ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡು ಯುವಜನರು ಕೆಲಸ ಇಲ್ಲದಂತಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕಿಡಿಕಾರಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನೆಮಿ ವರದಿ ಹೊರಬೀಳುತ್ತಿದ್ದಂತೆ ಇದನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಅವರು ಸರಣಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರುದ್ಯೋಗ ಸಮಸ್ಯೆ ಶೇಕಡ 10.05ಕ್ಕೆ
ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಶೇಕಡ 5.44 ರಷ್ಟಿದ್ದ ನಿರುದ್ಯೋಗ ಸಮಸ್ಯೆ ಇದೀಗ ಶೇಕಡ 10.05ಕ್ಕೆ ತಲುಪಿದೆ. ಇನ್ನು ವಯೋಮಿತಿ ಆಧಾರದಲ್ಲಿ ನೋಡಿದರೆ 20 ರಿಂದ 24ರ ವಯೋಮಾನದವರು ಶೇಕಡ 43.65 ರಷ್ಟು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ ಮೋದಿ ಅವರು ನಿರುದ್ಯೋಗ ಸಮಸ್ಯೆ ಸೃಷ್ಟಿಸಿದ್ದಾರೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ
ಇನ್ನಾದರೂ ಉದ್ಯೋಗ ಮೇಳದ ನಾಟಕ ನಿಲ್ಲಿಸಿ, ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
2022ರಲ್ಲಿ ವಿಶ್ವಸಂಸ್ಥೆ ಪ್ರಕಟಿಸಿದ ನಿರುದ್ಯೋಗ ಹೆಚ್ಚಳ ಪಟ್ಟಿಯ ಪ್ರಕಾರ ಉದ್ಯೋಗ ಸೃಷ್ಟಿಯಲ್ಲಿ ನಮ್ಮ ದೇಶ ಪಾಕಿಸ್ತಾನಕ್ಕಿಂತಲೂ ಕೆಳಗಿದೆ ಎಂದಿದ್ದಾರೆ.
ಉದ್ಯೋಗ ಮೇಳಗಳಲ್ಲಿ ಕೆಲಸ ಕೊಡಿಸುವ ಜೊತೆಗೆ ಉದ್ಯೋಗಿಗಳಿಗೆ ಬಡ್ತಿ ನೀಡಿ ಅದನ್ನೂ ನೀವು ಲೆಕ್ಕ ಹಾಕಿದ್ದೀರಿ ಎಂಬ ವರದಿಗಳು ಬಂದಿವೆ. ಇದೇ ಕಾರಣಕ್ಕೆ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ಸಮೀಕ್ಷೆಯನ್ನು ನೀವು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 75 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದವು, ನೀವು ಬಂದ ನಂತರ 29 ಲಕ್ಷಕ್ಕೆ ಇಳಿದಿದೆ.
ಅಪರಾಧ ದಾಖಲೆಗಳ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದೇ ನಿಮ್ಮ ಸಾಧನೆಯೇ, ಇನ್ನಾದರೂ ಉದ್ಯೋಗ ಮೇಳದ ನಾಟಕಗಳನ್ನು ಬಿಡಿ, ನೀವು ಕೊಟ್ಟ ಭರವಸೆಯನ್ನು ಏಕೆ ಈಡೇರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.