ಬೆಂಗಳೂರು:ಮುದ್ರಾಂಕ, ಅಬಕಾರಿ, ವಾಹನ ತೆರಿಗೆ ಇತ್ಯಾದಿ ಬಾಬ್ತುಗಳಿಂದ ಹೆಚ್ಚುವರಿ ಆದಾಯ ಸಂಗ್ರಹ ಪ್ರಯತ್ನ ನಡುವೆಯೂ 1.05 ಲಕ್ಷ ಕೋಟಿ ರೂ. ಸಾಲಕ್ಕೆ ಮೊರೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ.
ವಿಧಾನಸಭೆಯಲ್ಲಿಂದು 2024-25ನೇ ಸಾಲಿನ ಮುಂಗಡಪತ್ರ ಮಂಡಿಸಿ ಐದು ಗ್ಯಾರಂಡಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೊಸ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಸಾಲ ಪಡೆಯಲಾಗುವುದು ಎಂದಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಸಾಲ
ಕರ್ನಾಟಕದ ಇತಿಹಾಸದಲ್ಲೇ ಯಾವ ಹಣಕಾಸು ಸಚಿವರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ಪಡೆಯುವ ಪ್ರಸ್ತಾಪ ಮಾಡಿರಲಿಲ್ಲ.
ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಮ್ಮ ಇತಿಮಿತಿಯಲ್ಲಿ ಸಾಲ ಪಡೆಯಲು ಮುಂದಾಗಿದ್ದದೇನೆ ಎಂದು ಮುಂಗಡಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಯಾವುದೇ ಹೊಸ ಜನಪ್ರಿಯ ಯೋಜನೆಗಳು ಇಲ್ಲ, ಆದರೆ, ಕೆಲವು ಇಲಾಖೆಗಳಲ್ಲಿ ಕಾರ್ಯಕ್ರಮಗಳನ್ನು ತಂದಿದ್ದಾರೆ.
ಹಳೆ ಕಾರ್ಯಕ್ರಮಗಳಿಗೆ ಇತಿಶ್ರೀ
ಕೆಲವು ಹಳೆ ಕಾರ್ಯಕ್ರಮಗಳಿಗೆ ಇತಿಶ್ರೀ ಹಾಡಿ ತಮ್ಮ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಕೆಲವು ಯೋಜನೆಗಳನ್ನು ಮತ್ತೆ ಮುಂದುವರೆಸುವ ಪ್ರಸ್ತಾಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲೇ ಅಭಿವೃದ್ಧಿಗೆ ಒತ್ತು ನೀಡಿರುವ ಮುಖ್ಯಮಂತ್ರಿ ಅವರು, ಯಾವುದೇ ಹೊಸ ಜನಪರ ಯೋಜನೆಗಳನ್ನು ಪ್ರಕಟಿಸಿಲ್ಲ.
ಕೃಷಿ, ನೀರಾವರಿ, ನಗರಾಭಿವೃದ್ಧಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಒತ್ತು ನೀಡಿರುವ ಮುಖ್ಯಮಂತ್ರಿ ಅವರು, ಕೆಲವು ಹಳೆಯ ಯೋಜನೆಗಳಿಗೆ ಮರುಜೀವ ನೀಡುವುದರ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಪೂರ್ಣ ಆಯವ್ಯಯ ಅಂಗೀಕಾರಕ್ಕೆ ಮನವಿ
ಪ್ರಸಕ್ತ ಸಾಲಿನಲ್ಲಿ 3,71,383 ಕೋಟಿ ರೂ.ಗಳ ಗಾತ್ರದ ಮುಂಗಡಪತ್ರ ಮಂಡಿಸಿ, ಪೂರ್ಣ ಆಯವ್ಯಯ ಅಂಗೀಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮುಂಗಡಪತ್ರದಲ್ಲಿ ಘೋಷಿಸಿರುವ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲು ಇಷ್ಟು ಹಣದ ಅಗತ್ಯವಿದೆ.
ನಮ್ಮ ಸಂಪನ್ಮೂಲ ಕ್ರೂಡೀಕರಣ ಇಷ್ಟು ಇರದ ಕಾರಣ ನಮ್ಮ ಇತಿಮಿತಿಯೊಳಗೆ ಸಾಲ ಪಡೆಯುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇಕಡ 3ರೊಳಗೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು ಜಿಎಸ್‌ಡಿಪಿಯ ಶೇಕಡ 25ರೊಳಗೆ ಕಾಯ್ದುಕೊಳ್ಳುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಿರುವುದಾಗಿ ಹೇಳಿಕೊಂಡಿದ್ದಾರೆ.
