ಚಿನ್ ಮುದ್ರೆಯಿಂದ ಆರೋಗ್ಯ ವೃದ್ಧಿ
ಮುದ್ರೆಗಳನ್ನು ಮಾಡುವಾಗ ಎರಡು ಬೆರಳ ತುದಿಗಳನ್ನು ಒಟ್ಟಿಗೆ ಸೇರಿಸಬೇಕು. ಎರಡು ಬೆರಳ ತುದಿಗಳು ಒಟ್ಟಿಗೆ ಸ್ಪರ್ಶಿಸುವ ಮೂಲಕ ದೇಹದಲ್ಲಿನ ನರಗಳು ಚೇತನಗೊಂಡು ಮೆದುಳಿನ ಶಕ್ತಿ ಮರು ನಿರ್ದೇಶನಗೊಳ್ಳುತ್ತದೆ. ಆ ಮೂಲಕ ದೇಹದಲ್ಲಿ ಉತ್ತೇಜನ ಉಂಟಾಗುತ್ತದೆ. ಹಸ್ತದಲ್ಲಿನ ಐದು ಬೆರಳುಗಳು ಐದು ಅಂಶಗಳನ್ನು ನಿರ್ದೇಶಿಸುತ್ತವೆ.
ಹೆಬ್ಬೆರಳು: ಬೆಂಕಿ
ತೋರು ಬೆರಳು: ಗಾಳಿ
ಮಧ್ಯದ ಬೆರಳು: ಆಕಾಶ
ಉಂಗುರದ ಬೆರಳು: ಭೂಮಿ
ಕಿರು ಬೆರಳು :ನೀರು
ಹೀಗೆ ಪಂಚಭೂತಗಳನ್ನು ನಿರ್ದೇಶಿಸುತ್ತವೆ. ಮುದ್ರೆಯನ್ನು ಸಂಸ್ಕೃತದಲ್ಲಿ ”ಮುದಂ ಆನಂದಂ ದದಾತಿ ಇತಿ ಮುದ್ರಾ” ಎಂದು ವ್ಯಾಖ್ಯಾನಿಸಲಾಗಿದೆ. ಅಂದರೆ, ಮುದ್ರೆಯು ಆನಂದವನ್ನು ನೀಡುತ್ತದೆ. ಭಾರತದಲ್ಲಿ ಮುದ್ರೆಗಳನ್ನು ಯೋಗ ಮತ್ತು ಧ್ಯಾನದ ಹೊರತಾಗಿಯೂ ಶಾಸ್ತ್ರೀಯ ನೃತ್ಯಗಳಲ್ಲಿ ಪೂಜೆ ಮಾಡುವಾಗ ಮತ್ತು ತಂತ್ರ ವಿದ್ಯೆಗಳಲ್ಲಿ ಬಳಸಲಾಗುತ್ತದೆ.
ಯಾರು, ಯಾರು ಬಳಸುತ್ತಾರೆ?
ಯೋಗಿಗಳು, ಋಷಿಗಳು, ಶಾಸ್ತ್ರೀಯ ನೃತ್ಯಗಾರರು ಹಾಗೂ ಆಯುರ್ವೇದ ವೈದ್ಯರು ಬಳಸುತ್ತಾ ಬಂದಿದ್ದಾರೆ. ತಂತ್ರ ವಿದ್ಯೆಗಳಲ್ಲಿ ದೇವತೆ ಮೆಚ್ಚಿಸಲು ಬಳಸಲಾಗುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ ಮುದ್ರೆಗಳನ್ನು ಸಂದೇಶಗಳನ್ನು ತಿಳಿಸಲು ಇರುವ ಅಭಿವ್ಯಕ್ತಿ ವಿಧಾನವೆಂದು ತಿಳಿಸಿದ್ದಾನೆ.
ಆಯುರ್ವೇದದಲ್ಲಿ ರೋಗಗಳನ್ನು ಅಳಿಸಿ ಹಾಕಲು ದೇಹದ ಆರೋಗ್ಯದ ಸಮತೋಲನ ಕಾಪಾಡಲು ಮುದ್ರೆಗಳನ್ನು ಬಳಸಲಾಗುತ್ತದೆ. ಆದರೆ, ಯೋಗ ಮತ್ತು ಧ್ಯಾನದಲ್ಲಿ ಕೆಲವು ಧನಾತ್ಮಕ ಫಲಿತಾಂಶ ಪಡೆಯಲು ಮುದ್ರೆಗಳನ್ನು ಬಳಸಲಾಗುತ್ತದೆ. ಮುದ್ರೆಗಳನ್ನು ಎರಡು ವಿಧವಾಗಿ ವಿಂಗಡಿಸಿಕೊಳ್ಳಬಹುದು.
