ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಗಲಿನಲ್ಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಕೊಲೆ, ಸುಲಿಗೆ ನಡೆಯುತ್ತಿವೆ ಎಂದು ವಿಧಾನಸಭೆಯಲ್ಲಿಂದು ಪ್ರತಿಪಕ್ಷಗಳು ಮಾಡಿದ ಆರೋಪ ಭಾರೀ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿತು.
ಸದನ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಹಲವರು ಮಾಡಿದ ಆರೋಪ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶ್ನೋತ್ತರ ವೇಳೆಯನ್ನು ಕೈಗೆತ್ತಿಕೊಳ್ಳಲು ಮುಂದಾದಾಗ ಮಧ್ಯ ಪ್ರವೇಶಿಸಿದ ಅಶೋಕ್, ಹಾವೇರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ, ಶಿವಮೊಗ್ಗದಲ್ಲಿ ಮಚ್ಚು-ಲಾಂಗ್‌ಗಳ ಬ್ಯಾನರ್ ಹಾಕುತ್ತಿದ್ದಾರೆ, ಭಗವಾಧ್ವಜ ಅಳವಡಿಸಲು ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಸೈಬರ್ ಕ್ರೈಮ್‌ಗಳು ಹೆಚ್ಚಾಗಿವೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪ್ರಶ್ನೋತ್ತರ ವೇಳೆಯನ್ನು ಬದಿಗಿರಿಸಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ನಿಯಮಾವಳಿ ಪ್ರಕಾರ ನಡೆಯಲಿ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ವಿರೋಧ ಪಕ್ಷಗಳ ಬೇಡಿಕೆಯಂತೆ ಚರ್ಚೆ ಮಾಡಲು ಅಭ್ಯಂತರ ಇಲ್ಲ, ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ ಎಂದರು.
ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚರ್ಚೆಗೆ ಮೊದಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು.
ಪ್ರಿಯಾಂಕ ಖರ್ಗೆ ಸವಾಲು
ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಡಿಸುವವರು ನೀವೆ, ಇಲ್ಲಿ ಚರ್ಚೆ ಮಾಡುವವರು ನೀವೆ, ರಾಜ್ಯದ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ, ಅದರ ಬಗ್ಗೆಯೂ ಚರ್ಚೆ ಮಾಡೋಣ, ಪಿಎಸ್‌ಐ ನೇಮಕಾತಿ ಹಗರಣದ ಕುರಿತು ನ್ಯಾಯಮೂರ್ತಿ ವೀರಪ್ಪ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ಕುರಿತು ಚರ್ಚೆಯಾಗಲಿ, ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿ ಭಗವಾಧ್ವಜ ಏರಿಸುವುದು ಚರ್ಚೆಯಾಗಲಿ, ಪ್ರಸ್ತಾಪ ಮಾಡಿ ಎಂದು ಸವಾಲು ಹಾಕಿದರು.
ಸುನೀಲ್ ಕುಮಾರ್, ನಾವು ಏನು ಪ್ರಸ್ತಾಪ ಮಾಡಬೇಕು ಎಂಬ ಬಗ್ಗೆ ನೀವು ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದರು. ಈ ವೇಳೆ ಪ್ರಿಯಾಂಕ್ ಖರ್ಗೆ ಮತ್ತು ಸುನೀಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಅಶೋಕ್, ನಮಗೆ ಬುದ್ಧಿ ಹೇಳಲು ಬರಬೇಡಿ, ನಿಮ್ಮ ಇಂಡಿಯಾ ಮಿತ್ರಕೂಟಕ್ಕೆ ಹೇಳಿಕೊಳ್ಳಿ ಎಂದು ತಿರುಗೇಟು ನೀಡಿದರು.
