ಬೆಂಗಳೂರು:ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಪ್ರಾಣ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಪದ್ಮರಾಜ್ ಅವರನ್ನು ಬಂಧಿಸಲಾಗಿದೆ.
ವಿಧಾನಸಭೆಯಲ್ಲಿಂದು ಶೂನ್ಯವೇಳೆಯಲ್ಲಿ, ತಮಗೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು, ಕ್ಷೇತ್ರದ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮನ್ನು ನಿಂದಿಸಿ ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ದೂರಿದರು.
ಸದಸ್ಯರ ಪ್ರಸ್ತಾವ ಮತ್ತು ವಿವರಣೆ ಕೇಳುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ. ಖಾದರ್, ಸದನದ ಸದಸ್ಯರನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದವರನ್ನು ಸಂಜೆ ವೇಳೆಗೆ ಬಂಧಿಸಬೇಕು ಇಲ್ಲದಿದ್ದರೆ, ದೂರು ದಾಖಲು ಮಾಡಿಕೊಂಡಿರುವ ಠಾಣೆಯ ಅಧಿಕಾರಿಯನ್ನು ಅಮಾನತು ಮಾಡುವಂತೆ ಕಟು ಆದೇಶ ಮಾಡಿದರು.
ವಿಧಾನಸಭೆಯ ನಡಾವಳಿ ಗೃಹ ಇಲಾಖೆಗೆ ತಲುಪುತ್ತಿದ್ದಂತೆ ಎಚ್ಚತ್ತ ಪೊಲೀಸರು, ಅಡಿವಿಕೊಂಡಿದ್ದ ಆರೋಪಿ ಪದ್ಮರಾಜ್ ಮನೆ ಬಾಗಿಲು ಒಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸದನದಲ್ಲಿ ಪ್ರಶ್ನೋತ್ತರದ ಬಳಿಕ ಶೂನ್ಯ ವೇಳೆಯಲ್ಲಿ ಗೋಪಾಲಯ್ಯ ಅವರು ವಿಷಯ ಪ್ರಸ್ತಾಪಿಸಿ, ನಿನ್ನೆ ರಾತ್ರಿ 11 ಗಂಟೆ 1 ನಿಮಿಷಕ್ಕೆ ಬಿಬಿಎಂಪಿಯ ಮಾಜಿ ಸದಸ್ಯ ಪದ್ಮರಾಜ್ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಆ ಪದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ, ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದರು.
ಪಾನಮತ್ತನಾಗಿ ಬೆದರಿಕೆ ಕರೆ
ಬಸವೇಶ್ವರ ನಗರದಲ್ಲಿ ಕ್ಲಬ್ ನಡೆಸುವ ಈ ವ್ಯಕ್ತಿ ರಾತ್ರಿಯಾಗುತ್ತಿದ್ದಂತೆ ಪಾನಮತ್ತನಾಗಿ ನನ್ನನ್ನೂ ಸೇರಿದಂತೆ ಕುಟುಂಬದ ಅನೇಕರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.
ಸುರೇಶ್‌ಕುಮಾರ್ ಅವರಂತಹ ಶಾಸಕರು ಶಕ್ತಿಯಿಲ್ಲದೆ ದೂರು ನೀಡಿಲ್ಲ, ಸದರಿ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ರಾತ್ರಿಯಿಡೀ ಏಳೆಂಟು ಗಂಟೆ ಅವರ ಮನೆ ಎದುರು ಕಾವಲು ಕಾದಿದ್ದಾರೆ. ಬಾಗಿಲು ತೆರೆದು ಹೊರಬರದೇ ಒಳಗಿದ್ದ ವ್ಯಕ್ತಿ ಬೆಳಗ್ಗೆ 10 ಗಂಟೆಗೆ ನಿಶೆ ಇಳಿದ ಮೇಲೆ ಹೊರಹೋಗಿದ್ದಾನೆ. ಇಂತಹವರು ಸಮಾಜಕ್ಕೆ ಬೇಕೇ ಎಂದು ಪ್ರಶ್ನಿಸಿದರು.
ಸದರಿ ವ್ಯಕ್ತಿಯನ್ನು ಬಂಧಿಸಿ 6 ತಿಂಗಳ ಕಾಲ ಗಡಿಪಾರು ಮಾಡಬೇಕು, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು, ಬೆಂಗಳೂರಿನಲ್ಲಿ ಅನೈತಿಕವಾಗಿ ನಡೆಯುತ್ತಿರುವ ಕ್ಲಬ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಸುರೇಶ್‌ಕುಮಾರ್ ಮಾತನಾಡಿ, ಸದನದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ, ರಾತ್ರಿ ದೂರು ಕೊಟ್ಟರೂ ಈವರೆಗೂ ಏಕೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದರಿ ವ್ಯಕ್ತಿಯ ನಡವಳಿಕೆಗೆ ನಾನು ಮತ್ತು ಅಶೋಕ್‌ರವರು ಫಲಾನುಭವಿಗಳಾಗಿದ್ದೇವೆ, ಪೊಲೀಸರು ಆತನ ಮನೆಬಾಗಿಲಿಗೆ ಹೋದಾಗ ಒಳಗಿನಿಂದಲೇ ಆತ ಪ್ರಭಾವಿಗಳಿಗೆ ಕರೆ ಮಾಡಿ ಶಿಫಾರಸ್ಸು ಮಾಡುತ್ತಿದ್ದಾನೆ, ಗೋಪಾಲಯ್ಯ ಅವರಿಗೆ ಬೆದರಿಕೆ ಹಾಕಿದ್ದಾನೆ ಎಂದಾದರೆ ಆತನ ಉದ್ಧಟತನದ ಮಟ್ಟವನ್ನು ಅಂದಾಜಿಸಬಹುದು ಎಂದು ಆರೋಪಿಸಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬೆದರಿಕೆ ಹಾಕಿದ ವ್ಯಕ್ತಿ ಕುಡಿದಿದ್ದಾನೆ. ಆತನ ನಿಶೆ ಇಳಿಯಲಿ ಎಂದು ಪೊಲೀಸರು ಕಾದು ಕುಳಿತಿರುವುದು ಹಾಸ್ಯಾಸ್ಪದ, ಈ ರೀತಿ ಕಾನೂನಿನಲ್ಲಿ ವಿನಾಯಿತಿ ನೀಡಲು ಅವಕಾಶವಿದೆಯೇ, ಪೊಲೀಸ್ ಠಾಣೆಯಿಂದ ಸ್ವಲ್ಪವೇ ದೂರದಲ್ಲಿದ್ದರೂ ಏಕೆ ಬಂಧಿಸಿಲ್ಲ, ಆರೋಪಿಗಳಿಗೆ ಪೊಲೀಸರು ರಾಜಾತಿಥ್ಯ ನೀಡುವುದು ಅಗತ್ಯವೇ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಶಾಸಕರನ್ನು ಅವಹೇಳನ ಮಾಡಿರುವ ವ್ಯಕ್ತಿ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ತಾರತಮ್ಯ ಇಲ್ಲದೆ ಸೂಕ್ತ ಕ್ರಮದ ಭರವಸೆ
ಸರ್ಕಾರದ ಪರವಾಗಿ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಸದಸ್ಯರ ಚರ್ಚೆಗಳನ್ನು ಗೃಹಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಕಾನೂನು ಪಾಲನೆಯ ವಿಷಯದಲ್ಲಿ ಸರ್ಕಾರ ಯಾವುದೇ ತಾರತಮ್ಯ ಮಾಡುವುದಿಲ್ಲ, ಆ ವ್ಯಕ್ತಿ ಬಿಜೆಪಿಯಲ್ಲಿದ್ದರು, ಕಾಂಗ್ರೆಸ್‌ಗೆ ಬಂದಿದ್ದರು, ಈಗ ಯಾವ ಪಕ್ಷದಲ್ಲಿದ್ದಾರೋ ಗೊತ್ತಿಲ್ಲ, ರಾಜಕೀಯ ಹೊರತಾಗಿ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಭರವಸೆ ನೀಡಿದರು.
ಈ ಹಂತದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್, ನಿನ್ನೆ ರಾತ್ರಿ ಘಟನೆ ನಡೆದರೂ ಇವರನ್ನು ಏಕೆ ಬಂಧಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆರೋಪಿಯನ್ನು ಇಂದು ಮಧ್ಯಾಹ್ನ ಇಲ್ಲ ಸಂಜೆಯೊಳಗೆ ಬಂಧಿಸಬೇಕು, ಇಲ್ಲವಾದರೆ ಸದರಿ ಠಾಣೆಯ ಇನ್ಸ್‌ಪೆಕ್ಟರ್ ಅನ್ನು ಅಮಾನತು ಮಾಡಿ ಎಂದು ಸೂಚನೆ ನೀಡಿದರು.
ಸಭಾಧ್ಯಕ್ಷರು ಆದೇಶ ನೀಡುತ್ತಿದ್ದಂತೆ ಸದನದೊಳಗೆ ಧಾವಿಸಿದ ಗೃಹ ಸಚಿವ ಪರಮೇಶ್ವರ್, ಗೋಪಾಲಯ್ಯ ಅವರ ದೂರು ಆಧರಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಂಧಿಸಲು ಈಗಲೂ ಅವರ ಮನೆ ಮುಂದೆ ಕಾಯುತ್ತಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆಗೆಯುತ್ತಿಲ್ಲ. ಅನಿವಾರ್ಯವಾದರೆ ಬಾಗಿಲು ಒಡೆದು ಒಳಹೋಗಿ ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆ ವೇಳೆಗೆ ಅಧಿಕಾರಿಗಳ ಗ್ಯಾಲರಿಯಿಂದ ಬಂದ ಸಂದೇಶ ಪಡೆದು ಸ್ಪಷ್ಟನೆ ನೀಡಿದ ಗೃಹಸಚಿವರು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.