ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಯುವ ಮೂಲಕ ಉತ್ತರ ಪ್ರದೇಶದಿಂದ ತಾಯಿ-ಮಗ ಇಬ್ಬರೂ ಪಲಾಯನ ಮಾಡಿದಂತಾಗಿದೆ.
ಕಳೆದ 2019ರಲ್ಲಿ ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ, ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಸೋಲನುಭವಿಸಿ, ವಯನಾಡು ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.
ಈ ಬಾರಿ, ಅಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಿತ್ರ ಪಕ್ಷ ಸಿಪಿಐ(ಎಂ) ವಯನಾಡು ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಇರಾದೆಯಲ್ಲಿದ್ದು, ರಾಹುಲ್ ಗಾಂಧಿ ಮತ್ತೆ ಉತ್ತರ ಪ್ರದೇಶದ ಅಮೇಥಿಗೆ ಹಿಂತಿರುಗುವರೆ ಅಥವಾ ರಾಯ್‌ಬರೇಲಿ ಕ್ಷೇತ್ರ ಆರಿಸಿಕೊಳ್ಳುವರೇ ಎಂಬ ಚರ್ಚೆಗಳು ನಡೆದಿವೆ.
ಕಳೆದ 2004 ರಿಂದಲೂ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವು ಈ ಬಾರಿ ತೆರವಾಗಿದ್ದು, ಗಾಂಧಿ ವಂಶದ ಇನ್ನೊಬ್ಬ ಮಹಿಳೆ ಹಾಗೂ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಮಾತುಗಳು ಪಕ್ಷದ ಉನ್ನತ ವಲಯದಲ್ಲಿ ಕೇಳಿಬರುತ್ತಿವೆ.
ಪುತ್ರಿಗೆ ರಾಯ್‌ಬರೇಲಿ ಕ್ಷೇತ್ರ ಬಿಟ್ಟುಕೊಡುವ ಉದ್ದೇಶದಿಂದಲೇ ಸೋನಿಯಾ ಗಾಂಧಿ ರಾಜಸ್ತಾನದ ಮೂಲಕ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ ಎಂಬುದು ಒಂದು ತರ್ಕವಾದರೆ, ಚುನಾವಣೆ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ತ್ರಾಣ ಇಲ್ಲದಿರುವುದು ಮತ್ತೊಂದು ಕಾರಣ ಎನ್ನಲಾಗಿದೆ.
ಒಟ್ಟಿನಲ್ಲಿ ಗಾಂಧಿ ಕುಟುಂಬ ಇಡೀ ಉತ್ತರ ಪ್ರದೇಶದಿಂದ ಎತ್ತಂಗಡಿ ಆದಂತಾಗಿದ್ದು, ಜವಾಹರಲಾಲ್ ನೆಹರು ಕಾಲದಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಒಬ್ಬರಲ್ಲಾ ಒಬ್ಬರು ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು (1977 ಹೊರತುಪಡಿಸಿ).
ಒಂದು ಕಾಲದಲ್ಲಿ ಪ್ರಧಾನಮಂತ್ರಿ ಹುದ್ದೆ ಏರಲು ಬಯಸುವವರು ಉತ್ತರ ಪ್ರದೇಶದ ಯಾವುದಾದರೊಂದು ಕ್ಷೇತ್ರದಿಂದ ಗೆದ್ದು ಬರಬೇಕೆಂಬ ಮಾತಿತ್ತು. ಇದಕ್ಕೆ ಕಾರಣ, ದೇಶದ ಎಲ್ಲಾ ರಾಜ್ಯಗಳಿಗಿಂತ ಉತ್ತರ ಪ್ರದೇಶವೇ ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯವಾಗಿತ್ತು. ಈಗಲೂ ಈ ರಾಜ್ಯವೇ ಹೆಚ್ಚು ಲೋಕಸಭಾ ಸ್ಥಾನಗಳನ್ನು (80) ಹೊಂದಿದೆ.
ರಾಯ್‌ಬರೇಲಿ ಕ್ಷೇತ್ರದಲ್ಲಿ ಒಂದು ವೇಳೆ ಪ್ರಿಯಾಂಕಾ ವಾದ್ರಾ ಸ್ಪರ್ಧೆಗಿಳಿದು ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದರೆ ಮೊದಲ ಸಾಲಿನಲ್ಲಂತೂ ಆಸನ ಲಭ್ಯವಾಗುವಷ್ಟು ಸದಸ್ಯತ್ವ ಹಿರಿತನ ಅವರು ಹೊಂದುವುದಿಲ್ಲ.