ಕೆಲಕಾಲ ಕಾವೇರಿದ ಚರ್ಚೆ ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್, ಸದಸ್ಯರು ಆರಂಭದ ಹುಮ್ಮಸ್ಸಿನಲ್ಲಿರುತ್ತಾರೆ, ನಿಧಾನಕ್ಕೆ ಸಮ ಪ್ರಮಾಣಕ್ಕೆ ಬರಲಿ, ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂಬ ವಿಚಾರ ಚರ್ಚೆ ಮಾಡಲು ಜೆಡಿಎಸ್‌ನ ಹೆಚ್.ಡಿ.ರೇವಣ್ಣ, ಬಾಲಕೃಷ್ಣ ಮೊದಲು ನಿಲುವಳಿ ಸೂಚನೆ ನೀಡಿದ್ದಾರೆ, ನಂತರ ಬಿಜೆಪಿ ನೀಡಿರುವ ಕಾನೂನು ಸುವ್ಯವಸ್ಥೆ ಸೂಚನೆ ತೆಗೆದುಕೊಳ್ಳೋಣ, ನಿಯಮದ ಪ್ರಕಾರ ಮೊದಲು ಸೂಚನಾ ಪತ್ರ ಕೊಟ್ಟವರಿಗೆ ಅವಕಾಶ ಮಾಡಿಕೊಡಲಾಗುವುದು. ಬಿಜೆಪಿ ಸದಸ್ಯರು ನಾಳೆ ಹೊಸದಾಗಿ ಸೂಚನಾ ಪತ್ರ ಕಳುಹಿಸಲಿ, ಪರಿಶೀಲಿಸುತ್ತೇನೆ ಎಂದರು.
ಸೂಚನಾ ಪತ್ರ ನೀಡಿ
ಅಶೋಕ್ ಹಾಗೂ ಅರಗ ಜ್ಞಾನೇಂದ್ರ ಮಾತನಾಡಿ, ಜೆಡಿಎಸ್ ನಮ್ಮ ಪಾಲುದಾರರಾಗಿದ್ದಾರೆ, ಅಧಿಕೃತ ವಿರೋಧ ಪಕ್ಷದ ನಿಲುವಳಿ ಸೂಚನೆ ಮೊದಲು ಕೈಗೆತ್ತಿಕೊಳ್ಳಬೇಕು, ವಿಚಾರ ಗಂಭೀರವಾಗಿದೆ ಎಂದಾಗ, ನಿಲುವಳಿ ಸೂಚನೆ ನೀಡುವಾಗ ಗಂಭೀರ ವಿಚಾರ ಎಂದು ಗೊತ್ತಿರಲಿಲ್ಲವೇ, ಮೊದಲು ಸಭಾಧ್ಯಕ್ಷರ ಕಚೇರಿಗೆ ಸೂಚನಾ ಪತ್ರ ನೀಡಬೇಕಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.
ಸಚಿವ ಪರಮೇಶ್ವರ್, ಕಾನೂನು ಸುವ್ಯವಸ್ಥೆಯನ್ನು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿದೆಯೇ ಎಂದರು.
ಈ ಹಂತದಲ್ಲಿ ವಿರೋಧ ಪಕ್ಷಗಳ ಸದಸ್ಯರು ಧ್ವನಿ ಏರಿಸಿ ವಾಗ್ವಾದಕ್ಕೆ ಇಳಿದಾಗ ಆಡಳಿತ ಪಕ್ಷದ ಶಾಸಕರಿಂದಲೂ ಪ್ರತಿಯಾಗಿ ಗದ್ದಲ ಕೇಳಿಬಂದಿತು. ಇದರಿಂದ ಸದನ ಕೆಲಕಾಲ ಗೊಂದಲದ ವಾತಾವರಣದಲ್ಲಿ ಮುಳುಗಿತು.
ಸಭಾಧ್ಯಕ್ಷರು, ಕೊಬ್ಬರಿ ಬೆಲೆ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ, ಕಾನೂನು ಸುವ್ಯವಸ್ಥೆ ಕುರಿತು ಹೊಸ ಸೂಚನೆ ಕೊಟ್ಟರೆ ನಾಳೆ ಪರಿಶೀಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.