ಬೆಂಗಳೂರು:ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾವಾದಿ ಅಭಿಷೇಕ್ ಸಿಂಘ್ವಿ, ಎಐಸಿಸಿ ವಕ್ತಾರ ಅಜಯ್ ಮಾಕೆನ್, ಇವರಿಬ್ಬರಲ್ಲಿ ಒಬ್ಬರು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ ೨೭ ರಂದು ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಸಂಖ್ಯಾಬಲದ ಮೇಲೆ ಮೂರು ಸ್ಥಾನಗಳು ಲಭ್ಯವಾಗಲಿವೆ.
ಹೊಸಮುಖಗಳಿಗೆ ಅವಕಾಶ
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವ ಎಐಸಿಸಿ, ಹೊಸಮುಖಗಳಿಗೆ ಅವಕಾಶ ನೀಡಲು ಮುಂದಾಗಿದೆ ಎನ್ನಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಬೆಳಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದ್ದು ಒಂದು ಸ್ಥಾನವನ್ನು ಎಐಸಿಸಿ ದೆಹಲಿ ನಾಯಕರಿಗೆ ಮೀಸಲಿಟ್ಟಿದ್ದು ಉಳಿದ ಎರಡನ್ನು ರಾಜ್ಯದವರಿಗೆ ಬಿಟ್ಟುಕೊಟ್ಟಿದೆ.
ರಾಷ್ಟ್ರದ ವಿವಿಧ ರಾಜ್ಯಗಳಿಂದ ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭ್ಯವಾಗುತ್ತಿಲ್ಲ.
ಒಂದು ಸ್ಥಾನ ಎಐಸಿಸಿ ಪ್ರಮುಖರಿಗೆ
ಹೀಗಾಗಿ ಕರ್ನಾಟಕದಿಂದ ಒಂದು ಸ್ಥಾನಕ್ಕೆ ಎಐಸಿಸಿಯ ಪ್ರಮುಖರಿಗೆ ಅವಕಾಶ ಮಾಡಿಕೊಡುತ್ತಿದೆ. ಈ ಎರಡು ಸ್ಥಾನಗಳಿಗೆ ಹಲವರ ಹೆಸರುಗಳು ಕೇಳಿ ಬಂದಿದ್ದು, ಪ್ರಸ್ತುತ ನಿವೃತ್ತಿಯಾಗಲಿರುವ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಎಲ್.ಹನುಮಂತಯ್ಯ ಅವರು ಪುನಃ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರೂ ಪಕ್ಷದ ವರಿಷ್ಟರು ಅವರಿಗೆ ಮಣೆ ಹಾಕುವ ಸಾಧ್ಯತೆ ಕಡಿಮೆ.
ನಾಸಿರ್ ಹುಸೇನ್ ಅವರು ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದು ಈ ಆಧಾರ ಮೇಲೆ ಮರಳಿ ಟಿಕೆಟ್‌ಗೆ ಲಾಬಿ ಮಾಡುತ್ತಿರುವರಾದರೂ ದೆಹಲಿ ಮೂಲಗಳ ಪ್ರಕಾರ, ಈ ಯತ್ನಕ್ಕೆ ಮನ್ನಣೆ ದೊರೆಯುವ ಸಾಧ್ಯತೆ ಕಡಿಮೆ ಇದೆ.
ಈ ಮಧ್ಯೆ ಹಿರಿಯ ನಾಯಕ, ಮಾಜಿ ಸಚಿವ ಬಿ.ಎಲ್.ಶಂಕರ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದು, ಈ ವಿಷಯದಲ್ಲಿ ತಮಗೆ ಒಲವು ಇದೆಯಾದರೂ ವರಿಷ್ಠರ ತೀರ್ಮಾನ ಅಂತಿಮ ಎಂದು ಹೇಳಿದ್ದಾರೆ.
ಮೂರು ಸ್ಥಾನಗಳಿಗೆ ಲಾಬಿ
ರಾಜ್ಯಸಭೆಯ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಲಾಬಿ ನಡೆಯುತ್ತಿರುವ ಬೆನ್ನಲ್ಲೇ ಇಂದು ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ರಾಜ್ಯಸಭೆಯ ಮೂರು ಸ್ಥಾನಗಳಿಗೆ ಯಾರು ಅಭ್ಯರ್ಥಿಗಳಾಗಬೇಕು ಎಂಬ ಸಂಬಂಧ ಈ ನಾಯಕರು ನಡೆಸಲಿರುವ ಚರ್ಚೆ ನಂತರ ಪಕ್ಷದ ವರಿಷ್ಠರಿಗೆ ಶಿಫಾರಸು ಪಟ್ಟಿ ರವಾನೆಯಾಗಲಿದೆ.