2024ರ ಲೋಕಸಭಾ ಚುನಾವಣೆ ಹೋರಾಟ ಕೈಬಿಟ್ಟು,
2029ರ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲಿ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಮೂಲಕ ಬಿಜೆಪಿ 2024 ರ ಲೋಕಸಭಾ ಚುನಾವಣೆಯಲ್ಲಿ ಗೆಲುವನ್ನು ನಿಶ್ಚಿತ ಮಾಡಿಕೊಂಡರೆ, ಪ್ರತಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ.ದಲ್ಲಿ ಸೀಟು ಹಂಚಿಕೆ ಗೊಂದಲ, ಹಲವು ನಾಯಕರು ಭ್ರಚ್ಟಾಚಾರ ಆರೋಪಗಳಲ್ಲಿ ದಿನೇ ದಿನೇ ಸಿಲುಕುತ್ತಿರುವ ವಿದ್ಯಮಾನಗಳು, ವಿರೋಧಿ ಒಕ್ಕೂಟ ಬಲಿಷ್ಠವಾಗುವುದಕ್ಕೆ ಮುನ್ನವೇ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಿಂದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆಗಳು ಕಂಡು ಬರುತ್ತಿವೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ.
ಎನ್‌ಡಿಎ ಸೋಲಿಸುವುದು ಕನಸಿನ ಮಾತು
ಅಂದು ರಾಷ್ಟ್ರಾದ್ಯಂತ ರಾಮ ಭಕ್ತರು ಪಟ್ಟ ಸಂಭ್ರಮ ಕಂಡು ವಿರೋಧಿಗಳ ಎದೆಯಲ್ಲಿ ನಡುಕ ಉಂಟಾಯಿತಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅನ್ನು ಸೋಲಿಸುವುದು ಕನಸಿನ ಮಾತು ಎಂಬುದು ಸಾಭೀತಾಯಿತು.
ಅಂದು ರಾತ್ರಿ ಬಿಹಾರದ ತುಂಬಾ ಹಳ್ಳಿ-ಹಳ್ಳಿಗಳಲ್ಲಿ ಜನತೆ ರಾಮ ದೀಪ ಬೆಳಗಿದ್ದು, ಆ ರಾಜ್ಯದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನು ಬೆಚ್ಚಿ ಬೀಳಿಸಿತಲ್ಲದೆ, ಬೆಳಗಾಗುವುದರೊಳಗೆ ಲಾಲೂ ಪ್ರಸಾದ್ ಯಾದವ್ ಜೊತೆಗಿನ ಮಹಾ ಮೈತ್ರಿಕೂಟದಿಂದ ಹೊರಬಂದು ಮತ್ತೆ ಬಿಜೆಪಿ ಸಖ್ಯಕ್ಕೆ ಹಾತೊರೆದು, ಒಂದೇ ದಿನದಲ್ಲಿ ರಾಜೀನಾಮೆ ನೀಡಿ, ೯ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ವ್ಯಕ್ತಿ ಅಧಿಕಾರಕ್ಕಾಗಿ ಎಷ್ಟು ಹಾತೊರೆಯುತ್ತಾರೆ ಎಂಬುದು ಇಡೀ ದೇಶವೇ ಬೆರಗಾಗುವಂತೆ ಮಾಡಿತು.
ಲಾಲೂ ಆಲೋಚನೆಗೆ ತಣ್ಣೀರು
ನಿತೀಶ್‌ಕುಮಾರ್ ಅವರನ್ನು ಹೇಗಾದರು ಮಾಡಿ ರಾಜ್ಯದಿಂದ ಹೊರಕ್ಕೆ ಓಡಿಸಿದರೆ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಪಟ್ಟಾಭಿಷೇಕ ಮಾಡಬಹುದೆಂಬ ಲಾಲೂ ಪ್ರಸಾದ್ ಯಾದವ್ ಕುಟುಂಬದ ಆಲೋಚನೆಗೆ ತಣ್ಣೀರು ಎರಚಿದಂತಾಯಿತು.
