ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಾಳೆ ಕಾಂಗ್ರೆಸ್ ಸಭೆ
ಬೆಂಗಳೂರು:ಕೇಂದ್ರದ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಈ ಬಾರಿ ಕರ್ನಾಟಕದಿಂದ ರಾಜ್ಯಸಭಾ ಟಿಕೆಟ್ ತಪ್ಪುವ ಸಾಧ್ಯತೆ ಇದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ಮೂರು ಸ್ಥಾನ, ಪ್ರತಿಪಕ್ಷ ಬಿಜೆಪಿಗೆ ಒಂದು ಸ್ಥಾನ ದೊರೆಯಲಿದೆ.
ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರೂ ರಾಷ್ಟ್ರೀಯ ಪಕ್ಷಗಳೂ ಇದುವರೆಗೂ ತಮ್ಮ ಉಮೇದುವಾರರನ್ನು ಹೆಸರಿಸಿಲ್ಲ.
ರಾಜೀವ್ ಚಂದ್ರಶೇಖರ್ ಮೂಲತಃ ಕೇರಳದವರಾದರೂ ಕರ್ನಾಟಕದಿಂದ ಎರಡು ಬಾರಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಈ ಬಾರಿ ಅವರನ್ನು ಕೇರಳದ ಯಾವುದಾದರೂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಬಿಜೆಪಿ ವರಿಷ್ಠರು ಸಲಹೆ ಮಾಡಿದ್ದಾರೆನ್ನಲಾಗಿದೆ.
ಬಿಜೆಪಿಯಲ್ಲಿ ಭಾರೀ ಲಾಬಿ
ರಾಜ್ಯಸಭೆಯ ಒಂದು ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರೀ ಲಾಬಿಯೇ ನಡೆದಿದೆ, ಈ ಸ್ಥಾನಕ್ಕೆ ವಿ.ಸೋಮಣ್ಣ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿಕ್ಷಣ ತಜ್ಞ ಪ್ರಭಾಕರ ಕೋರೆ ಆಕಾಂಕ್ಷಿಗಳಾಗಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚುನಾವಣಾ ಕಣಕ್ಕಿಳಿಯದೆ ರಾಜ್ಯಸಭೆಗೆ ಹೋಗುವ ಇರಾದೆ ಹೊಂದಿದ್ದಾರೆ, ಆದರೆ, ವರಿಷ್ಠರು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿಲ್ಲ.
ಈ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿಂದು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಕಾಂಗ್ರೆಸ್ ತಮಗೆ ಲಭ್ಯವಾಗುವ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಾಳೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮುಖಂಡರು ಸಭೆ ಸೇರಲಿದ್ದಾರೆ.
ಕಾಂಗ್ರೆಸ್‌ನಲ್ಲಿ ತೆರೆಮರೆ ಯತ್ನ
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ವರಿಷ್ಠರು ಒಲವು ತೋರಿದ್ದರೂ ಇಲ್ಲಿನ ನಾಯಕರು ಮಾತ್ರ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆರೆಮರೆಯಲ್ಲಿ ಯತ್ನಿಸಿದ್ದಾರೆ.
ಈ ಮಧ್ಯೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌ನ ಹಾಲಿ ಮೂವರು ರಾಜ್ಯಸಭಾ ಸದಸ್ಯರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ಸಯ್ಯದ್ ನಾಸಿರ್ ಹುಸೇನ್ ಅವರಿಗೆ ಮತ್ತೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಜೆ.ಸಿ.ಚಂದ್ರಶೇಖರ್ ಹಾಗೂ ಡಾ. ಎಲ್.ಹನುಮಂತಯ್ಯ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ.
ಚಂದ್ರಶೇಖರ್ ಕೆಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಮೂಲಕ ಮತ್ತೆ ರಾಜ್ಯಸಭೆ ಪ್ರವೇಶಿಸಲು ಹರಸಾಹಸ ನಡೆಸಿದ್ದಾರೆ.
ಕರ್ನಾಟಕಲ್ಲಿ ಕಾಂಗ್ರೆಸ್‌ಗೆ ದಕ್ಕುವ ಮೂರು ಸ್ಥಾನಗಳಲ್ಲಿ ಒಂದನ್ನು ಮಹಿಳೆಯರಿಗೆ ನೀಡುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ. ನಾಳಿನ ಸಭೆ ನಂತರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.