ಮಧುಮೇಹ ನಿಯಂತ್ರಣ; ಕೆಟ್ಟ ಕೊಬ್ಬು ಕರಗಿಸಲು ಸಹಕಾರಿ
ಸುಲಭ, ಸರಳ ಹಾಗೂ ಪರಿಣಾಮಕಾರಿ ಅಭ್ಯಾಸದಿಂದ ಮಾಡುವ ಯೋಗಾ ಮುದ್ರೆಗಳಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಪ್ರತಿಯೊಂದು ಮುದ್ರೆಯು ನಮ್ಮ ಆರೋಗ್ಯ ಮತ್ತು ಕ್ಷೇಮವನ್ನು ವೃದ್ಧಿಸುತ್ತದೆ. ಸೂರ್ಯ ಮುದ್ರೆಯು ದೇಹದಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಇದು ದೇಹದೊಳಗೆ ಶಾಖವನ್ನು ಹೆಚ್ಚಿಸುವ ಮುದ್ರೆಯಾಗಿದ್ದು, ಮನಸ್ಸು ಮತ್ತು ದೇಹವನ್ನು ಪುನರ್ ಯೌವ್ವನಗೊಳಿಸುತ್ತದೆ.
ಇದು ಪ್ರಮುಖ ಹಸ್ತ ಮುದ್ರೆಗಳಲ್ಲಿ ಒಂದಾಗಿದ್ದು, ಇದನ್ನು ಅಗ್ನಿಮುದ್ರೆ ಎಂದೂ ಕೂಡ ಕರೆಯುತ್ತಾರೆ. ದೇಹದೊಳಗಿನ ಪೃಥ್ವಿಯ ಅಂಶವನ್ನು ಕಡಿಮೆಗೊಳಿಸಿ ಬೆಂಕಿಯನ್ನು ಹೆಚ್ಚಿಸುವ ಸನ್ನೆಯಾಗಿದೆ. ಹಾಗಾಗಿ ಪೃಥ್ವಿ ಶಮಕ್ ಮುದ್ರೆ ಎಂದು ಕರೆಯುವುದುಂಟು. ಉಂಗುರದ ಬೆರಳು ಸೂರ್ಯನ ಶಾಖ, ಆರೋಗ್ಯ ಮತ್ತು ಶಕ್ತಿಯ ಪ್ರತಿನಿಧಿ ಹಾಗೂ ಮನೋ ಚಾಂಛಲ್ಯದ ನಿಯಂತ್ರಣವಲ್ಲದೆ, ಲೈಗಿಂಕತೆಯ ಸಂಕೇತವಾಗಿದೆ.
ದೇಹದಲ್ಲಿನ ಪೃಥ್ವಿಯ ಅಂಶವೆಂದರೆ ಕೊಬ್ಬು. ಶಾಖದ ಅಂಶ ಸೂರ್ಯ. ತೆಗೆದುಕೊಳ್ಳುವ ಆಹಾರವು ಪೃಥ್ವಿಯ ಅಂಶವಾದರೆ, ಪಚನಕ್ರಿಯೆಗೆ ಒಳಗಾಗುವ ಸಂದರ್ಭದಲ್ಲಿ ಶಾಖದ ಸಮತೋಲನ ಅವಶ್ಯಕವಾಗಿರುತ್ತದೆ. ಪೃಥ್ವಿಯ ಅಂಶವಾದ ಉಂಗುರದ ಬೆರಳನ್ನು ಬೆಂಕಿಯ ಅಂಶವಾದ ಹೆಬ್ಬೆರಳನ್ನು ಒತ್ತಿದಾಗ ಉಂಗುರದ ಬೆರಳಿನಲ್ಲಿನ ಪೃಥ್ವಿಯ ಅಂಶವು ಹೊರ ಹಾಕಲ್ಪಡುತ್ತದೆ. ಹೆಬ್ಬೆರಳುಗಳಲ್ಲಿ ವಾಸಿಸುವ ಬೆಂಕಿಯ ಅಂಶವು ಹೆಚ್ಚಾಗುತ್ತದೆ. ದೈಹಿಕ ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಎಷ್ಟು ಮುಖ್ಯವೋ, ದೇಹದೊಳಗಿನ ಪೃಥ್ವಿಯ ಅಂಶವನ್ನು ಕರಗಿಸಲು ಸೂರ್ಯ ಮುದ್ರಾ ಅಷ್ಟೇ ಪ್ರಯೋಜನಕಾರಿಯಾಗಿದೆ.
