2025 ರ ವೇಳೆಗೆ 500 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
ಬೆಂಗಳೂರು:ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಆರಂಭಿಸಿ ಎರಡೂ ಭಾಷೆಗಳಲ್ಲೂ ಭೋದನಾ ಸೌಲಭ್ಯ ಕಲ್ಪಿಸಲಾಗುವುದೆಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳು ಇಂಗ್ಲೀಷ್ ಕಲಿತು ನಗರ, ಪಟ್ಟಣಗಳ ಮಕ್ಕಳಂತೆ ಉನ್ನತ ವ್ಯಾಸಂಗ ಕಲಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಇಂತಹ ತೀರ್ಮಾನ ಮಾಡಿದ್ದೇವೆ.
ಗ್ರಾಮೀಣ ಸರ್ಕಾರಿ ಕನ್ನಡ ಶಾಲೆ
ಪೋಷಕರು ತಮ್ಮ ಮಕ್ಕಳನ್ನು ಯಾವ ಭಾಷಾ ಶಿಕ್ಷಣದಲ್ಲಿ ಕಲಿಸಬೇಕೆಂಬ ತೀರ್ಮಾನ ಕೈಗೊಂಡು ಅದೇ ಶಾಲೆಗಳಲ್ಲಿ ಕಲಿಕೆಗೆ ಅವಕಾಶ ಮಾಡಿಕೊಡಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳ ಕೊರತೆ ಎದ್ದುಕಾಣುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದರು.
ಪ್ರಶ್ನೋತ್ತರ ವೇಳೆಯಲ್ಲಿ ಅರಗ ಜ್ಞಾನೇಂದ್ರ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಪೋಷಕರಿಗೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುವ ಹಪಾಹಪಿ ಹೆಚ್ಚಾಗಿದೆ. ಕಷ್ಟಪಟ್ಟಾದರೂ ಹಣ ಖರ್ಚು ಮಾಡಿ ದೂರದೂರುಗಳಿಗೆ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಲ್ಲಿ ಕಲಿಕೆಗೆ ಕಳುಹಿಸುತ್ತಿದ್ದಾರೆ.
ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಕಾಣುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಶಿಕ್ಷಕರಿಗೂ ಇಂಗ್ಲೀಷ್ ಭೋದನಾ ತರಬೇತಿ ನೀಡಿರುವುದಲ್ಲದೆ, ಹೊಸ ನೇಮಕಾತಿ ಸಂದರ್ಭದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಕಲಿಕೆ ಮಾಡಿದವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಮೂಲಸೌಕರ್ಯ ಮತ್ತು ಮಕ್ಕಳ ಕೊರತೆ
ಕಳೆದ ಎರಡು ವರ್ಷಗಳಲ್ಲಿ 59 ಇಂಗ್ಲೀಷ್ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಆರಂಭಿಸಿದ್ದರೂ ಇವುಗಳಿಗೆ ಮೂಲಸೌಕರ್ಯ ಮತ್ತು ಮಕ್ಕಳ ಕೊರತೆ ಇದೆ.
ಖಾಸಗಿ ಸಹಭಾಗಿತ್ವದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು 2025 ರ ವೇಳೆಗೆ ತೆರೆದು, ಅಲ್ಲಿ ಗ್ರಾಮೀಣ ಮಕ್ಕಳಿಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಮಾದರಿಯಲ್ಲೇ ಮೂಲಸೌಕರ್ಯ ಮತ್ತು ಶಿಕ್ಷಣ ನೀಡಲಾಗುವುದು ಎಂದರು.