ಈ ಹಿಂದೆ ಸೋನಿಯಾ ಗಾಂಧಿ ಲೋಕಸಭೆ ಪ್ರವೇಶಿಸಿದಾಗ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಯುಪಿಎ ಒಕ್ಕೂಟದ ನಾಯಕಿ ಪಟ್ಟ ನೀಡಲಾಗಿತ್ತು.
ಈ ಬಾರಿ (2024ರ ಲೋಕಸಭಾ ಚುನಾವಣೆ ಫಲಿತಾಂಶ ನಂತರ) ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಯುಪಿಎ ಒಕ್ಕೂಟದ ಮುಖ್ಯಸ್ಥನ ಪಟ್ಟ ರಾಹುಲ್ ಗಾಂಧಿಗೆ ಲಭ್ಯವಾಗುವ ಸಾಧ್ಯತೆ ಇದ್ದು, ಅವರು ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರಿನ ಸಾಲಿನಲ್ಲಿ ಆಸೀನರಾಗುವರೇ ಎಂಬುದು ಕುತೂಹಲಕರ ಸಂಗತಿ.
ಒಂದು ವೇಳೆ ಪ್ರಿಯಾಂಕ ವಾದ್ರಾ ಲೋಕಸಭೆ ಪ್ರವೇಶಿಸಿದರೆ ಅವರಿಗೆ ಯಾವ ಸಾಲಿನಲ್ಲಿ ಆಸನ ವ್ಯವಸ್ಥೆ ಆಗಲಿದೆ ಎಂಬುದೂ ಕುತೂಹಲ ಮೂಡಿಸಿದೆ.
ಲೋಕಸಭಾ ಸದಸ್ಯತ್ವ ವಿಷಯಕ್ಕೆ ಬಂದರೆ ಪ್ರಸ್ತುತ ಗಾಂಧಿ ವಂಶದ ಸದಸ್ಯರಲ್ಲಿ ರಾಹುಲ್ ಗಾಂಧಿಯೇ ಹಿರಿತನ ಹೊಂದಿದ್ದು (ಸೋನಿಯಾಗಾಂಧಿ ಈಗಾಗಲೇ ರಾಜಸ್ತಾನದಿಂದ ಸ್ಪರ್ಧೆಗಿಳಿದಿರುವ ಹಿನ್ನೆಲೆಯಲ್ಲಿ), ಪ್ರಿಯಾಂಕಾ ವಾದ್ರಾ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವರೇ!
ಒಂದು ವೇಳೆ ಕಾಂಗ್ರೆಸ್‌ನ ಇಬ್ಬರೂ ದಿಗ್ಗಜ ನಾಯಕರು ಲೋಕಸಭೆ ಪ್ರವೇಶಿಸಿದರೆ, ಕಾಂಗ್ರೆಸ್‌ನಲ್ಲಿ ಇವರಿಬ್ಬರಲ್ಲಿ ಯಾರು ಹೆಚ್ಚು ವರ್ಚಸ್ಸು ಹೊಂದಿದವರು ಎಂಬ ಲೆಕ್ಕಾಚಾರಗಳೂ ಆರಂಭವಾಗುವ ಸಾಧ್ಯತೆ ಇದ್ದು, ಬಹುಶಃ ಇಂತಹ ಸಂದಿಗ್ಧತೆಗೆ ಅವಕಾಶವಾಗದಂತೆ ಕಾಂಗ್ರೆಸ್ ಗಮನ ಹರಿಸುವುದಂತೂ ನಿಶ್ಚಿತ.
ಪ್ರಿಯಾಂಕಾ ವಾದ್ರಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವರೆಂಬುದು ಇದುವರೆಗೂ ಖಚಿತವಾಗಿಲ್ಲ.
2024ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಹೆಚ್ಚು-ಕಡಿಮೆ ಇನ್ನೂ ಮೂರು ತಿಂಗಳು ಬಾಕಿ ಇದ್ದು, ರಾಷ್ಟ್ರ ರಾಜಕಾರಣದಲ್ಲಿ ಎಂತೆಂಥಾ ರಾಜಕೀಯ ದಾಳಗಳು ಉರುಳುತ್ತವೋ ಎಂಬುದನ್ನು ಕಾದುನೋಡಬೇಕಿದೆ.
ಹೆಚ್.ಎಂ.ವಿಜಯಕುಮಾರ್