ದೇಹಾರೋಗ್ಯಕ್ಕೆ ಔಷಧ ರಹಿತ ಯೋಗ್ಯ ಚಿಕಿತ್ಸೆ
ಬೆಂಗಳೂರು: ಮುದ್ರೆಗಳು ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಯ ಮೇಲೆ ಪ್ರಭಾವ ಬೀರುವ ಬೆರಳುಗಳ ವಿಶೇಷ ಸಂಯೋಜನೆಗಳಾಗಿವೆ. ಮುದ್ರೆಯ ಸಹಾಯದಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಆತಂಕ ಹಾಗೂ ಆಯಾಸದ ಭಾವನೆಗಳನ್ನು ತೊಡೆದು ಹಾಕಬಹುದು. ಅಲ್ಲದೆ, ಆಂತರಿಕ ಶಕ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಬಹುದಾಗಿದೆ. ಹಾಗಾದರೆ ಮುದ್ರೆ ಎಂದರೇನು? ದೈನಂದಿನ ಅಭ್ಯಾಸ ಮತ್ತು ಯೋಗದಲ್ಲಿ ಮುದ್ರೆಗಳನ್ನು ಸೇರಿಸುವುದು ಹೇಗೆ?
ಸಂಸ್ಕೃತದಲ್ಲಿ “ಮುದ್ರಾ” ಎಂಬ ಪದವು ಸನ್ನೆ ಅಥವಾ ಗ್ರಹಿಕೆ ಎಂಬ ಅರ್ಥ ನೀಡುತ್ತದೆ. ಕೈ ಬೆರಳುಗಳ ಜಿಮ್ನಾಸ್ಟಿಕ್ ಎಂದರೆ ತಪ್ಪಾಗಲಾರದು. ಮುದ್ರಾ ಎಂದರೆ ಲಾಕ್ ಎಂದು ಗ್ರಹಿಸಬಹುದಾಗಿದೆ. ಮುದ್ರೆಗಳಿಗೆ ದೇಹದಲ್ಲಿನ ಶಕ್ತಿಯ ಹರಿವನ್ನು ಮರು ನಿರ್ದೇಶಿಸುವ ಸಾಮರ್ಥ್ಯವಿದೆ. ವಿಭಿನ್ನ ಬೆರಳಿನ ಸ್ಥಾನಗಳು ಶಕ್ತಿಯ ಚಾನಲ್ ಗಳನ್ನು ತೆರೆಯುತ್ತವೆ. ಹಾಗೆಯೇ ಮುಚ್ಚುತ್ತವೆ ಕೂಡ.
ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸುತ್ತವೆ. ನೃತ್ಯದಲ್ಲಿ ಬಳಸಿದಾಗ ಮುದ್ರೆಗಳು ಸೌಂದರ್ಯದ ಆನಂದವನ್ನು ತರುತ್ತವೆ. ಕುಲಾರ್ಣವ ಮಂತ್ರವು , ಮುದ್ರಾ ಎಂಬ ಪದವು ಮಣ್ಣಿನ ಮೂಲದಿಂದ ಬಂದಿದೆ ಎಂದು ಹೇಳುತ್ತದೆ. ಅಂದರೆ, ಆನಂದ ಎಂಬ ಅರ್ಥವನ್ನು ನೀಡುತ್ತದೆ. ಸಾಮಾನ್ಯವಾಗಿ ಮುದ್ರೆಯನ್ನು ಶಾರ್ಟ್ ಕಟ್, ಪರಿಚಲನೆ ಅಥವಾ ಶಕ್ತಿಯ ಸೀಲಿಂಗ್ ಎನ್ನಬಹುದು.
