ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಸ್ಪರ್ಧಿಸಲು ಪೈಪೋಟಿ
ಬೆಂಗಳೂರು:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮತ್ತು ಪತ್ರಕರ್ತರು ರಾಜಕೀಯ ಪಕ್ಷಗಳ ಬಾಗಿಲು ತಟ್ಟಿದ್ದಾರೆ.
ಅಧಿಕಾರದಲ್ಲಿರುವವರು ಮತ್ತು ನಿವೃತ್ತಿ ಹೊಂದಿರುವ ಕೆಲವರು ಸಂಸತ್ ಪ್ರವೇಶಿಸಲು ಹಾತೊರೆಯುತ್ತಿದ್ದಾರೆ.
ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆಯುವ ಯತ್ನ
ಸುಮಾರು 14 ಕ್ಕೂ ಹೆಚ್ಚು ಅಧಿಕಾರಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಅದರಲ್ಲೂ ಬಿಜೆಪಿ ಟಿಕೆಟ್‌ಗೆ ಹೆಚ್ಚು ಆಕಾಂಕ್ಷಿಗಳಾಗಿದ್ದು, ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದ್ದಾರೆ.
ಮುಖ್ಯಮಂತ್ರಿ ಕಾರ್ಯಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಯೊಬ್ಬರು ಚುನಾವಣಾ ಕಣಕ್ಕಿಳಿಯಲು ಬಯಸಿದ್ದಾರೆ. ಅವರಿಗೆ ಮಾತ್ರ ಮೀಸಲಾದ ಒಂದು ಕ್ಷೇತ್ರವನ್ನು ಬಿಟ್ಟುಕೊಡಲು ಮೂರು ಪಕ್ಷಗಳಲ್ಲಿ ಒಲವಿದೆ.
ಅವರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೋ ಎಂಬುದನ್ನು ಕಾದುನೋಡಬೇಕು. ಕಳೆದ ಕೆಲವು ಚುನಾವಣೆಗಳಲ್ಲಿ ಕಣಕ್ಕಿಳಿದು ಪರಾಭವಗೊಂಡ ಕೆಲವು ಅಧಿಕಾರಿಗಳು ಮರು ಪ್ರಯತ್ನ ಮಾಡಿದ್ದಾರೆ.
ರಾಜಕೀಯ ಮುಖಂಡರೊಂದಿಗಿನ ಒಡನಾಟ
ಸೇವೆಯಲ್ಲಿ ಕಾರ್ಯ ನಿರ್ವಹಿಸುವಾಗ ರಾಜಕೀಯ ಪಕ್ಷಗಳ ಮುಖಂಡರೊಂದಿಗಿನ ಒಡನಾಟವಿರುತ್ತದೆ. ಅದರಲ್ಲೂ ಕರ್ನಾಟಕ ಮೂಲದ ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳು ಹಿಂದೆ ನೀಡಿವೆ. ಮುಂದೆಯೂ ನೀಡುವ ಸಾಧ್ಯತೆಗಳಿವೆ.
ಮೂರು ಪಕ್ಷಗಳಿಗೂ ಕೆಲವು ಕ್ಷೇತ್ರಗಳಲ್ಲಿ ವರ್ಚಸ್ವಿ ಮತ್ತು ಸಮರ್ಥ ಅಭ್ಯರ್ಥಿಗಳಿಲ್ಲ. ಅಂತಹ ಕ್ಷೇತ್ರಗಳಿಗೆ ಈ ಅಧಿಕಾರಿಗಳನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶ ರಾಜಕೀಯ ಪಕ್ಷಗಳಲ್ಲಿದೆ. ಕಣಕ್ಕಿಳಿಯುವ ಅಧಿಕಾರಿಗಳು ಚುನಾವಣಾ ವೆಚ್ಚವನ್ನು ಅವರೇ ಭರಿಸುಕೊಳ್ಳುತ್ತಾರೆ ಎಂಬ ಲೆಕ್ಕಾಚಾರವಿದೆ.
ಆ ರೀತಿಯ ಸಾಮರ್ಥ್ಯ ಇರುವ ಅಧಿಕಾರಿಗಳೇ ಸ್ಪರ್ಧೆ ಬಗ್ಗೆ ಆಸಕ್ತಿ ತೋರಿರುವುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿದವರಿಗೆ ಕೆಲವು ಸೀಟು ನೀಡುವ ಚಿಂತನೆ ಬಿಜೆಪಿಯಲ್ಲಿದೆ. ಅದನ್ನು ಬಂಡವಾಳ ಮಾಡಿಕೊಳ್ಳಲು ಈ ಅಧಿಕಾರಿಗಳು ಪ್ರಯತ್ನ ಮಾಡಿದ್ದಾರೆ.
ಚುನಾವಣಾ ಕಣಕ್ಕಿಳಿಯಲು ಬಯಸಿ ಸೇವೆಯಲ್ಲಿರುವ ಕೆಲವು ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆಯಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು, ಈ ವರ್ಷ ನಿವೃತ್ತಿಯಾಗುವವರು ಇದ್ದಾರೆ.
ಎರಡನೇ ಹಂತದ ಅಧಿಕಾರಿಗಳು ತೆರೆಮರೆಯಲ್ಲಿ ಯತ್ನ
ಇದರ ಜೊತೆಗೆ ಕಂದಾಯ, ಪೊಲೀಸ್, ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎರಡನೇ ಹಂತದ ಅಧಿಕಾರಿಗಳು ತೆರೆಮರೆಯಲ್ಲಿ ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ದೊರೆಯುತ್ತದೋ ಕಾದು ನೋಡಬೇಕಿದೆ. ಇದರ ನಡುವೆ ರಾಜ್ಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವವರು ಬಿಜೆಪಿ ಟಿಕೆಟ್ ಪಡೆಯಲು ಕದ ತಟ್ಟಿದ್ದಾರೆ.
ಈಗಾಗಲೇ ಒಬ್ಬ ಸಂಪಾದಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಾಲಿಗೆ ಇನ್ನೂ ಐವರು ಪತ್ರಕರ್ತರು ಕಮಲದ ಟಿಕೆಟ್ ಪಡೆಯಲು ಭಾರೀ ಕಸರತ್ತು ಮಾಡಿದ್ದಾರೆ.
ಪತ್ರಕರ್ತರಾಗಿದ್ದ ಪ್ರತಾಪಸಿಂಹ ಎರಡು ಬಾರಿ ಮೈಸೂರಿನ ಸಂಸದರಾಗಿ ಆಯ್ಕೆಗೊಂಡ ನಂತರ ಕೆಲವು ಪತ್ರಕರ್ತರಲ್ಲಿ ಸಂಸತ್ ಪ್ರವೇಶಿಸುವ ಆಸೆ ಇಮ್ಮಡಿಗೊಂಡಿದೆ.