- ಹಸ್ತ ಮುದ್ರೆಗಳು
- ಅಂಗ ಮುದ್ರೆಗಳು (ಹಸ್ತ ಮುದ್ರೆಗಳನ್ನು ಹೊರತುಪಡಿಸಿ)
ಹಸ್ತ ಮುದ್ರೆಗಳೆಂದರೆ, ಬೆರಳುಗಳನ್ನು ಬಳಸಿ ಮಾಡುವ ಸಾಂಕೇತಿಕ ಚಿಹ್ನೆಗಳಾಗಿವೆ. ಇವುಗಳಲ್ಲೂ ಐದು ವಿಧಗಳನ್ನು ಗುರುತಿಸಬಹುದು.
1.ಭರತನಾಟ್ಯ ಮುದ್ರೆಗಳು
2. ತತ್ವ ಮುದ್ರೆಗಳು
3. ತಂತ್ರ ಮುದ್ರೆಗಳು
4. ದೇವತಾ ಮುದ್ರೆಗಳು
5. ಯೋಗ ಮತ್ತು ಧ್ಯಾನ ಮುದ್ರೆಗಳು
ಯೋಗ ಮತ್ತು ಧ್ಯಾನ ಮುದ್ರೆಗಳಲ್ಲಿ ಮೊದಲಿಗೆ ಚಿನ್ ಮುದ್ರೆಯ ಅರ್ಥ, ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಚಿನ್ ಮುದ್ರೆ : ಚಿನ್ ಎಂಬ ಪದವು ಸಂಸ್ಕೃತದ ಚಿತ್ತ್ ಎಂಬ ಪದದಿಂದ ಬಂದಿದೆ. ಚಿತ್ ಎಂದರೆ ಪ್ರಜ್ಞೆ, ಪ್ರಜ್ಞೆಯ ಸ್ವರೂಪ ಆನಂದ. ಆದ್ದರಿಂದ ಚಿನ್ ಮುದ್ರೆ ಪ್ರಜ್ಞೆಯ ಆನಂದಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ಇದನ್ನು ಚಿನ್ ಮುದ್ರಾ, ಪ್ರಜ್ಞಾ ಮುದ್ರಾ ಎಂದು ಕರೆಯುವುದುಂಟು. ಈ ಮುದ್ರಾವನ್ನು ಯೋಗ ಭಂಗಿಗಳಾದ ಸಿದ್ಧಾಸನ, ಸುಖಾಸನ, ಪದ್ಮಾಸನಗಳಲ್ಲಿ ಕುಳಿತು ಮಾಡುತ್ತಾರೆ.
ಚಿನ್ ಮುದ್ರೆ ಮಾಡುವುದು ಹೇಗೆ?
ಧ್ಯಾನ ಮಾಡುವವರು ತಮಗೆ ಅನುಕೂಲಕರ ಭಂಗಿಯಲ್ಲಿ ಕುಳಿತುಕೊಂಡು ದೇಹವನ್ನು ನೇರವಾಗಿ ಇರಿಸಿಕೊಳ್ಳಬೇಕು. ತಲೆ, ಕುತ್ತಿಗೆ, ದೇಹ ನೇರ ಸಾಲಿನಲ್ಲಿ ಇರಬೇಕು. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ತೊಡೆಗಳ ಮೇಲೆ ಇರಿಸಿ ಅಂಗೈಗಳು ಮೇಲ್ಮುಖವಾಗಿರುವಂತೆ ನೋಡಿಕೊಳ್ಳಬೇಕು. ನಂತರ ನಿಮ್ಮ ತೋರು ಬೆರಳನ್ನು ನಿಮ್ಮ ಹೆಬ್ಬೆರಳಿನ ತುದಿಗೆ ಮಡಚಿ ಮತ್ತು ತೋರು ಬೆರಳಿನ ತುದಿಯಿಂದ ಅದನ್ನು ವೃತ್ತವಾಗಿ ರೂಪಿಸಿ ಸ್ಪರ್ಶಿಸುವಂತೆ ನೋಡಿಕೊಳ್ಳಬೇಕು. ಇತರ ಬೆರಳುಗಳು ನೇರವಾಗಿ ಹತ್ತಿರವಿರುವ ಹಾಗೆ ಇರಿಸಿ. ಉಸಿರು ಮತ್ತು ಆಲೋಚನೆ ಏಕಾಗ್ರತೆಯಿಂದ ಕೂಡಿರಬೇಕು.
