ವಾರ್ಷಿಕ ಅನುದಾನದ ಪಕ್ಷಿ ನೋಟ ಜನರಿಗೂ ತಿಳಿಯಲಿ
ಬೆಂಗಳೂರು: ಹಣಕಾಸು ಸಚಿವರು ರಾಜ್ಯ ಬಜೆಟ್ ತಯಾರು ಮಾಡುವ ಮಾದರಿಯಲ್ಲೇ ಗ್ರಾಮ ಪಂಚಾಯತ್‌ಗಳೂ ತಮ್ಮ ವಾರ್ಷಿಕ ಖರ್ಚು-ವೆಚ್ಚಗಳಿಗೆ ಪಂಚಾಯತ್ ಮುಂಗಡಪತ್ರ ಮಂಡಿಸಿ ಅನುಮೋದನೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುವಂತೆ ಸರ್ಕಾರ ಆದೇಶ ಮಾಡಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಎಲ್ಲಾ ಪಂಚಾಯತ್‌ಗಳ ಅಧ್ಯಕ್ಷರಿಗೆ ಪತ್ರ ಬರೆದು, ಕಡ್ಡಾಯವಾಗಿ ಆರ್ಥಿಕ ಸ್ಥಿತಿಗತಿ ಮತ್ತು ಯಾವ ಬಾಬ್ತು, ಎಷ್ಟು ವೆಚ್ಚ ಮಾಡುತ್ತೀರಿ ಎಂಬುದನ್ನು ಬಜೆಟ್‌ನಲ್ಲಿ ಘೋಷಿಸಿ, ಸಾರ್ವಜನಿಕಗೊಳಿಸಬೇಕು ಎಂದಿದ್ದಾರೆ.
ರಾಜ್ಯದ ಗಮನಕ್ಕೂ ಬಾರದೆ ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಕೆಲವು ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತದೆ, ಇದಲ್ಲದೆ, ರಾಜ್ಯವೂ ವಾರ್ಷಿಕ ಹಣ ನಿಗದಿಪಡಿಸಿದೆ.
ಇದೆಲ್ಲದಕ್ಕೂ ಮಿಗಿಲಾಗಿ ಸ್ಥಳೀಯವಾಗಿ ನೀವು ಸಂಗ್ರಹಿಸುವ ಸಂಪನ್ಮೂಲವೂ ಸೇರಿದಂತೆ ಎಲ್ಲವನ್ನೂ ಕ್ರೂಡೀಕರಿಸಿ ಬಜೆಟ್ ಸಿದ್ಧಪಡಿಸಿ.
ಕೆಲವು ಪಂಚಾಯತ್‌ಗಳಲ್ಲಿ ಆರ್ಥಿಕ ಶಿಸ್ತು ಇಲ್ಲದಿರುವುದು ಲೆಕ್ಕ ಪರಿಶೋಧನಾ ವರದಿಗಳಿಂದ ತಿಳಿದುಬಂದಿದೆ. ಅಧಿಕಾರ ವಿಕೇಂದ್ರೀಕರಣ ದೃಷ್ಟಿಯಿಂದ ಮೂರು ಹಂತದ ಆಡಳಿತವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದರೂ, ನೀವು ಆರ್ಥಿಕ ಶಿಸ್ತಿನಲ್ಲಿ ಎಡವುತ್ತಿದ್ದೀರಿ.
ಸ್ಥಳೀಯ ಅಭಿವೃದ್ಧಿ ಸೇರಿದಂತೆ ಯಾವುದೇ ಆಡಳಿತಾತ್ಮಕ ವಿಷಯಗಳು ನಿಮ್ಮ ಗಮನಕ್ಕೆ ಮತ್ತು ಅನುಮೋದನೆಗೆ ಬರುತ್ತವೆ, ವಾರ್ಷಿಕ ಅನುದಾನದಲ್ಲಿ ನೀವು ಮುಂದೇನು ಮಾಡುತ್ತೀರಿ ಎಂಬ ಪಕ್ಷಿ ನೋಟ ನಿಮ್ಮ ಪಂಚಾಯತ್ ವ್ಯಾಪ್ತಿಯ ಜನರಿಗೂ ಮತ್ತು ಇಲಾಖೆಗೂ ತಿಳಿಯಬೇಕಿದೆ.
ಸಂಪನ್ಮೂಲಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯ
ಗುರಿಯಿಟ್ಟುಕೊಂಡು ಸಂಪನ್ಮೂಲವನ್ನು ಕ್ರೋಡೀಕರಿಸಿ ಮತ್ತು ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಹಣ ವೆಚ್ಚ ಮಾಡಿ.
ಇದನ್ನು ಬಿಟ್ಟು ಒತ್ತಡ, ಬಲವಂತಕ್ಕೆ ಮಣಿದು ಹಣ ದುರುಪಯೋಗ ಆಗುವುದು ಬೇಡ. ನಿಮ್ಮ ಖಜಾನೆಯ ಮಾಹಿತಿ ಸಾರ್ವಜನಿಕರಿಗೆ ತಿಳಿದರೆ, ಅವರು ಸ್ಥಳೀಯ ಸಮಸ್ಯೆಗಳನ್ನು ಹೇಳಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಮುಂದೆ ಬಜೆಟ್ ಮಂಡನೆ ಕಡ್ಡಾಯ
ರಾಜ್ಯ ಸರ್ಕಾರ ಹೇಗೆ ತನ್ನ ಆರ್ಥಿಕ ಸ್ಥಿತಿಗತಿಗಳನ್ನು ಜನರ ಮುಂದಿಟ್ಟು ಖರ್ಚು-ವೆಚ್ಚಗಳನ್ನು ತೋರಿಸುತ್ತದೆಯೋ ಅದೇ ರೀತಿ ನೀವು ಇನ್ನು ಮುಂದೆ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳೂ ಬಜೆಟ್ ಸಿದ್ಧಪಡಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕು.
ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಬಾಬ್ತುಗಳಡಿ ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆ ಒಳಗೊಂಡಂತೆ ಗ್ರಾಮ ಪಂಚಾಯತ್ ಆಯವ್ಯಯ (ಪಂಚಾಯತ್ ಬಜೆಟ್) ಕಡ್ಡಾಯವಾಗಿ ತಯಾರಿಸಿ ಮಾರ್ಚ್ 10ರೊಳಗೆ ಗ್ರಾಮ ಪಂಚಾಯತ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು, ಪಂಚಾಯತ್‌ಗಳು ಬಜೆಟ್ ಮಂಡಿಸುವುದು ಕಡ್ಡಾಯವಾಗಿರುತ್ತದೆ.
ಗ್ರಾಮ ಪಂಚಾಯತ್‌ಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಶಾಸನಬದ್ಧ ಅನುದಾನ, ವಿವಿಧ ಯೋಜನೆಗಳಡಿ ದೊರೆಯುವ ಅನುದಾನದ ಜೊತೆಗೆ ಸ್ವಂತ ಸಂಪನ್ಮೂಲ ಸಂಗ್ರಹಿಸಲು ಅವಕಾಶವಿರುವುದರಿಂದ ಎಲ್ಲ ಮೂಲಗಳನ್ನು ಕ್ರೋಡೀಕರಿಸಿ ಗ್ರಾಮ ಪಂಚಾಯತ್ ಸಭೆಯಲ್ಲಿ ಅನುಮೋದನೆ ಪಡೆದು ತಾಲ್ಲೂಕು ಪಂಚಾಯತ್‌ಗೆ ಕಳುಹಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.