ರಾಜ್ಯ ಉಸ್ತುವಾರಿ ನಿಯಂತ್ರಣಕ್ಕೆ ಪಟ್ಟು
ಬೆಂಗಳೂರು:ಆಡಳಿತದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ರಾಜ್ಯ ಉಸ್ತುವಾರಿಯಿಂದ ವಿಮುಕ್ತಿಗೊಳಿಸಿ, ಇಲ್ಲವೇ, ನಿಯಂತ್ರಣದಲ್ಲಿಡಿ ಎಂದು ಸಿದ್ದರಾಮಯ್ಯ ಬೆಂಬಲಿಗ ಪರಿಶಿಷ್ಟ ಜಾತಿ ವರ್ಗ ಮತ್ತು ಪರಿಶಿಷ್ಟ ವರ್ಗದ ಸಚಿವರು ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಾ, ಪಕ್ಷದ ನೇಮಕಾತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಇವರ ಈ ಕೃತ್ಯದಿಂದ ಉತ್ತಮ ಆಡಳಿತ ನೀಡಲು ನಮಗೆ ಕೆಲವೆಡೆ ಅಡ್ಡಿ ಉಂಟಾಗುತ್ತಿದೆ, ಪಕ್ಷ ಸಂಘಟನೆ ಮತ್ತು ಆಡಳಿತದ ಉಸ್ತುವಾರಿ ಜವಾಬ್ದಾರಿಯನ್ನು ನಿಭಾಯಿಸಬೇಕೇ ಹೊರತು ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುವುದಲ್ಲ ಎಂದಿದ್ದಾರೆ.
ಕೆ.ಎಚ್.ಮುನಿಯಪ್ಪ ನಿವಾಸದಲ್ಲಿ ಸಭೆ
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಉಪಹಾರ ಕೂಟಕ್ಕೆ ಸೇರಿ ತಮ್ಮ ಸಮಾಜಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಉಪಹಾರ ಕೂಟದಲ್ಲಿ ಮುನಿಯಪ್ಪ ಅಲ್ಲದೆ, ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎನ್. ರಾಜಣ್ಣ, ಆರ್.ಬಿ. ತಿಮ್ಮಾಪುರ ಭಾಗವಹಿಸಿದ್ದರು. ಅಲ್ಲದೆ ಆ ಸಮಾಜಕ್ಕೆ ಸೇರಿದ ಕೆಲವು ಹಿರಿಯ ಶಾಸಕರೂ ಉಪಹಾರ ಕೂಟದಲ್ಲಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 7 ಮೀಸಲು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ನಾವು ಹೇಳಿದವರಿಗೇ ನೀಡಬೇಕು.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಮೂರು ಸ್ಥಾನ ದೊರೆಯಲಿದ್ದು, ಅದರಲ್ಲಿ ಒಂದು ಪರಿಶಿಷ್ಟರಿಗೆ ನೀಡಲೇಬೇಕು.
ಕಾರ್ಯಕರ್ತರಿಗೂ ಅಧಿಕಾರ ನೀಡುವ ತೀರ್ಮಾನ
ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರಿಗೂ ಅಧಿಕಾರ ನೀಡುವ ತೀರ್ಮಾನವನ್ನು ರಾಜ್ಯ ಘಟಕ ಕೈಗೊಂಡಿದೆ.
ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ ಅವರ ಅಣತಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ 34 ಕಾರ್ಯಕರ್ತರನ್ನು ಆಯ್ಕೆ ಮಾಡಿ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಪಟ್ಟಿ ಸಿದ್ಧಪಡಿಸಿದೆ.
ಈ ಪಟ್ಟಿಗೆ ವರಿಷ್ಠರ ಅನುಮತಿ ಇದುವರೆಗೂ ದೊರೆತಿಲ್ಲ, ಇದಕ್ಕೆ ರಾಜ್ಯ ಉಸ್ತುವಾರಿಯೇ ಕಾರಣ ಎಂದು ಸಭೆ ಪರಿಗಣಿಸಿದೆ.
ತಮಗೆ ಬೇಕಾದವರನ್ನು ಸೇರಿಸಿದ್ದಾರೆ
ರಾಜ್ಯ ಘಟಕ ಕಳುಹಿಸಿದ ಪಟ್ಟಿಯಲ್ಲಿ 9 ಮಂದಿಯನ್ನು ಬದಲಿಸಿ ಸುರ್ಜೇವಾಲ ತಮಗೆ ಬೇಕಾದವರನ್ನು ಸೇರಿಸಿದ್ದಾರೆ.
ಈ ವ್ಯಕ್ತಿಗಳು ಪಕ್ಷದಲ್ಲಿ ಸಕ್ರಿಯರಾಗಿಲ್ಲ, ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವವರಿಗೆ ಮಣೆ ಹಾಕಲಾಗಿದೆ.
ವರಿಷ್ಠರೇ ಆಡಳಿತದಲ್ಲಿ ಮತ್ತು ನೇಮಕಾತಿ ವಿಚಾರದಲ್ಲಿ ಮೂಗು ತೂರಿಸಿದರೆ, ನಮಗೇನು ಕೆಲಸ ಎಂದು ಸಭೆಯಲ್ಲಿದ್ದವರು ಪ್ರಶ್ನಿಸಿದ್ದಾರೆ.
ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು, ಶುಕ್ರವಾರ ಸಂಜೆ ಹಿಂತಿರುಗಿದ ನಂತರ ಇಲ್ಲವೇ ಶನಿವಾರ ಬೆಳಗ್ಗೆ ಭೇಟಿ ಮಾಡಿ ಸುರ್ಜೇವಾಲ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು ಮತ್ತು ನೀವು ವರಿಷ್ಠರ ಗಮನಕ್ಕೆ ತರಬೇಕು ಎಂದು ಮನವಿ ಮಾಡಲಿದ್ದಾರೆ.