ಬೆಂಗಳೂರು: ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸ್ವಾಗತಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಇದೊಂದು ಉತ್ತಮ ನಿರ್ಧಾರ, ಅಡ್ವಾಣಿ ಅರ್ಹತೆ ಹಾಗೂ ಪರಿಶ್ರಮ ಗುರುತಿಸಿ ಈ ಆಯ್ಕೆ ಮಾಡಲಾಗಿದೆ, ಅಡ್ವಾಣಿಯವರಿಗೆ ಭಾರತ ರತ್ನ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸದಸ್ಯರಿಗೆ ಧನ್ಯವಾದ ಮತ್ತು ಅಡ್ವಾಣಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಅಡ್ವಾಣಿ ಅವರು ಭಾರತದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದು, ಕೇಂದ್ರ ಗೃಹ ಸಚಿವ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಸಮರ್ಥ ಸೇವೆ ಸಲ್ಲಿಸಿದ್ದಾರೆ, ಅವರ ಸಂಸದೀಯ ನಡೆ ಎಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದು ವಿಜಯೇಂದ್ರ ಮೆಚ್ಚುಗೆ ಸೂಚಿಸಿದ್ದಾರೆ.
ಕುಮಾರಸ್ವಾಮಿ ಅಭಿನಂದನೆ
ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ’ಭಾರತ ರತ್ನ’ ಗೌರವಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಮುತ್ಸದ್ಧಿ, ಬಿಜೆಪಿ ಭೀಷ್ಮ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭಾರತೀಯ ರಾಜಕಾರಣದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಶೀಲತೆ ಹಾಗೂ ಕಠಿಣ ಪರಿಶ್ರಮಕ್ಕೆ ಅನ್ವರ್ಥವಾದ ಅಡ್ವಾಣಿ ಅವರನ್ನು ಅತ್ಯುನ್ನತ ಗೌರವಕ್ಕೆ ಅರ್ಹ ವ್ಯಕ್ತಿಯಾಗಿ ಗುರುತಿಸಿ ಪುರಸ್ಕಾರ ಘೋಷಿಸಿರುವ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿವಂದನೆಗಳು ಎಂದು ತಿಳಿಸಿದ್ದಾರೆ.