ಚಿನ್ ಮುದ್ರೆಯ ಪ್ರಯೋಜನಗಳು
ಧ್ಯಾನದ ಉತ್ತುಂಗ ಸ್ಥಿತಿಯನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ. ಚಿನ್ ಮುದ್ರೆಯು ಅರಿವು ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಪ್ರಾಣಶಕ್ತಿ ದೇಹದಲ್ಲೇ ಉಳಿಯುವಂತೆ ಗಮನ ಹರಿಸುತ್ತದೆ. ಮನಃಶಾಂತಿಯನ್ನು ಹೆಚ್ಚಿಸುತ್ತದೆ. ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಒತ್ತಡವನ್ನು ನಿಯಂತ್ರಿಸುತ್ತದೆ. ಈ ಮುದ್ರೆಯು ದ್ವೈತ ತತ್ವವನ್ನು ಪ್ರತಿನಿಧಿಸುತ್ತದೆ. ಹೆಚ್ಚಾಗಿ ಯೋಗಿಗಳು ಈ ಮುದ್ರೆಯನ್ನು ಮಾಡುತ್ತಾರೆ.
ಚಿನ್ ಮುದ್ರೆಯನ್ನು ಮಾಡದ ಯೋಗಿಗಳಿಲ್ಲ. ಏಕೆಂದರೆ ಯೋಗ ಮತ್ತು ಧ್ಯಾನದಲ್ಲಿ ಉತ್ತುಂಗದ ಹಂತ ತಲುಪಲು ಸಹಾಯ ಮಾಡುವ ಬೆರಳಿನ ಸ್ಥಾನಗಳಾಗಿವೆ. ಚಿನ್ ಮುದ್ರೆಯು ಸರಳವಾದ ಮತ್ತು ಸಾಮಾನ್ಯವಾಗಿ ಬಳಸುವ ಮುದ್ರೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಬೌದ್ಧ ಸನ್ಯಾಸಿಗಳು ಈ ಮುದ್ರೆ ಬಳಸುತ್ತಾರೆ. ಭರತನಾಟ್ಯದಲ್ಲಿ ಬಳಸುವ ಹಂಸಯಂ ಮುದ್ರೆಯು ಚಿನ್ ಮುದ್ರೆಯನ್ನು ಹೋಲುತ್ತದೆ. ಕೆಲವು ಸಂಶೋಧನೆಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಚಿನ್ ಮುದ್ರೆ ಸಹಾಯಕವೆಂದು ತಿಳಿಸುತ್ತವೆ. ಯೋಗಾಭ್ಯಾಸದ ಜೊತೆಗೆ ಪ್ರತಿದಿನ ಚಿನ್ ಮುದ್ರೆಯನ್ನು ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕಶಕ್ತಿ ಅಧಿಕವಾಗುತ್ತದೆ.
ಕ್ಯಾನ್ಸರ್ ನಂತಹ ರೋಗಿಗಳು ಚಿನ್ ಮುದ್ರೆಯನ್ನು ಪ್ರತಿದಿನ 15ರಿಂದ 20 ನಿಮಿಷ ಅಭ್ಯಾಸ ಮಾಡುವುದರಿಂದ ರೋಗದಿಂದ ಮುಕ್ತಿ ಪಡೆಯಬಹುದು. ಫೈಬ್ರೋಸಿಸ್ ನಂತಹ ಕಾಯಿಲೆಗಳು ಕೂಡ ಗುಣಮುಖವಾಗುವ ಸಾಧ್ಯತೆಗಳಿವೆ. ಆದರೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಈ ಮುದ್ರೆ ಮಾಡುವ ಮುನ್ನ ಜಾಗರೂಕರಾಗಿರಬೇಕು. ವೃತ್ತಿಪರರ ಮಾರ್ಗದರ್ಶನದೊಂದಿಗೆ ಮಾಡುವುದು ಒಳ್ಳೆಯದು.