ನೋಂದಣಿ ಮತ್ತು ಮುದ್ರಾಂಕದಿಂದ ಹೆಚ್ಚುವರಿಯಾಗಿ 10,000ಕೋಟಿ ರೂ., ಅಬಕಾರಿ ಬಾಬ್ತಿನಿಂದ 3,000 ಕೋಟಿ ರೂ., ಸಾರಿಗೆ ಇಲಾಖೆಯಿಂದ 13,000, ಗಣಿ ಮತ್ತು ಭೂವಿಜ್ಞಾನದಿಂದ 9,000,ವಾಣಿಜ್ಯ ಮತ್ತು ತೆರಿಗೆ ಇಲಾಖೆಯಿಂದ 1,10,000 ಕೋಟಿ ರೂ. ಸಂಗ್ರಹ ಗುರಿ ನಿಗದಿ ಪಡಿಸಲಾಗಿದೆ ಎಂದರು.
ಮದ್ಯ ಸ್ಲ್ಯಾಬ್‌ಗಳ ಪರಿಷ್ಕರಣೆ
ಮದ್ಯ ಘೋಷಿತ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯದ ಮದ್ಯದ ದರಗಳಿಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್ ಸ್ಲ್ಯಾಬ್‌ಗಳನ್ನು ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ’ಅನ್ನ-ಸುವಿಧ’ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿ ಅವರು, ಇದರಡಿ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರಧಾನ್ಯಗಳನ್ನು ಪೂರೈಸಲಾಗುವುದು.
ಸರ್ಕಾರದ ವತಿಯಿಂದಲೇ 50 ಕೆಫೆ ಹೋಟೆಲ್‌ಗಳನ್ನು ಸ್ಥಾಪಿಸಲಾಗುವುದು, ಇದಕ್ಕಾಗಿ 7.5 ಕೋಟಿ ರೂ. ಮೀಸಲಿರಿಸಿದ್ದು, ಈ ಹೋಟೆಲ್‌ಗಳಲ್ಲಿ ಸ್ಥಳೀಯ ಆಹಾರಕ್ಕೆ ಒತ್ತು ನೀಡಲಾಗುವುದು.
ಮುಖ್ಯಮಂತ್ರಿ ಅಭಿವೃದ್ಧಿ ಪ್ರಾಧಿಕಾರ
ಸಮಗ್ರ ಕೃಷಿ ಉತ್ತೇಜಿಸುವ ರೈತ ಸಮೃದ್ಧಿ ಯೋಜನೆ ಘೋಷಿಸಿರುವ ಮುಖ್ಯಮಂತ್ರಿ ಅವರು, ಇದರನ್ವಯ ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮುಖ್ಯಮಂತ್ರಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದಾರೆ.
ಕೈಗೆಟಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಒದಗಿಸಲು ನಮ್ಮ ಮಿಲೆಟ್ ಎಂಬ ಹೊಸ ಕಾರ್ಯಕ್ರಮ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವುಗಳಿಂದಾಗಿ ಅಸಮಾನತೆ ಹೆಚ್ಚಳ, ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳವಣಿಗೆಗೆ ಎಡೆ ಮಾಡಿದೆ ಎಂದು ಮುಖ್ಯಮಂತ್ರಿ ತಮ್ಮ ಬಜೆಟ್‌ನಲ್ಲಿ ದಾಖಲಿಸಿದ್ದಾರೆ.
ಕೇಂದ್ರದ ವಿರುದ್ಧ ತಮ್ಮ ಗದಾ ಪ್ರಹಾರವನ್ನು ಮುಂಗಡಪತ್ರದಲ್ಲೂ ಮುಂದುವರೆಸಿ, ಕೇಂದ್ರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ, ನಾವು ರೂಪಿಸಿದ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಜನಭಿಪ್ರಾಯದಿಂದ ಪಂಚ ಯೋಜನೆಗಳು ಅನುಷ್ಟಾನಗೊಂಡಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಂಪತ್ತಿನ ಮರು ಹಂಚಿಕೆ
ಇದು ಉದ್ಯೋಗ ಸೃಜಿಸಿ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದಾಗಿದೆ, ನಿಷ್ಪಕ್ಷಪಾತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ, ಸಂಪತ್ತಿನ ಮರು ಹಂಚಿಕೆ ಮಾಡುವ ಕಾರ್ಯಕ್ರಮಗಳು ಇವಾಗಿವೆ ಎಂದಿದ್ದಾರೆ.