ಅರಿವು ಮತ್ತು ಏಕಾಗ್ರತೆಯ ವೃದ್ಧಿ
ಮುದ್ರೆಯು ಸೂಕ್ಷ್ಮವಾದ ದೈಹಿಕ ಚಲನೆಯಾಗಿದ್ದು, ಮನಃಸ್ಥಿತಿಯನ್ನು ನಮ್ಮೊಳಗಿನ ಲೋಕದ ಗ್ರಹಿಕೆಯನ್ನು ಬದಲಾಯಿಸುವುದಲ್ಲದೆ, ಅರಿವು ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ಕೈನ ಪ್ರತಿಯೊಂದು ಬೆರಳು ನಿರ್ಧಿಷ್ಟ ಶಕ್ತಿಯನ್ನು ಸೂಚಿಸುತ್ತವೆ. ಹೆಬ್ಬೆರಳು ಅಹಂ, ಇಚ್ಛೆ ಮತ್ತು ವಾದವನ್ನು, ತೋರು ಬೆರಳು ಜ್ಞಾನ, ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸವನ್ನು ಸೂಚಿಸಿದರೆ; ಮಧ್ಯದ ಬೆರಳು ತಾಳ್ಮೆ ಮತ್ತು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಕಾರಣವಾಗಿದೆ. ಉಂಗುರದ ಬೆರಳು ಆರೋಗ್ಯ ಮತ್ತು ಚೈತನ್ಯಕ್ಕಾಗಿ, ಕಿರು ಬೆರಳು ವ್ಯಕ್ತಿತ್ವದ ಸೃಜನಶೀಲತೆಯ ಶಕ್ತಿಯನ್ನು ಸೂಚಿಸುತ್ತದೆ.
ಅಷ್ಟೇ ಅಲ್ಲದೆ, ಮುದ್ರೆಗಳು ದೇಹದ ವಿವಿಧ ಭಾಗಗಳು ಮತ್ತು ದೇಹದ ಆಂತರಿಕ ಅಂಗಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತವೆ. ಉದಾಹರಣೆಗೆ ಹೆಬ್ಬೆರಳಿನ ಮೇಲಿನ ತುದಿಯು ತಲೆಯ ಮುಂಭಾಗವನ್ನು ಸೂಚಿಸುತ್ತದೆ. ಉಂಗುರದ ಬೆರಳು ಮತ್ತು ಮಧ್ಯದ ಬೆರಳುಗಳು ಕ್ರಮವಾಗಿ ಬಲ ಮತ್ತು ಎಡಪಾದಗಳಿಗೆ ಸಂಬಂಧಿಸಿವೆ. ಕಿರು ಬೆರಳು ಮತ್ತು ತೋರು ಬೆರಳು ಬಲ ಮತ್ತು ಎಡ ಕೈಗಳಿಗೆ ಸಂಬಂಧಿಸಿವೆ.
ಮುದ್ರೆಗಳನ್ನು ಮಾಡುವುದು ಹೇಗೆ?
ಮೊದಲಿಗೆ ಒಂದು ಪ್ರಯೋಗ ಮಾಡೋಣ. ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳನ್ನು ಒಟ್ಟಿಗೆ ಇರಿಸಿ ಕೆಲವು ನಿಮಿಷಗಳ ಕಾಲ ಆನಂದವಾಗಿರುವಂತೆ ಯೋಚಿಸಿ, ತೋರು ಬೆರಳಿನಿಂದ ಹೆಬ್ಬೆರಳಿಗೆ ಶಕ್ತಿಯು ಹರಿಯುವುದನ್ನು ಅನುಭವಿಸುತ್ತೀರಿ. ಬೆಳಿಗ್ಗೆ ಎದ್ದೇಳುವ ಸಂದರ್ಭದಲ್ಲಿ ಮತ್ತು ಊಟ ಮುಗಿಸಿ ಮಲಗುವ ಮುನ್ನ ಮುದ್ರೆಗಳನ್ನು ಮಾಡಬಹುದು. ಒಂದೇ ಸಮಯದಲ್ಲಿ ಅನೇಕ ಮುದ್ರೆಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಮುದ್ರೆಯನ್ನು ಹಾಕುವುದು ಉತ್ತಮ. 21 ದಿನಗಳವರೆಗೆ ಆ ಮುದ್ರೆಯನ್ನು ಪುನಾರಾವರ್ತಿಸಬೇಕು. ಸಮಸ್ಯೆ ಅಧಿಕವಿದ್ದಾಗ ದಿನಕ್ಕೆ ಮೂರು ಬಾರಿ ಮುದ್ರೆಯನ್ನು ಅಭ್ಯಾಸ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ.
ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ. ನೀವು ಕುಳಿತುಕೊಳ್ಳುವಾಗ, ಮಲಗುವಾಗ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ಕೆಲಸದ ವಿರಾಮಗಳಲ್ಲಿ ಮುದ್ರೆಗಳನ್ನು ಮಾಡಬಹುದು. ಕನಿಷ್ಠ ಎರಡರಿಂದ ಮೂರು ನಿಮಿಷಗಳ ಕಾಲ ಮುದ್ರೆಯನ್ನು ಮಾಡಬೇಕಾಗುತ್ತದೆ. ಪ್ರಾರಂಭಿಸುವ ಮುನ್ನ ಕೈಗಳಿಂದ ಆಭರಣಗಳನ್ನು ತೆಗೆದು ಹಾಕಬೇಕು. ಪದ್ಮಾಸನ ಭಂಗಿ ಅಥವಾ ಸುಖಾಸನ ಹಾಗೂ ಇತರ ಆಸನದಲ್ಲಿ ಕುಳಿತು ಮುದ್ರೆಗಳನ್ನು ಮಾಡಬಹುದು.
ಮುದ್ರೆ ಮಾಡುವ ಸಂದರ್ಭದಲ್ಲಿ ಆರಾಮದಾಯಕ ಮನಃಸ್ಥಿತಿಯಲ್ಲಿರಬೇಕು. ಯಾವುದೇ ಮುದ್ರೆಯಾದರೂ ಆಂತರಿಕ ಶಕ್ತಿಯನ್ನು ಪುನಃ ತುಂಬಲು ಇರುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿಕೊಡುತ್ತದೆ. ಮುದ್ರೆಗಳು ಧ್ವನಿ ಮತ್ತು ಬೆಳಕಿನ ತರಂಗಗಳನ್ನು ಕುಶಲತೆಯಿಂದ ದೇಹದಲ್ಲಿ ಮರು ಸೃಷ್ಟಿಸುತ್ತವೆ ಮತ್ತು ದೇಹದಲ್ಲಿನ ಅಡೆತಡೆಗಳನ್ನು ನಿವಾರಿಸಿ, ಶಕ್ತಿಯನ್ನು ದೇಹದಲ್ಲಿ ಮರು ನಿರ್ದೇಶಿಸುತ್ತವೆ.
ವೈಜ್ಞಾನಿಕವಾಗಿಯೂ ಮುದ್ರೆಗಳು ಮೆದುಳಿನ ಗೋಳಾರ್ಧದ ಸುತ್ತಲೂ ಹುಟ್ಟುವ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತವೆ ಹಾಗೂ ಭೂತಕಾಲದ ತಪ್ಪುಗಳು ಮರುಕಳಿಸದಂತೆ ಭವಿಷ್ಯತ್ತನ್ನು ಸುಂದರಗೊಳಿಸುತ್ತವೆ.
ಮೊದಲಿಗೆ 9 ಇದ್ದ ಮುದ್ರೆಗಳು ಈಗ 180 ಮುದ್ರೆಗಳಾಗಿವೆ
ಸ್ಮರಣಾಶಕ್ತಿಯು ವೃದ್ಧಿಸುತ್ತದೆ. ಮನುಷ್ಯನ ದೇಹ ಮತ್ತು ಮನಸ್ಸಿನ ಅಸಮತೋಲನವನ್ನು ಸರಿಪಡಿಸಿ ಸಹಜವಾದ ನಡವಳಿಕೆಯನ್ನು ರೂಪಿಸುತ್ತದೆ. ಮೊದಲಿಗೆ 9 ಇದ್ದ ಮುದ್ರೆಗಳು ಈಗ 180 ಮುದ್ರೆಗಳಾಗಿದ್ದು, ಪ್ರತಿಯೊಂದು ಮುದ್ರೆಯು ತನ್ನದೇ ಆದ ಚಾನಲ್ ಅನ್ನು ಹೊಂದಿದೆ. ಅದರಿಂದ ದೇಹ ಮನಸ್ಸು ಮತ್ತು ಪ್ರಾಣದ ಮೇಲೆ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ.