ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ತರಾಟೆ
ಬೆಂಗಳೂರು:ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ 1.2 ಕೋಟಿಗೂ ಹೆಚ್ಚು ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಮಧ್ಯಮ ವರ್ಗದ ಆರ್ಥಿಕಸ್ಥಿತಿಗೆ ಏರಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ವಿಧಾನಮಂಡಲಕ್ಕೆ ತಿಳಿಸಿದ್ದಾರೆ.
ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿದ್ದರೂ, ಸಂಕಷ್ಟ ಸನ್ನಿವೇಶದಲ್ಲಿ ರಾಜ್ಯ ನೀಡಿದ ನೆರವಿನಿಂದ ಬಡವರು ಮತ್ತು ರೈತರಿಗೆ ತೊಂದರೆಯಾಗಲಿಲ್ಲ ಎಂದರು.
ಐದು ಕೋಟಿಗೂ ಹೆಚ್ಚು ಜನ ಮಧ್ಯಮ ವರ್ಗದ ಸ್ಥಿತಿಗೆ
ನನ್ನ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ನಿರ್ಣಯದಿಂದ ರಾಜ್ಯದ ಐದು ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಏರಿರುವುದು ಜಾಗತಿಕ ದಾಖಲೆಯಾಗಿದೆ.
ಖಾತರಿ ಯೋಜನೆಗಳ ಮೂಲಕ ಜನರ ಜೀವನದಲ್ಲಿ ಪರೋಕ್ಷವಾಗಿ ಗಮನಾರ್ಹ ಬದಲಾವಣೆಗಳಾಗಿವೆ, ರಾಜ್ಯದಲ್ಲಿ ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದಿದ್ದಾರೆ.
ರಾಜ್ಯಪಾಲರ ಮೂಲಕ ಗ್ಯಾರಂಟಿ ಯೀಜನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವ ಸರ್ಕಾರ ಕೇಂದ್ರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ ರಾಷ್ಟ್ರದಲ್ಲೇ ಮಾದರಿ ರಾಜ್ಯ
ಮುಂದುವರೆದು ಮಾತನಾಡಿದ ರಾಜ್ಯಪಾಲರು, ಕರ್ನಾಟಕವು ರಾಷ್ಟ್ರದಲ್ಲಿಯೇ ಒಂದು ಮಾದರಿ ರಾಜ್ಯ, ಇಲ್ಲಿ ಜಾರಿಗೆ ತರುವ ಹಲವು ಪ್ರಗತಿಪರ ಯೋಜನೆಗಳು ವಿವಿಧ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ತಿಳಿಸಿದ್ದಾರೆ.
ಸರ್ಕಾರ ತಂದಿರುವ ಪಂಚ ಯೋಜನೆಗಳು ಕರ್ನಾಟಕದ ಸಮಸ್ತ ಜನತೆಯ ಪಾಲಿಗೆ ಸಂತೃಪ್ತಿಯ ಮತ್ತು ನೆಮ್ಮದಿಯ ನಾಳೆಗಳನ್ನು ತರುವ ಉದ್ದೇಶ ಹೊಂದಿವೆ. ನಮ್ಮ ನೀತಿಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗಿದೆ.
ಜನ ಕೇಂದ್ರಿತವು ಹಾಗೂ ಅಭಿವೃದ್ಧಿ ಪರವೂ ಆದ ನನ್ನ ಸರ್ಕಾರವು ರಚನೆಯಾಗಿ ಕೇವಲ ಎಂಟು ತಿಂಗಳಲ್ಲಿಯೇ ಗಮನಾರ್ಹವಾದ ಸಾಧನೆ ಮಾಡಿದೆ.
ಯೋಜನೆಗಳು ಒಂದು ಜಾತಿ, ಪ್ರದೇಶಕ್ಕೆ ಇಲ್ಲವೆ ಧರ್ಮಕ್ಕೆ ಸೀಮಿತವಾಗದೆ, ನಾಡಿನಲ್ಲಿರುವ ಎಲ್ಲ ರೀತಿಯ ಅರ್ಹ ಜನರಿಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ತಲುಪುತ್ತಿವೆ.
3.5 ಕೋಟಿ ಮಹಿಳೆಯರು ಉಚಿತ ಪ್ರಯಾಣ
ಶಕ್ತಿ ಯೋಜನೆಯಿಂದ ಇದುವರೆಗೂ 3.5 ಕೋಟಿ ಮಹಿಳೆಯರು ಜಾತಿ, ಧರ್ಮ ಭೇದವಿಲ್ಲದೆ 150 ಕೋಟಿಗೂ ಹೆಚ್ಚು ಟ್ರಿಪ್‌ಗಳಲ್ಲಿ ಉಚಿತ ಪ್ರಯಾಣಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಐದು ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರಂತೆ ಐದು ಕೆಜಿ ಅಕ್ಕಿಯ ಹಣವನ್ನು ಫಲಾನುಭವಿ ಖಾತೆಗೆ ವರ್ಗಾಯಿಸಲಾಗಿದೆ.
ಕಳೆದ ಏಳು ತಿಂಗಳಲ್ಲಿ 4,595 ಕೋಟಿ ರೂ. ಅರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಿ ಅವರ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆತ್ತಲಾಗಿದೆ.
ಇನ್ನು, ಗೃಹಜ್ಯೋತಿ ಯೋಜನೆಯಡಿ 1.60 ಕೋಟಿ ಗ್ರಾಹಕರಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆಯಡಿ 11,037 ಕೋಟಿ ರೂ. ವರ್ಗಾವಣೆ
ಗೃಹಲಕ್ಷ್ಮೀ ಯೋಜನೆಯಡಿ 1.17 ಕೋಟಿ ಮಹಿಳೆಯರಿಗೆ ಮಾಸಿಕ 2,000 ರೂ.ನಂತೆ ಅವರ ಖಾತೆಗಳಿಗೆ 11,037 ಕೋಟಿ ರೂ. ವರ್ಗಾಯಿಸಲಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಜನರ ಕೈಸೇರಿದ ಹಣ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ, ಒಂದೆಡೆ ರಾಜ್ಯಕ್ಕೆ ದೇಶೀಯ ಮತ್ತು ವಿದೇಶೀಯ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದರಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹದಲ್ಲೂ ಹೆಚ್ಚಳವಾಗಿದೆ ಎಂದಿದ್ದಾರೆ.