ನಿತೀಶ್‌ಕುಮಾರ್ ಅವರಿಗೆ ತಮ್ಮ ಖುರ್ಚಿಯ ಜೊತೆ ಜೆಡಿಯು ಪಕ್ಷವನ್ನೂ ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿದ್ದಲ್ಲದೆ, ಐ.ಎನ್.ಡಿ.ಐ.ಎ. ಜೊತೆಗಿನ ಮೈತ್ರಿಯಿಂದ ರಾಜಕೀಯ ಬದುಕೇ ಕೊನೆಗೊಳ್ಳುವ ಭೀತಿ ಆವರಿಸಿತ್ತು.
ನಿತೀಶ್ ಅವರ ಈ ಕುತಂತ್ರ ರಾಜಕಾರಣಕ್ಕೇ ಅವರನ್ನು ’ಪಲ್ಟೂ ರಾಮ್’ ಎಂದು ಲಾಲೂ ಕರೆಯುತ್ತಿದ್ದರು, ಯಾವಾಗ ಯಾರ ಜೊತೆ ಸೇರುತ್ತಾರೆ, ಯಾರಿಗೆ ಕೈಕೊಡುತ್ತಾರೆ ಎಂಬುದು ಗೊತ್ತಾಗುವಷ್ಟರಲ್ಲೇ ಮೈತ್ರಿ ಬದಲಾಗಿರುತ್ತಿತ್ತು.
ನಿತೀಶ್‌ಕುಮಾರ್ ಆಗಾಗ್ಗೆ ಮೈತ್ರಿಕೂಟ ಬದಲಿಸಿ ಮುಖ್ಯಮಂತ್ರಿ ಗಾದಿಯನ್ನು ನಿರಂತರವಾಗಿ ಅನುಭವಿಸಿಕೊಂಡು ಬರುತ್ತಿರುವುದು, ಈ ಮನುಷ್ಯನ ಅಧಿಕಾರ ಲಾಲಸೆಯನ್ನು ಅರಿತ ಬಿಜೆಪಿ ಮತ್ತೆ-ಮತ್ತೆ ಗಾಳ ಹಾಕಿ ತನ್ನ ಉದ್ದೇಶ ಸಾಧಿಸಿಕೊಳ್ಳುತ್ತಿದೆ.
ಐ.ಎನ್.ಡಿ.ಐ.ಎ. ಸ್ಥಾಪನೆಗೂ ಮುನ್ನ ಪ್ರತಿಪಕ್ಷಗಳ ಒಕ್ಕೂಟ ಸ್ಥಾಪನೆಗೆ ದೇಶವನ್ನೆಲ್ಲಾ ಸುತ್ತಾಡಿ ಮೋದಿ ವಿರೋಧಿಗಳನ್ನು ಒಟ್ಟಾಗಿಸಲು ಶ್ರಮಿಸುತ್ತಿದ್ದ ನಿತೀಶ್‌ಕುಮಾರ್, ಒಕ್ಕೂಟದಲ್ಲಿ ಸೂಕ್ತ ನಾಯಕತ್ವ ಸಿಗುತ್ತಿಲ್ಲವೆಂಬ ಬೇಸರದಿಂದ, ಜೊತೆಗೆ ಮುಖ್ಯಮಂತ್ರಿ ಗಾದಿಯನ್ನು ಸುರಕ್ಷಿತ ಮಾಡಿಕೊಳ್ಳಲು ಬೆಳಗಾಗುವಷ್ಟರಲ್ಲಿ ಲಾಲೂ ಮೈತ್ರಿಗೆ ಕೈಕೊಟ್ಟರು.
ಮಲ್ಲಿಕಾರ್ಜುನ ಖರ್ಗೆಗೆ ಶಾಕ್
ಐ.ಎನ್.ಡಿ.ಐ.ಎ. ಒಕ್ಕೂಟದಿಂದ ನಿತೀಶ್ ಹಠಾತ್ತಾಗಿ ಹೊರನಡೆದ ಶಾಕ್‌ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮೋದಿ ವಿರೋಧಿ ನಾಯಕರು ನಡುಗಿಬಿಟ್ಟರು.
ಒಂದೆಡೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಪಕ್ಷ ಸ್ಪರ್ಧಿಸಲಿದೆ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅನ್ನು ಸೀಟು ಹೊಂದಾಣಿಕೆ ಸಾಧ್ಯತೆಯಿಂದ ಹೊರಗಿಟ್ಟಿತು.
ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಐ.ಎನ್.ಡಿ.ಐ.ಎ. ಪ್ರಧಾನಿ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಹೆಸರಿಸಿದ್ದಕ್ಕೆ, ಅನುಮೋದನೆ ನೀಡಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ನಾಯಕರನ್ನು ತಬ್ಬಿಬ್ಬುಗೊಳಿಸಿತು.
ಪಂಜಾಬ್‌ನಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಗೆ ಇದರಿಂದ ದಿಕ್ಕು ತೋಚದಂತಾಯಿತು.
ಕಾಂಗ್ರೆಸ್‌ಗೆ ಕಾಲ್ಕೆಳಗಿನ ನೆಲ ಕುಸಿದ ಅನುಭವ
ಇನ್ನು ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಅವರೊಂದಿಗಿನ ಮಾತುಕತೆ ಆರಂಭಕ್ಕೆ ಮುನ್ನವೇ ಅಖಿಲೇಶ್ ಅವರ ಸಮಾಜವಾದಿ ಪಕ್ಷ ರಾಜ್ಯದ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಹೇಳಿಕೆ ಕಾಂಗ್ರೆಸ್‌ಗೆ ಮತ್ತೊಮ್ಮೆ ಕಾಲ್ಕೆಳಗಿನ ನೆಲ ಕುಸಿದ ಅನುಭವವಾಯಿತು.
ಇನ್ನು ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಧಿನಾಯಕಿ ಮಾಯಾವತಿ ಅವರು ಐ.ಎನ್.ಡಿ.ಐ.ಎ. ಒಕ್ಕೂಟದಲ್ಲಿ ಅಖಿಲೇಶ್ ಇರುವುದನ್ನು ಸಹಿಸಲಾಗದೆ ಹಾಗೂ ತಾವು ಪ್ರಧಾನಿ ಅಭ್ಯರ್ಥಿ ಆಗಲು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಒಕ್ಕೂಟ ಸೇರದಿರುವ ಅವರ ನಿರ್ಧಾರ ಪ್ರತಿಪಕ್ಷಗಳ ನಾಯಕರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿತು.
ಕಳೆದ ಡಿಸೆಂಬರ್ 3 ರಂದು ಪ್ರಕಟಗೊಂಡ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭಾರಿಸಿದ ಜಯಭೇರಿ, 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಅರ್ಧಸತ್ಯವನ್ನು ಹೊರಹಾಕಿತು.
ಎನ್‌ಡಿಎಗೆ ಪೂರ್ಣ ಬಹುಮತ
ಆಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಪೂರ್ಣ ಬಹುಮತದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂಬುದು ಇಡೀ ದೇಶಕ್ಕೆ ಗೊತ್ತಾಗಿ ಬಿಟ್ಟಿತು. ನಂತರದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಂತೂ ಇದನ್ನು ಮತ್ತಷ್ಟು ಪುಷ್ಟೀಕರಿಸಿತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜಯ ನಿಶ್ಚಿತ ಎಂಬುದನ್ನು ಅರಿತ ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರು ’ನಾ-ಮುಂದು, ತಾ-ಮುಂದು’ ಎಂಬಂತೆ ಬಿಜೆಪಿ ದೆಹಲಿ ವರಿಷ್ಠರ ದೋಸ್ತಿಗೆ ಮುಂದಾಗಿದ್ದಲ್ಲದೆ, ’ಅವರು ಹೇಳಿದಷ್ಟು, ಅವರು ಕೊಟ್ಟಷ್ಟು’ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಬೇಷರತ್ ಮೈತ್ರಿಯೊಂದಿಗೆ ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾದರು.
ತೆಲಂಗಾಣ, ಕರ್ನಾಟಕ ಹೊರತುಪಡಿಸಿ ಕಾಂಗ್ರೆಸ್ ಅನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವಷ್ಟು ಸೀಟುಗಳನ್ನು ಹೊಂದಿರುವ ರಾಜ್ಯಗಳೇ ಆ ಪಕ್ಷಕ್ಕಿಲ್ಲ.
