಚ್ಚಲಿದೆ, ಜನ ಹಾಗೂ ಜಾನುವಾರಗಳ ರಕ್ಷಣೆಗೆ ಒತ್ತು ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಪ್ರಧಾನ ಕಾರ್ಯದರ್ಶಿಗಳಿಗೆ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಫೆಬ್ರವರಿ 8ರಂದು ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಆಗದಂತೆ, ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ, ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಬಹುಭಾಗ ಮಳೆ ಇಲ್ಲದೆ ಬರಗಾಲಕ್ಕೆ ಸಿಲುಕಿದೆ
ಈಗಾಗಲೇ ರಾಜ್ಯದ ಬಹುಭಾಗ ಮಳೆ ಇಲ್ಲದೆ ಬರಗಾಲಕ್ಕೆ ಸಿಲುಕಿದೆ, ಮುಂದಿನ ಮೂರ‍್ನಾಲ್ಕು ತಿಂಗಳು ನಮಗೆ ಸವಾಲಾಗಿದೆ, ಇದನ್ನು ನೀವು ನಿಭಾಯಿಸಬೇಕು ಎಂದರು.
ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ನೀರು, ಮೇವು ದೊರೆಯದೆ ನಾಡಿಗೆ ನುಗ್ಗುವ ಸಾಧ್ಯತೆ ಇದೆ, ಅರಣ್ಯ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತು ಕೊಡಿ. ಈ ರೀತಿ ಕ್ರಮಕೈಗೊಳ್ಳುವುದರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ದೊರೆಯುವ ಜೊತೆಗೆ ರೈತರ ಜಮೀನಿಗೆ ವನ್ಯ ಜೀವಿಗಳು ನುಗ್ಗುವುದನ್ನು ತಪ್ಪಿಸಬಹುದಾಗಿದೆ.
ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಿ
ಮೇವು ಸಾಲದಾದರೆ, ಬೆಳೆಯಬೇಕು, ಇಲ್ಲವೇ ರೈತರಿಂದ ಖರೀದಿಸಿ, ಎಲ್ಲಿಯೂ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಿ. ಖಾಸಗಿ ಮತ್ತು ಸರ್ಕಾರಿ ಜಾಗಗಳಲ್ಲಿ ಮೇವು ಬೆಳೆಯಲು ಒತ್ತು ಕೊಡಿ, ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂಬ ಮಾಹಿತಿ ಈಗಾಗಲೇ ನಿಮಗೆ ಇರುತ್ತದೆ, ಅಂತಹ ಕಡೆಗಳಲ್ಲಿ ಮುಂಜಾಗ್ರತೆಯಾಗಿ ಕ್ರಮಕೈಗೊಳ್ಳಿ ಎಂದರು.
ಕಠಿಣ ಸಂದರ್ಭದಲ್ಲಿ ಜಿಲ್ಲಾಡಳಿತ ಚಾಕಚಕ್ಯತೆಯಿಂದ ಕೆಲಸ ಮಾಡಬೇಕು, ಕರ್ತವ್ಯ ಲೋಪ, ನಿರ್ಲಲಕ್ಷ್ಯ ಮಾಡುವ ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ, ನೀವು ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾ ಮಟ್ಟದಲ್ಲಿ ಶಿಸ್ತು ಇರುವುದಿಲ್ಲ.
ನಿಮಗೆ ಹೊಣೆಗಾರಿಕೆ ವಹಿಸಿರುವ ಜಿಲ್ಲೆಗಳಿಗೆ ಹೋಗಿ ಆಡಳಿತ ಪರಿಶೀಲಿಸಿದ್ದೀರಾ, ನೀವು ಎಷ್ಟು ಪೊಲೀಸ್ ಠಾಣೆ ಮತ್ತು ಶಾಲೆಗಳಿಗೆ ಭೇಟಿ ನೀಡಿದ್ದೀರಿ ಮಾಹಿತಿ ನೀಡಿ, ನೀವು ಇಲ್ಲಿಯೇ ಕುಳಿತು ಆಡಳಿತ ನಡೆಸಿದರೆ ಶಿಸ್ತು ಬರುವುದಿಲ್ಲ.
ನಿಮಗೆ ಎಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುವುದಿಲ್ಲವೂ ಅಂತಹವನ್ನು ಮುಖ್ಯಕಾರ್ಯದರ್ಶಿ ಗಮನಕ್ಕೆ ತಂದು ಕ್ರಮಕೈಗೊಳ್ಳಿ.
ಅಧಿಕಾರಿಗಳಿಗೆ ಮುಂದುವರೆಯುವ ಅಧಿಕಾರ ಇಲ್ಲ
ಜಿಲ್ಲಾಧಿಕಾರಿಗಳಿಗೆ ಜಾತ್ಯತೀತತೆ ಬಗ್ಗೆ ಹೊಣೆಗಾರಿಕೆ ಇರಬೇಕು, ಸಂವಿಧಾನದ ಬಗ್ಗೆ ಗೌರವ ಇರಬೇಕು, ಇದರ ವಿರುದ್ಧ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಅಧಿಕಾರ ಮತ್ತು ಹಕ್ಕೂ ಇಲ್ಲ ಎಂದು ಎಚ್ಚರಿಸಿದರು.
ನೀವು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ನಿಮ್ಮಿಂದ ಯಾವ ಸಲಹೆ-ಸೂಚನೆ ಹೋಗಿದೆ ಎಂಬುದನ್ನು ಸಭೆಯ ಗಮನಕ್ಕೆ ತನ್ನಿ ಎಂದರು.
ಕೃಷಿ, ಕಂದಾಯ, ಪೊಲೀಸ್ ಠಾಣೆಗಳಿಗೆ ಜನ ಬರುತ್ತಾರೆ, ನೀವು ಇಂತಹ ಎಷ್ಟು ಕಚೇರಿಗಳಿಗೆ ಭೇಟಿ ನಿಡಿದ್ದೀರಿ ಎಂದು ಪ್ರಶ್ನಿಸಿದರು.
ಜನಸ್ಪಂದನದಲ್ಲಿ ಬಂದ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಿಕೊಡಿ, ವಿಧಾನಸೌಧದ ಮುಂದೆ ನಡೆಯುವ ಸ್ಪಂದನ ಕಾರ್ಯಕ್ರಮಕ್ಕೆ ಪ್ರತಿ ಇಲಾಖೆಗೂ ಪ್ರತ್ಯೇಕ ಟೆಂಟ್ ತೆರೆಯಲಾಗುವುದು. ನಿಮ್ಮ ಇಲಾಖಾ ಟೆಂಟ್‌ನಲ್ಲೇ ಹಾಜರಿದ್ದು ಸಮಸ್ಯೆಗಳನ್ನು ಫೆಬ್ರವರಿ 8 ರಂದು ಬಗೆಹರಿಸಿ ಎಂದು ಆದೇಶಿಸಿದರು.
ಎಸಿ, ಡಿಸಿ, ತಹಸೀಲ್ದಾರ್‌ಗಳು ಮಾಡಬೇಕಾದ್ದನ್ನು ನಾವು ಮಾಡಬೇಕಿದೆ, ನೀವು ಅವರ ಮೇಲೆ ಬಿಗಿ ಹಿಡಿತ ಇಟ್ಟರೆ, ಜನರು ವಿಧಾನಸೌಧದವರೆಗೂ ಅರ್ಜಿ ಹಿಡಿದು ಬರುತ್ತಿರಲಿಲ್ಲ ಎಂದರು.
2 comments
[…] ರಾಜಕೀಯ […]
[…] ರಾಜಕೀಯ […]