ಸೂರ್ಯನ ಪ್ರಕಾಶದಿಂದ ಪ್ರಕೃತಿ ನಳನಳಿಸುವಂತೆ ಮನುಷ್ಯನ ದೇಹದಲ್ಲಿ ಸೂರ್ಯ ರಶ್ಮಿಗಳು ವಿಟಮಿನ್ ಡಿ3ಯಾಗಿ ಶಕ್ತಿ ನೀಡುವಂತೆ ಸೂರ್ಯ ಮುದ್ರಾ ಕೂಡಾ ದೇಹದೊಳಗಿನ ಶಾಖದ ಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದೊಳಗೆ ಬೆಂಕಿಯ ಅಂಶದ ಶಕ್ತಿಯನ್ನು ಸಕ್ರಿಯಗೊಳಿಸುವ ಮೂಲಕ ಸೂರ್ಯ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸೋಮಾರಿಯಾಗಿರುವ ಆಲಸ್ಯ ಮನುಷ್ಯರಿಗೆ ಸೂರ್ಯ ಮುದ್ರೆಯು ಶಕ್ತಿಯನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸಲಿದೆ. ಎರಡು ಕಾರಣಗಳಿಗಾಗಿ ಸೂರ್ಯ ಮುದ್ರೆಯು ತೂಕ ನಷ್ಟಕ್ಕೆ ಸಹಕಾರಿಯಾಗಲಿದೆ.
- ಭೂಮಿಯ ಅಂಶವನ್ನು ಕಡಿಮೆ ಮಾಡುವ ಮೂಲಕ ದೇಹದ ಅತಿಯಾದ ಕೊಬ್ಬನ್ನು ಕರಗಿಸುತ್ತದೆ. ನಾವು ಹೆಬ್ಬೆರಳಿನ ತಳದಲ್ಲಿ ಉಂಗುರದ ಬೆರಳನ್ನು ಸ್ಪರ್ಶಿಸಿದಾಗ ಈ ಕ್ರಿಯೆ ಉಂಟಾಗುತ್ತದೆ.
- ಚಯಾಪಚಯವನ್ನು ಹೆಚ್ಚಿಸಲು ದೇಹದೊಳಗೆ ಉರಿಯುತ್ತಿರುವ ಜಠರಾಗ್ನಿಯನ್ನು ಸಕ್ರಿಯಗೊಳಿಸುತ್ತದೆ.
ವಿಶ್ರಾಂತಿ ಅಥವಾ ಚಟುವಟಿಕೆಯ ಸಮಯದಲ್ಲಿ ಈ ಮುದ್ರೆಯನ್ನು ಮಾಡುವುದರಿಂದ ಹೆಚ್ಚಿನ ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದಾಗಿದೆ. ಕಾರ್ಡಿಯೋ ವ್ಯಾಯಾಮದಂತಹ ತೂಕ ನಷ್ಟಕ್ಕೆ ಕೆಲಸ ಮಾಡುತ್ತದೆ. ಈ ಮುದ್ರೆಯನ್ನು ಪ್ರತಿನಿತ್ಯ ಹಾಕುವುದರಿಂದ ನೀವು ತಿನ್ನುವುದಕ್ಕಿಂತ ಹೆಚ್ಚು ಕ್ಯಾಲರಿಗಳನ್ನು ಸುಡುತ್ತೀರಿ. ಸೂರ್ಯಮುದ್ರೆಯು ಬೆಂಕಿಯ ಅಂಶವನ್ನು ಹೆಚ್ಚಿಸುವುದರಿಂದ ಜೀರ್ಣಕ್ರಿಯೆ, ಕಣ್ಣುಗಳು ಒಟ್ಟಾರೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಸೂರ್ಯ ಮುದ್ರೆಯ ಪ್ರಯೋಜನಗಳು