ಹೊಸ ಮಿತ್ರರೂ ಇಲ್ಲ, ಇರುವ ಮಿತ್ರರೂ ಜೊತೆಗೆ ಬರುತ್ತಿಲ್ಲ, ನಮ್ಮ ಮಾತು ಕೇಳುತ್ತಿಲ್ಲ ಎಂಬ ಕೊರಗಿನ ಜೊತೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಜನರೂ ಸೇರುತ್ತಿಲ್ಲ, ಕಾರಣ ಈ ಯಾತ್ರೆ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಷ್ಟೇ ಸಾಗುತ್ತಿರುವುದು!
ಆರ್‌ಜೆಡಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಮೇವು ಹಗರಣದ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಈಗಾಗಲೇ ಜೈಲು ಸೇರಿ ಹೊರಬಂದಿದ್ದು, ಈಗ ಅವರ ಪತ್ನಿ ರಾಬ್ದಿ ದೇವಿ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಲಾಲೂ ಪುತ್ರ ತೇಜಸ್ವಿ ಯಾದವ್, ಲಾಲೂ ಪುತ್ರಿ ಮೀಸಾ ಸೇರಿದಂತೆ ಕುಟುಂಬದ ಹಲವು ಸದಸ್ಯರ ಮೇಲೆ ರೈಲ್ವೆಯಲ್ಲಿ ಉದ್ಯೋಗ ನೀಡಲು ಬಡವರ ಭೂಮಿ ಲಪಟಾಯಿಸಿದ ಭ್ರಷ್ಟಾಚಾರ ಆರೋಪಗಳೂ ಕೇಳಿಬರುತ್ತಿದ್ದು, ದಿನ ಬೆಳಗಾದರೆ ಕುಟುಂಬದ ಸದಸ್ಯರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಸಹಾ ಮೇವು ಹಗರಣದಲ್ಲಿ ಜೈಲು ಸೇರುವ ಸ್ಥಿತಿ ನಿರ್ಮಾಣವಾದಾಗ ರಾಜಕೀಯ ಗಂಧ-ಗಾಳಿಯೂ ಅರಿಯದ ತಮ್ಮ ಪತ್ನಿ ರಾಬ್ಡಿ ದೇವಿಯನ್ನೇ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿ, ತೆರೆಮರೆಯಲ್ಲಿ ತಾವೇ ರಾಜ್ಯಭಾರ ಮಾಡಿದ್ದು ಜನ ಇನ್ನೂ ಮರೆತಿಲ್ಲ.
ಹೇಮಂತ್ ಸೊರೇನ್ ಬಂಧನ
ಜಾರ್ಖಂಡ್ ಮುಕ್ತ ಮೋರ್ಛಾ ನಾಯಕ ಹಾಗೂ ಆ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಭೂಗಳ್ಳತನ, ಮನಿ ಲಾಂಡ್ರಿಂಗ್ ಮತ್ತು ಕಲ್ಲಿದ್ದಲು ಗಣಿಗಾರಿಕೆ ಗುತ್ತಿಗೆ ಅಕ್ರಮ ಆರೋಪಗಳನ್ನು ಎದುರಿಸುತ್ತಿದ್ದು, ಜಾರಿ ನಿದೇರ್ಶನಾಲಯದಿಂದ ಬಂಧನಕ್ಕೊಳಗಾಗಿದ್ದು, ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು.
ಹೇಮಂತ್ ಸೊರೇನ್ ತಂದೆ ಶಿಬು ಸೊರೇನ್, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹರಾವ್ ಸರ್ಕಾರಕ್ಕೆ ಬೆಂಬಲ ನೀಡಲು ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿ ಕಾರಾಗೃಹ ವಾಸ ಅನುಭವಿಸಿದ್ದು. ಈಗ ಅವರ ಪುತ್ರ ಹಲವು ಹಗರಣಗಳ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ. ಇದರೊಂದಿಗೆ ಐಎನ್‌ಡಿಐಎ ಒಕ್ಕೂಟದ ಬಹುಪಾಲು ದಿಗ್ಗಜ ನಾಯಕರು ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಕಾಂಗ್ರೆಸ್‌ನ ಅಧಿನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಅಕ್ರಮ ಪರಭಾರೆ ಆರೋಪದಲ್ಲಿ ನ್ಯಾಯಾಲಯದ ಜಾಮೀನು ಪಡೆದಿದ್ದಾರೆ.
