ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 27 ರಂದು ನಡೆಯಲಿರುವ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ವಿವಿಧ ಪಕ್ಷಗಳ ಬಲಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಮತ್ತು ಬಿಜೆಪಿಗೆ ಒಂದು ಸ್ಥಾನದಲ್ಲಿ ಗೆಲವು ಖಚಿತ.
ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಬಿಜೆಪಿ ವರಿಷ್ಠರ ಅಣತಿಯಂತೆ ಐದನೇ ಅಭ್ಯರ್ಥಿಯಾಗಿ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ರಂಗೇರಿದ ಚುನಾವಣಾ ಅಖಾಡ
ರೆಡ್ಡಿ ಅವರು ಕಣಕ್ಕಿಳಿದಿರುವುದರಿಂದ ಚುನಾವಣಾ ಅಖಾಡ ರಂಗೇರಿದ್ದು ಅವಿರೋಧ ಆಯ್ಕೆಗೆ ಅವಕಾಶ ಇಲ್ಲದಂತಾಗಿದೆ.
ರಾಜ್ಯಸಭೆಗೆ ಆಯ್ಕೆಗೊಳ್ಳಲು ಸ್ಪರ್ಧಿಸಿರುವ ಅಭ್ಯರ್ಥಿ ಕನಿಷ್ಠ 45 ಮತಗಳನ್ನು ಪಡೆಯಬೇಕಿದೆ, ಕಾಂಗ್ರೆಸ್ ವಿಧಾನಸಭಾಧ್ಯಕ್ಷರೂ ಸೇರಿ 135 ಮತಗಳನ್ನು ಹೊಂದಿದೆ. ಪ್ರತಿಪಕ್ಷ ಬಿಜೆಪಿ 66, ಜೆಡಿಎಸ್ 19 ಮತಗಳನ್ನು ಹೊಂದಿವೆ.
224 ಸದಸ್ಯರಿರುವ ಸದನದಲ್ಲಿ ನಾಲ್ವರು ಪಕ್ಷೇತರರಿದ್ದಾರೆ, ಇವರ ಮತಗಳೇ ಚುನಾವಣೆಯಲ್ಲಿ ಭಾರೀ ತಿರುವಿಗೆ ಕಾರಣವಾಗಲಿದೆ.
ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ 135 ಮತಗಳನ್ನು ಹೊಂದಿದೆ. ಬಿಜೆಪಿ 66 ಸದಸ್ಯರನ್ನು ಹೊಂದಿದ್ದು ತನ್ನ ಅಭ್ಯರ್ಥಿಗೆ 45 ಮತಗಳು ನೀಡಿದ ನಂತರ ಉಳಿದ 21 ಮತಗಳನ್ನು ಎನ್‌ಡಿಎ ಅಭ್ಯರ್ಥಿ ರೆಡ್ಡಿ ಅವರಿಗೆ ನೀಡಲಿದೆ.
ಜೆಡಿಎಸ್‌ನ 19 ಹಾಗೂ ಬಿಜೆಪಿಯ ಉಳಿದ 21 ಮತಗಳು ಸೇರಿ 40 ಮತಗಳು ರೆಡ್ಡಿ ಅವರಿಗೆ ಲಭಿಸಲಿವೆ.
ಇಬ್ಬರು ಪಕ್ಷೇತರರು ಕುಪೇಂದ್ರ ಬೆಂಬಲಕ್ಕೆ
ಗೆಲುವಿನ ಗುರಿ ಮುಟ್ಟಲು ಇನ್ನೂ ಐದು ಮತಗಳ ಅಗತ್ಯವಿದೆ, ಅದರಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಇಬ್ಬರು ಪಕ್ಷೇತರರು ಕುಪೇಂದ್ರ ಅವರನ್ನು ಬೆಂಬಲಿಸಲಿದ್ದಾರೆ.
ಮ್ಯಾಜಿಕ್ ಸಂಖ್ಯೆ ಮುಟ್ಟಲು ಕುಪೇಂದ್ರ ರೆಡ್ಡಿ ಇನ್ನೂ ಮೂರು ಮತಗಳನ್ನು ಗಳಿಸಬೇಕಿದೆ, ಆ ಮತಗಳನ್ನು ಬಿಜೆಪಿ ವರಿಷ್ಠರು ದೊರಕಿಸಿಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಅನೇಕ ಚುನಾವಣೆಗಳಲ್ಲಿ ಅಡ್ಡ ಮತದಾನದಿಂದ ಐದನೇ ಅಭ್ಯರ್ಥಿ ಆಯ್ಕೆಗೊಂಡು ಅಧಿಕೃತ ಅಭ್ಯರ್ಥಿಗಳು ಸೋತಿರುವುದು ಕರ್ನಾಟಕದ ಇತಿಹಾಸದ ಪುಟಗಳಲ್ಲಿದೆ.
ಕುಪೇಂದ್ರ ರೆಡ್ಡಿ ಅಲ್ಲದೆ, ಕಾಂಗ್ರೆಸ್‌ನ ಅಜಯ್ ಮಾಕೆನ್, ಜಿ.ಸಿ.ಚಂದ್ರಶೇಖರ್, ಡಾ. ಸಯ್ಯದ್ ನಾಸಿರ್ ಹುಸೇನ್ ನಾಮಪತ್ರ ಸಲ್ಲಿಸಿದ್ದರೆ, ಬಿಜೆಪಿಯ ನಾರಾಯಣಸಾ ಕೆ. ಬಾಂಡಗೆ ಅವರು ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಆತ್ಮಸಾಕ್ಷಿ ಮತ
ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಮ್ಮ ಅಭ್ಯರ್ಥಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ, ಅವರು ಆತ್ಮಸಾಕ್ಷಿ ಮತಗಳನ್ನು ಪಡೆದು ಗೆಲುವಿನ ಗಡಿ ದಾಟಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ನಾಯಕರ ಮಾತಿಗೆ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಮಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ, ನಮ್ಮ ಮೂವರು ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ ಎಂದರು.
ಬಿಜೆಪಿ ಮತ್ತು ಜೆಡಿಎಸ್‌ನವರು ಕುದುರೆ ವ್ಯಾಪಾರ ಮಾಡುತ್ತಾರೆ, ಅವರು ಅದಕ್ಕೆ ಹೆಸರುವಾಸಿ, ಫೆಬ್ರವರಿ 27 ರಂದು ಫಲಿತಾಂಶ ಹೊರಬೀಳುತ್ತದೆ.
ಎಷ್ಟು ಮತಗಳು ಬಿಜೆಪಿ ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ ಎಂದು ಮಾರ್ಮಿಕವಾಗಿ ನುಡಿದರು.