ಕಾಂಗ್ರೆಸ್ ಆಡಳಿತದಲ್ಲಿ 90 ಮಂದಿಗೆ ಸಂಪುಟ ದರ್ಜೆ ಭಾಗ್ಯ
ಬೆಂಗಳೂರು:ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ, ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾvನಾಡಿದ ಅವರು, ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ, 90 ಮಂದಿಗೆ ಸಂಪುಟ ದರ್ಜೆ ನೀಡಿದೆ, ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಮುಖ್ಯಮಂತ್ರಿ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ.
ಕ್ಯಾಬಿನೆಟ್ ದರ್ಜೆ ನೀಡುವುದಕ್ಕೂ ಲೆಕ್ಕ ಬೇಡವೇ
ರಾಜ್ಯದ ಆಡಳಿತದ ಇತಿಹಾಸದಲ್ಲಿ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಿದ ಉದಾಹರಣೆ ಇಲ್ಲ, ಕ್ಯಾಬಿನೆಟ್ ದರ್ಜೆ ನೀಡುವುದಕ್ಕೂ ಒಂದು ಲೆಕ್ಕ ಬೇಡವೇ, ಉಪಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ, ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ, ಕರ್ನಾಟಕ ಹಣಕಾಸು ಸಂಸ್ಥೆ ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಸರಿಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಬರಕ್ಕೆ ತುತ್ತಾದ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಹಣ ಇದೆ.
ಗ್ಯಾರೆಂಟಿಗಳ ಬಗ್ಗೆ ಸುಳ್ಳು
ಗ್ಯಾರಂಟಿಗಳ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ, ಜನರಿಗೆ ಸರಿಯಾಗಿ ತಲುಪದ ಗ್ಯಾರೆಂಟಿಗಳ ಬಗ್ಗೆ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ.
ಹದಿನೈದು ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ, ಎರಡನೇ ಬಾರಿಗೆ ಮುಖ್ಯಮಂತ್ರಿ ಆದವರು ರಾಜ್ಯಪಾಲರಿಂದ ಮಾಡಿಸುವ ಭಾಷಣವೇ ಇದು, ಇದು ಅತ್ಯಂತ ಕಳಪೆ ಭಾಷಣ.
ಈಗಾಗಲೇ ಜಾರಿ ಮಾಡಿರುವ ಗ್ಯಾರಂಟಿಗಳು ಏನಾಗಿವೆ, ಬೆಂಗಳೂರಿನ ಭಾಗವೇ ಆಗಿರುವ ದೇವನಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಬಸ್ ಇಲ್ಲ, ಮಕ್ಕಳು ಶಾಲೆಗೆ ದಿನವೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ, ಉದ್ಯೋಗ ಕೊಡುತ್ತೇವೆ ಎಂದು ಜಾಹೀರಾತು ಕೊಡುತ್ತಲೇ ಇದ್ದಾರೆ, ಅಷ್ಟು ಜನ ನೇಮಕ, ಇಷ್ಟು ಜನ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ, ಬರೀ ಪ್ರಸ್ತಾವನೆ ಸಲ್ಲಿಸುವುದರಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದೆ.
ರಾಜ್ಯಪಾಲರ ಭಾಷಣದಲ್ಲಿ ಕಾಂತರಾಜ್ ವರದಿಯ ಸದ್ದೇ ಇಲ್ಲ, ವರದಿ ಸ್ವೀಕಾರ ಮಾಡಿ ಜಾರಿ ಮಾಡುತ್ತೇನೆ ಎಂದು ಚಿತ್ರದುರ್ಗದಲ್ಲಿ ಅಬ್ಬರ ಮಾಡಿದ್ದರಲ್ಲ, ಜಯಪ್ರಕಾಶ್ ಹೆಗ್ಡೆ ಅವರಿಂದ ವರದಿಯಲ್ಲಿ ಏನು ಬರೆಸುತ್ತಿದ್ದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.