ಸೂರ್ಯ ಮುದ್ರೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಜೀರ್ಣ, ಮಲಬದ್ಧತೆ, ಆಮ್ಲೀಯತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತ ಅಥವಾ ಪಾರ್ಶ್ವ ವಾಯು ಸಾಧ್ಯೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಆಂತರಿಕ ಶಕ್ತಿಯನ್ನು ಹೆಚ್ಚಿಸುವುದರಿಂದ ಮೇದೋಜೀರಕಾಂಗ ಗ್ರಂಥಿಯು ಹೊಸ ಇನ್ಸುಲಿನ್ ಉತ್ಪಾದನೆಯನ್ನು ಮಾಡಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ನಡುಕ, ಒಣ ಚರ್ಮ, ಗಂಟಲು ನೋವು, ನೆಗಡಿ, ಕೀಲು ನೋವು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವಾಗಿದೆ ಈ ಸೂರ್ಯ ಮುದ್ರಾ. ಕಣ್ಣುಗಳ ಮಸುಕು ದೃಷ್ಟಿ ಹಾಗೂ ಲುಕೋಮಾದಂತಹ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಬ್ಬೆರಳಿನ ಬುಡವು ಥೈರಾಯಿಡ್ ಗ್ರಂಥಿಗೆ ಒತ್ತಡದ ಬಿಂದುವಾಗಿದೆ. ಆದ್ದರಿಂದ ಸೂರ್ಯ ಮುದ್ರೆಯಲ್ಲಿ ಉಂಗುರದ ಬೆರಳನ್ನು ಇಡುವುದರಿಂದ ಥೈರಾಯಿಡ್ ನಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರಲಿವೆ. ನಿಯಮಿತವಾಗಿ ಈ ಮುದ್ರೆಯನ್ನು ಅಭ್ಯಸಿಸುವುದರಿಂದ ಮನಸು ಚುರುಕುಗೊಳ್ಳುತ್ತದೆ. ಮನೋ ಸಂಕಲ್ಪವನ್ನು ಬಲಪಡಿಸುವ ಮೂಲಕ ಜೀವನವನ್ನು ಶಕ್ತಿಯುತಗೊಳಿಸುತ್ತದೆ. ಮಾನಸಿಕ ಖಿನ್ನತೆಯನ್ನು ತೊಡೆದು ಹಾಕಲು ಪ್ರಯೋಜನಕಾರಿಯಾಗಿದೆ.
ದಿನಕ್ಕೆ ಎರಡು ಬಾರಿ 20 ನಿಮಿಷಗಳ ಕಾಲ ಅಭ್ಯಾಸ ಮಾಡಿದರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಯೂರಿಯಾವನ್ನು ನಿಯಂತ್ರಿಸುತ್ತದೆ. ದೇಹದ ವಿವಿಧ ಅಂಗಗಳಲ್ಲಿ ಶೇಖರಣೆಯಾಗುವ ಅತಿಯಾದ ದ್ರವತೆ ಮತ್ತು ಊತವನ್ನು ತೆಗೆದುಹಾಕುತ್ತದೆ. ದೇಹದಲ್ಲಿ ಬೆವರುವಿಕೆ ಕಡಿಮೆಯಾಗುತ್ತದೆ.
