ರಾಜ್ಯದ ಹಿತಕ್ಕಾಗಿ ಫೆಬ್ರವರಿ 7 ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಫೆಬ್ರವರಿ 7 ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆ ಯಿಂದ ಕಾಯುತ್ತಿದ್ದೆವು.
ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ ಎಂದರು.
ರಾಜ್ಯಕ್ಕೆ ನಿರಂತರ ಅನ್ಯಾಯ
ಭದ್ರಾ ಯೋಜನೆಗೆ 5300 ಕೋಟಿ ರೂ. ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರಗೆ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ. ಬರಗಾಲ ಪರಿಹಾರದ ಹಣವೂ ಇಲ್ಲ. 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ ಎಂದು ಹೇಳಿದರು.
ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದೇಶದ ಜನರ ಗಮನ ಸೆಳೆಯಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ, ಹಣಕಾಸು ಹಂಚಿಕೆಯಲ್ಲಾಗಿರುವ ತಾರತಮ್ಯ, ಬರಗಾಲದ ಬಗ್ಗೆ ತೋರಿರುವ ಮಲತಾಯಿ ಧೋರಣೆ ಕುರಿತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಶಾಸಕರು, ಮೇಲ್ಮನೆ ಶಾಸಕರು ಭಾಗವಹಿಸುತ್ತಿದ್ದಾರೆ ಎಂದರು.
ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟ
ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಜನರ ಸೇವೆಯನ್ನು ಮಾಡಲು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣವೆಂದರೆ ರಾಜ್ಯಗಳಿಂದ ಬರುವ ತೆರಿಗೆ ಹಣ. ಸೆಸ್, ಪೆಟ್ರೋಲ್ ಡೀಸೆಲ್, ಸರ್ಚಾರ್ಜ್.
ಇವುಗಳಿಂದ ಸಂಗ್ರಹವಾಗುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚನೆಯಾಗಿದೆ. ಸಂವಿಧಾನದ 7 ನೇ ಪರಿಚ್ಛೇಧ ಅದನ್ನು ಸ್ವತಂತ್ರ ಸಂಸ್ಥೆಯಾಗಿಸಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳು ಆಗಿವೆ. ಪ್ರಸ್ತುತ 16 ನೇ ಹಣಕಾಸು ಆಯೋಗ ರಚನೆಯಾಗಿದ್ದು, ಅಧ್ಯಕ್ಷರ ನೇಮಕವಾಗಿದೆ.
14 ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71 ಇದ್ದದ್ದು, 15 ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿಕೆಯಾಯಿತು. ಅಂದರೆ ಶೇ. 1.07 ರಷ್ಟು ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತ ಆಯಿತು. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ನಗದು ಹಂಚಿಕೆಯಲ್ಲಿ 62098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ರಾಜ್ಯಕ್ಕೆ 73,593 ಕೋಟಿ ರೂ.ಗಳು ತೆರಿಗೆ ಪಾಲು ಕಡಿಮೆ
ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇ. 4.71 ರಿಂದ ಶೇ. 3.74 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5495 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಮಧ್ಯಂತರ ಬಜೆಟ್ ನಲ್ಲಿ ಈ ಬಗ್ಗೆ ಶಿಫಾರಸ್ಸು ಮಾಡಿದರು. ಈ ಹಣವೂ ರಾಜ್ಯಕ್ಕೆ ಬರಲಿಲ್ಲ.
ಈ ಮೊತ್ತವನ್ನು ಕೇಂದ್ರ ಸರ್ಕಾರವನ್ನು ಕೇಳಿ ಪಡೆಯಲು ವಿಧಾನಸಭೆಯಲ್ಲಿ ವಿಷಯ ಮಂಡಿಸಿದ್ದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ತಿರಸ್ಕರಿಸಿದರು. ಅಂತಿಮ ವರದಿಯಲ್ಲಿ 3000 ಕೋಟಿ ರೂ. ಫೆರಿಫೆರಲ್ ರಿಂಗ್ ರಸ್ತೆಗೆ, ಕೆರೆಗಳನ್ನು ಅಭಿವೃದ್ಧಿ ಪಡಿಸಲು 3000 ಸೇರಿ 6000 ಕೋಟಿ ರೂ. ಗಳನ್ನು ಹೆಚ್ವರಿಯಾಗಿ ಕೊಡಲು ಶಿಫಾರಸು ಮಾಡಲಾಯಿತು. ಈ ಹಣವೂ ಬರಲಿಲ್ಲ.
ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ 2020-21 ರಿಂದ 2025-26 ರವೆಗಿನ ಅವಧಿಗೆ ರಚನೆಯಾದ 15 ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ ಎಂದರು.
ಅಂತೆಯೇ 2020-21 ಹಾಗೂ 2021-22 ನೇ ಸಾಲಿಗೆ ವಿಶೇಷ ಅನುದಾನ ಕೊಡದೆ ರಾಜ್ಯಕ್ಕೆ 11,495 ಕೋಟಿ ರೂ.ಗಳು ನಷ್ಟವಾಗಿದೆ. ಒಟ್ಟಾರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲಿನಲ್ಲಿ 73,593 ಕೋಟಿ ರೂ.ಗಳು ಕಡಿಮೆಯಾಯಿತು ಎಂದರು.
ಜಿಎಸ್ ಟಿಯಲ್ಲಿ ರಾಜ್ಯಕ್ಕೆ ಅನ್ಯಾಯ
ಜಿಎಸ್ ಟಿ ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ ಶೇ.15 ರಷ್ಟಿತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು ಎಂದರು.