ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು
ಬೆಂಗಳೂರು:ಫೆಬ್ರವರಿ 26 ರಿಂದ ಮಾರ್ಚ್ 3 ರವರೆಗೆ ನಡೆಯಲಿರುವ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೆಚ್ಚವನ್ನು ಮಕ್ಕಳಿಂದಲೇ ವಸೂಲಿ ಮಾಡಲು ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಶ್ನೆ ಪತ್ರಿಕೆ ತಯಾರಿ, ಮುದ್ರಣ, ಸಾಗಣೆ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆಯೇ ಹೇರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ, ಪರೀಕ್ಷಾ ವೆಚ್ಚ ವಸೂಲಿ ಮಾಡುವಂತೆ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದು ಸರ್ಕಾರ ಎಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದಿದ್ದಾರೆ.
ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಪರೀಕ್ಷಾ ವೆಚ್ಚ ವಸೂಲಿ ಮಾಡಿ, ಆ ಮೊತ್ತವನ್ನು ಇಲಾಖೆ ಉಪನಿರ್ದೇಶಕರು (ಆಡಳಿತ), ಇವರ ಖಾತೆಗೆ ಜಮೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಜನತೆಗೆ 5 ಗ್ಯಾರಂಟಿ ಕೊಟ್ಟಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಅಧಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
ಅಕ್ರಮ ಸುಲಿಗೆಯಲ್ಲಿ ’ಸಿದ್ದಹಸ್ತ’ವಾಗಿರುವ ಸರಕಾರ, ಈಗ ಕಾನೂನು ಬದ್ಧವಾಗಿಯೇ ಸುಲಿಗೆಗೆ ಇಳಿದಿದೆ, ಒಂದು ಕೈಯ್ಯಲ್ಲಿ ಕೊಟ್ಟು, ಹತ್ತು ಕೈಗಳಿಂದ ಕಸಿದುಕೊಳ್ಳುತ್ತಿರುವ ರಾಜ್ಯ ಸರಕಾರ, ಮಕ್ಕಳ ಕಿಸೆಗೂ ಕೈ ಹಾಕಿರುವುದು ಲಜ್ಜೆಗೇಡಿತನವಾಗಿದೆ.
ಗ್ಯಾರಂಟಿ ಕೊಟ್ಟು ಬಡವರ ಉದ್ಧಾರ ಮಾಡುತ್ತಿದ್ದೇವೆ ಎಂದು ಬೀಗುವ ಸರಕಾರಕ್ಕೆ ಬಡಮಕ್ಕಳಿಗೆ ಪರೀಕ್ಷೆಗೆ ತಲಾ 50 ರೂ. ಖರ್ಚು ಮಾಡಲು ಗತಿ ಇಲ್ಲವೇ, ಈಗಾಗಲೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರಕಾರ ಬರೆಯ ಮೇಲೆ ಬರೆ ಎಳೆಯುತ್ತಿದೆ, ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
1 comment
[…] ರಾಜಕೀಯ […]