ಯಾವ ಸಮಯದಲ್ಲಿ ಮಾಡಬೇಕು
ಸೂರ್ಯೋದಯದ ಸಮಯದಲ್ಲಿ ಅಥವಾ ಆಹಾರ ಸೇವಿಸುವ ಮೊದಲು ಸೂರ್ಯಮುದ್ರೆ ಮಾಡುವುದು ಉತ್ತಮ. ಆಹಾರ ಸೇವನೆಯ ನಂತರವೂ ಮಾಡಬಹುದು. ಆದರೆ, ಸೇವಿಸಿದ ಎರಡು ಗಂಟೆಗಳ ನಂತರ ಇದನ್ನು ಮಾಡಬಹುದು. ಮುಂಜಾನೆ ಸೂರ್ಯೋದಯದ ಸಂದರ್ಭದಲ್ಲಿ ಮಾಡಿದರೆ, ಸೂರ್ಯನ ಶಕ್ತಿಯನ್ನು ದೇಹಕ್ಕೆ ಹೀರಿಕೊಳ್ಳಬಹುದು. ಆದ್ದರಿಂದ ಬೆಳಗಿನಜಾವ ನಾಲ್ಕರಿಂದ ಆರು ಗಂಟೆಯ ಒಳಗೆ ಅಭ್ಯಾಸ ಮಾಡಬೇಕು. ಸೂರ್ಯನ ಪ್ರಖರತೆ ಕಡಿಮೆಯಾದ ನಂತರವೂ ಅಭ್ಯಾಸವನ್ನು ಮಾಡಬಹುದು. ಈ ಮುದ್ರೆಯನ್ನು ನಿಂತಿರುವ, ಕುಳಿತುಕೊಳ್ಳುವ ಹಾಗೂ ಮಲಗಿರುವ ಭಂಗಿಯಲ್ಲಿ ಅಭ್ಯಾಸ ಮಾಡಬಹುದು. ಅಷ್ಟೇ ಅಲ್ಲ; ನಡೆಯುವಾಗಲೂ ಈ ಮುದ್ರೆಯನ್ನು ಮಾಡಬಹುದು.
ಮಾಡುವ ಕ್ರಮ ಹೇಗೆ?
ಮೊದಲಿಗೆ ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಬೆನ್ನು ಮತ್ತು ತಲೆ ನೇರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೈಗಳನ್ನು ಮೊಣಕಾಲುಗಳ ಮೇಲೆ. ಅಂಗೈಯನ್ನು ಆಕಾಶ ನೋಡುವಂತೆ ಇರಿಸಿಕೊಳ್ಳಿ. ಉಂಗುರದ ಬೆರಳನ್ನು ಮಡಚಿ ಹೆಬ್ಬೆರಳಿನ ಬುಡವನ್ನು ಮುಟ್ಟಿಸಿ. ಮಡಿಚಿದ ಉಂಗುರದ ಬೆರಳಿನ ಮೇಲೆ ಹೆಬ್ಬೆರಳನ್ನು ಇರಿಸಿ. ಉಳಿದ ಬೆರಳುಗಳನ್ನು ಆರಾಮಾಗಿ ನೇರವಾಗಿ ಜೋಡಿಸಿ ಇಲ್ಲವೆ ನೇರವಾಗಿ ಇರಿಸಿ. ಬೆಂಕಿಯ ಅಂಶವನ್ನು ಹೆಚ್ಚಿಸಲು ಉಂಗುರದ ಬೆರಳಿನ ಮೇಲೆ ಮಧ್ಯಮ ಪ್ರಮಾಣದ ಒತ್ತಡವನ್ನು ಮಾತ್ರ ಇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. 10ರಿಂದ 20 ನಿಮಿಷಗಳ ಕಾಲ ಮುದ್ರೆಯನ್ನು ಹಿಡಿದುಕೊಳ್ಳಿ.
