ಒಪ್ಪಂದಕ್ಕೆ ಸಚಿವ ಪಾಟೀಲ್ ಸಮ್ಮುಖದಲ್ಲಿ ಸಹಿ
ಬೆಂಗಳೂರು: ಜರ್ಮನಿಯ ಲಕ್ಸಂಬರ್ಗ್‌ನ ಕೆಎಫ್‌ಡಬ್ಲ್ಯು ಡೆವಲಪ್ಮೆಂಟ್ ಬ್ಯಾಂಕ್ ಮತ್ತು ರಾಜ್ಯ ಸರ್ಕಾರದ ಕೆ-ರೈಡ್ ಸಂಸ್ಥೆ ನಡುವೆ ಮಹತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲು ಯೋಜನೆಗೆ 4,561 ಕೋಟಿ ರೂ. (500 ಮಿಲಿಯನ್ ಯೂರೋ) ಸಾಲ ಒಪ್ಪಂದಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸಮ್ಮುಖದಲ್ಲಿ ಇಂದಿಲ್ಲಿ ಸಹಿ ಹಾಕಲಾಯಿತು.
ಕೆ-ರೈಡ್ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ ಮತ್ತು ಭಾರತದಲ್ಲಿನ ಕೆಎಫ್‌ಡಬ್ಲ್ಯು ಡೆವಲಪ್ಮೆಂಟ್ ಬ್ಯಾಂಕ್ ನಿರ್ದೇಶಕ ವೂಲ್ಫ್ ಮೌತ್ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್, ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಕೆಎಫ್‌ಡಬ್ಲ್ಯು ನಡುವೆ 2023 ರ ಡಿ.15 ರಂದು ಪ್ರಾಥಮಿಕ ಒಪ್ಪಂದವಾಗಿತ್ತು, ಈಗ ಕೆಎಫ್‌ಡಬ್ಲ್ಯು ಮತ್ತು ಯೋಜನೆ ಅನುಷ್ಠಾನ ಹೊಣೆ ಹೊತ್ತ ಕೆ-ರೈಡ್ ನಡುವೆ ಪೂರಕ ಒಪ್ಪಂದ ಮಾಡಿಕೊಳ್ಳಲಾಗಿದೆ, ಯೋಜನೆಯ ಎಲ್ಲಾ ನಾಲ್ಕೂ ಕಾರಿಡಾರ್‌ಗಳ ಕಾಮಗಾರಿ 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ವಿವಿಧ ಕಾಮಗಾರಿಗಳಿಗೆ ಹಣ ಬಳಕೆ
ಶೇ.4ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಜರ್ಮನಿ ಬ್ಯಾಂಕ್ ಸಾಲ ನೀಡುತ್ತಿದೆ, ಈ ಮೊತ್ತದಲ್ಲಿ ಕೆಂಗೇರಿ-ವೈಟ್‌ಫೀಲ್ಡ್ ನಡುವಿನ ಕಾರಿಡಾರ್-3ರ ವ್ಯಾಪ್ತಿಯ ಸ್ಟೇಷನ್ ವರ್ಕ್, ವಯಾಡಕ್ಟ್, ಹೀಳಲಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್-4ರ ವ್ಯಾಪ್ತಿಯ ದೇವನಹಳ್ಳಿ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್‌ಫಾರಂ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರ ಫಲಕ, ಭದ್ರತಾ ಸಾಧನಗಳು ಮತ್ತು ಎಂಎಐ (ಮ್ಯಾನ್ ಮಶೀನ್ ಇಂಟರ್ಫೇಸ್) ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು ಎಂದರು.
ನಗರದಲ್ಲಿ ಸುಗಮ ಸಂಚಾರ ಜಾಲ ಅಭಿವೃದ್ಧಿ ಸರ್ಕಾರದ ಗುರಿಯಾಗಿದ್ದು, ಕಾಲಮಿತಿಯಲ್ಲಿ ಸಬರ್ಬನ್ ರೈಲು ಯೋಜನೆ ಪೂರೈಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು ರಾಜಧಾನಿಯ ಚಹರೆಯನ್ನೇ ಆಮೂಲಾಗ್ರವಾಗಿ ಬದಲಿಸಲಿದೆ. ಬೆಂಗಳೂರು ಜನರ ಜೀವನ ಸುಗಮಗೊಳಿಸುವುದು ಸಬರ್ಬನ್ ರೈಲು ಯೋಜನೆ ಉದ್ದೇಶವಾಗಿದೆ.
ಒಟ್ಟು 15,767 ಕೋಟಿ ರೂ. ವೆಚ್ಚದ ಯೋಜನೆಯು 58 ನಿಲ್ದಾಣಗಳನ್ನು ಹೊಂದಿರಲಿದೆ, 4 ಕಾರಿಡಾರ್‌ಗಳ ಒಟ್ಟು ಉದ್ದ 148 ಕಿ.ಮೀ. ಇರಲಿದೆ.
ಈ ಯೋಜನೆಗೆ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 20ರಷ್ಟು ಹೂಡಿಕೆ ಮಾಡಲಿದ್ದು, ಬಾಹ್ಯ ಸಾಲದ ರೂಪದಲ್ಲಿ ಶೇ.60 ರಷ್ಟು ಸಂಪನ್ಮೂಲ ಕ್ರೋಡೀಕರಣ ಮಾಡಲಾಗುವುದು ಎಂದರು.