ಬೆಂಗಳೂರು: ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರ ಹಾಗೂ 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗಿಂದು ತಿಳಿಸಿದ್ದಾರೆ.
ಬೇಳೂರು ಗೋಪಾಲಕೃಷ್ಣ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಒಂದು ವರ್ಷದ ಕಡ್ಡಾಯ ಸೇವೆಗೆ ಬರುವ ವೈದ್ಯ ಹಾಗೂ ತಜ್ಞ ವೈದ್ಯ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ವೈದ್ಯರು ಹಾಗೂ ತಜ್ಞರುಗಳ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಆಸ್ಪತ್ರೆಗಳ ನಿರ್ವಹಣಾ ಅನುದಾನ ಹೆಚ್ಚಳಕ್ಕೆ ಮನವಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿ ಒಳಪಟ್ಟಿರುವ ಎಲ್ಲ ಆಸ್ಪತ್ರೆಗಳಿಗೆ ವರ್ಷಕ್ಕೆ 25 ಕೋಟಿ ರೂ. ನಿರ್ವಹಣಾ ಅನುದಾನ ನೀಡಲಾಗುತ್ತಿದ್ದು, ಈ ಮೊತ್ತ ಹೆಚ್ಚಿಸುವಂತೆ ಹಣಕಾಸು ಇಲಾಖೆ ಹೊಣೆ ಹೊಂದಿರುವ ಮಖ್ಯಮಂತ್ರಿ ಅವರನ್ನು ಕೋರಲಾಗಿದೆ, ಆಸ್ಪತ್ರೆಗಳಲ್ಲಿ ಎಲ್ಲ ಸೌಕರ್ಯಗಳು ಸಮರ್ಪಕವಾಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಮಾರ್ಗಸೂಚಿ ಅನ್ವಯ ನಗರ ಪ್ರದೇಶದಲ್ಲಿ 2.50 ಲಕ್ಷ ಜನಸಂಖ್ಯೆಗೆ ಒಂದು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ.
ಅತ್ಯಂತ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳನ್ನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆ ಆಸ್ಪತ್ರೆಗೆ ಕರೆದೊಯ್ಯುವ ಕುರಿತು ನಿಯಮಗಳ ಸರಳೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.