ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 27 ರಂದು ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಎಐಸಿಸಿ ವಕ್ತಾರ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್ ಹಾಗೂ ಡಾ. ಸಯ್ಯದ್ ನಾಸಿರ್ ಹುಸೇನ್ ಅಭ್ಯರ್ಥಿಗಳಾಗಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮೂವರ ಹೆಸರುಗಳನ್ನು ವರಿಷ್ಠರಿಗೆ ಶಿಫಾರಸು ಮಾಡಿತ್ತು.
ಕೆಲವೇ ನಿಮಿಷಗಳಲ್ಲಿ ಮೂವರು ಅಭ್ಯರ್ಥಿಗಳ ಪ್ರಕಟ
ಶಿಫಾರಸು ಮಾಡಿದ ಕೆಲವೇ ನಿಮಿಷಗಳಲ್ಲಿ ಎಐಸಿಸಿ ಈ ಮೂವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿರುತ್ತದೆ.
ಈಗಾಗಲೇ ಬಿಜೆಪಿ ತನಗೆ ದಕ್ಕಬಹುದಾದ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಹೆಸರಿಸಿದೆ.
ಕಾಂಗ್ರೆಸ್ ಬಲಿಷ್ಠ ರಾಜ್ಯಗಳು
ಕಾಂಗ್ರೆಸ್ ಯಾವ ರಾಜ್ಯಗಳಲ್ಲಿ ಬಲಿಷ್ಠವಾಗಿದೆಯೋ ಅಂತಹ ರಾಜ್ಯಗಳಿಂದ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕೆಲವು ಮುಖಂಡರನ್ನು ರಾಜ್ಯಸಭೆಗೆ ಕಳುಹಿಸಲು ಹೆಸರು ಪ್ರಕಟಿಸಿದೆ.
ಅಂತೆಯೇ ಕರ್ನಾಟಕದಿಂದ ಎಐಸಿಸಿ ವಕ್ತಾರ ಅಜಯ್ ಮಾಕೆನ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ, ಜಿ.ಸಿ. ಚಂದ್ರಶೇಖರ್ ಮತ್ತು ಸಯ್ಯದ್ ನಾಸಿರ್ ಹುಸೇನ್ ಮತ್ತೊಂದು ಅವಧಿಗೆ ಅವರನ್ನೇ ಕಣಕ್ಕಿಳಿಸಿದೆ.
ವಿಧಾನಸಭೆಯಲ್ಲಿನ ಬಲಾಬಲದ ಆಧಾರದ ಮೇಲೆ ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ.
ಬಿಜೆಪಿ ತನಗಿರುವ ಸಂಖ್ಯಾಬಲದ ಆಧಾರದ ಮೇಲೆ ಒಬ್ಬರನ್ನು ಕಣಕ್ಕಿಳಿಸಿರುವುದರಿಂದ ಈ ನಾಲ್ವರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.