ಅವಧಿ ಮುಗಿದ ನಂತರ ಬೆರಳುಗಳನ್ನು ನಿಧಾನವಾಗಿ ಬೇರ್ಪಡಿಸಿ. ಆದರೆ, ತಕ್ಷಣ ಅಲ್ಲಿಂದ ಎದ್ದೇಳಬೇಡಿ. ಕಣ್ಣುಮುಚ್ಚಿಕೊಂಡೇ ಒಂದೆರಡು ನಿಮಿಷಗಳ ಕಾಲ ನಿಮ್ಮ ಸುತ್ತಲಿನ ಚಲನಗಳ ಬಗ್ಗೆ ತಿಳಿದುಕೊಳ್ಳಿ. ಆ ನಂತರ ಅಲ್ಲಿಂದ ಎದ್ದೇಳಿ. ಮುದ್ರೆಯನ್ನು ಅಭ್ಯಾಸ ಮಾಡುವ ಮೊದಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿ. ಅಲ್ಲದೆ, ನೀರಿನ ಬಾಟಲನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಸೂರ್ಯಮುದ್ರೆಯು ಬೆಂಕಿಯ ಅಂಶವನ್ನು ದೇಹದಲ್ಲಿ ಹೆಚ್ಚಿಸುವುದರಿಂದ ದೇಹ ತಕ್ಷಣ ನಿರ್ಜಲೀಕರಣಕ್ಕೆ ಒಳಗಾಗಬಹುದು. ಹಾಗಾಗಿ ಸೂರ್ಯಮುದ್ರೆಯ ನಂತರ ಪ್ರಾಣ ಮುದ್ರೆಯನ್ನು ಅಭ್ಯಾಸ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಸೂರ್ಯ ಮುದ್ರೆಯ ಅಡ್ಡಪರಿಣಾಮಗಳು
ಕೆಲವು ಸಂದರ್ಭಗಳಲ್ಲಿ ಸೂರ್ಯ ಮುದ್ರೆ ಮಾಡುವುದನ್ನು ತಪ್ಪಿಸಬೇಕು. ಜ್ವರ, ದೇಹದ ಉಷ್ಣತೆ ಹೆಚ್ಚಿರುವ ಸಂದರ್ಭದಲ್ಲಿ ಈ ಮುದ್ರೆಯನ್ನು ಮಾಡಬಾರದು. ಕಡಿಮೆ ತೂಕವನ್ನು ಹೊಂದಿರುವ ವ್ಯಕ್ತಿ, ಗರ್ಭಿಣಿಯರು ಈ ಮುದ್ರೆಗಳನ್ನು ಮಾಡಬಾರದು. ಪೈಲ್ಸ್, ಮೈಗ್ರೈನ್ ಇರುವಾಗ ಈ ಮುದ್ರೆಯನ್ನು ಹಾಕಬಾರದು. ಬೇಸಿಗೆಯಲ್ಲಿ ಈ ಮುದ್ರೆಯನ್ನು ಸಾಧ್ಯವಾದಷ್ಟು ಮಾಡದಿರುವುದು ಉತ್ತಮ. ಮಾಡಲೇಬೇಕಾದ ಸಂದರ್ಭವಿದ್ದಲ್ಲಿ ಒಂದು ಲೋಟ ನೀರು ಕುಡಿದು ನಂತರ ಮಾಡುವುದು ಉತ್ತಮ.
ಹೆಣ್ಣುಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಈ ಮುದ್ರೆ ಮಾಡದಿರುವುದು ಒಳ್ಳೆಯದು. ಊಟವಾದ ತಕ್ಷಣ ಈ ಮುದ್ರೆಯನ್ನು ಹಾಕುವುದರಿಂದ ಕಿಬ್ಬೊಟ್ಟೆಯ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಈ ಮುದ್ರೆಯನ್ನು ಹಾಕುವುದರಿಂದ ಚರ್ಮದ ಮೇಲೆ ಗಾಯಗಳಾಗುವುದು. ತಲೆ ತಿರುಗುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಮುದ್ರೆಯನ್ನು ಮೊದಲು ಪ್ರಾರಂಭಿಸುವಂಥವರು ಕೇವಲ 5 ನಿಮಿಷಗಳ ಕಾಲ ಈ ಮುದ್ರೆಯನ್ನು ಒಗ್ಗಿಸಿಕೊಂಡರೆ ಸಾಕು. ಕಫ ಪ್ರಕೃತಿಯವರಾಗಿದ್ದರೆ, ಈ ಮುದ್ರೆ ಹಾಕುವುದರಿಂದ ತಲೆಕೂದಲು ಉದರಬಹುದು. ಪರಿಣಿತರ ಮಾರ್ಗದರ್ಶನದೊಂದಿಗೆ ಮುದ್ರೆ ಮಾಡುವುದು ಉತ್ತಮ.