ಇನ್ನು ಅಣ್ಣಾ ಹಜಾರೆ ಚಳವಳಿಯಿಂದ ರಾಜಕೀಯ ನೆಲೆ ಕಂಡುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವತಃ ಮದ್ಯ (ಶರಾಬ್) ವಹಿವಾಟು ಅಕ್ರಮ ಆರೋಪ ಪ್ರಕರಣದಲ್ಲಿ ಸಿಲುಕಿದ್ದು, ವಿಚಾರಣೆಗೆ ಹಾಜರಗುವಂತೆ ಈಗಾಗಲೇ ನಾಲ್ಕು ಬಾರಿ ಜಾರಿ ನಿರ್ದೇಶನಾಲಯದ ಸಮನ್ಸ್ ನೀಡಿದೆ.
ಮನೀಷ್ ಸಿಸೋಡಿಯಾ ಜೈಲಿನಲ್ಲಿ
ಇವರ ಸಂಪುಟದಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್, ಸಂಸದ ಸಂಜಯ್ ಸಿಂಗ್ ವಿವಿಧ ಭ್ರಷ್ಟಾಚಾರ ಆರೋಪಗಳಡಿ ಜಾಮೀನು ಸಿಗದೆ ಈಗಾಗಲೇ ಜೈಲಿನಲ್ಲಿದ್ದಾರೆ.
ರಾಷ್ಟ್ರದ ಈ ಎಲ್ಲಾ ರಾಜಕೀಯ ವಿದ್ಯಮಾನಗಳನ್ನು ಗಮನಸಿದರೆ, ಐ.ಎನ್.ಡಿ.ಐ.ಎ. ಮೈತ್ರಿಕೂಟ ಅಕಾಲಿಕ ಮರಣಕ್ಕೆ ತುತ್ತಾಗಿರುವ ಲಕ್ಷಣಗಳು ಕಂಡುಬರುತ್ತಿವೆ. ಸತ್ಯ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ, ಅದನ್ನೇ ಕಾಂಗ್ರೆಸ್ ಕಾಯುತ್ತಿದೆ.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಸದನದ ಅಧಿಕೃತ ಪ್ರತಿಪಕ್ಷದ ಸ್ಥಾನ ಪಡೆಯುವಷ್ಟೂ ಸೀಟುಗಳನ್ನು ಗೆಲ್ಲಲಾಗದ ಕಾಂಗ್ರೆಸ್, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಬೀಗುವುದನ್ನು ಬಿಟ್ಟು, ರಾಷ್ಟ್ರಮಟ್ಟದಲ್ಲಿ ಪಕ್ಷ ಎಂತಹ ಹೀನಾಯ ಸ್ಥಿತಿಗೆ ತಲುಪಿದೆ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವೈಫಲ್ಯ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೋದಿಯ ಮೋಡಿ ಮಾತುಗಳಲ್ಲಿನ ಮರ್ಮವನ್ನು ಮತದಾರರಿಗೆ ತಿಳಿಹೇಳುವ ಬದಲು ವಿರೋಧ ಪಕ್ಷಗಳ ನಾಯಕರು ಸ್ವರಕ್ಷಣೆಗೆ ಹೆಣಗಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ.
ಬಿಜೆಪಿ ವಿರೋಧಿಗಳು 2024 ರ ಲೋಕಸಭಾ ಚುನಾವಣೆ ಹೋರಾಟವನ್ನು ಕೈಬಿಟ್ಟು, 2029 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಹೇಗೆ ಸೋಲಿಸಬೇಕೆಂಬ ತಯಾರಿಯನ್ನು ಈಗಿನಿಂದಲೇ ನಡೆಸುವುದು ಒಳಿತು.
ಹೆಚ್.ಎಂ.ವಿಜಯಕುಮಾರ್
1 comment
[…] ರಾಷ್ಟ್ರ […]