ರಾಜ್ಯಸಭೆ ಚುನಾವಣೆ ಗೆಲುವಿಗೆ ಹಲವು ತಂತ್ರಗಾರಿಕೆ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಸದ್ದು ಜೋರಾಗಿದೆ.
ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಪೇಂದ್ರ ರೆಡ್ಡಿ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗೇ ವಾಗ್ವಾದಕ್ಕೆ ಇಳಿದಿದ್ದಾರೆ. ಉಭಯ ನಾಯಕರು ಕುದುರೆ ವ್ಯಾಪಾರದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
ನಾಮಪತ್ರ ಹಿಂಪಡೆಯಲು ಫೆಬ್ರವರಿ 20 ಕಡೆಯ ದಿನವಾಗಿದೆ. ರೆಡ್ಡಿ ಕಣದಲ್ಲಿ ಉಳಿಯುವುದು ಖಚಿತವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರಲ್ಲಿ ತಲ್ಲಣ ಮೂಡಿದೆ.
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾದ ರಾಜ್ಯಸಭೆ ಚುನಾವಣೆ
ಚುನಾವಣೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಅದರಲ್ಲೂ ಆಡಳಿತಾರೂಢ ಪಕ್ಷಕ್ಕೆ ಮೂರು ಸ್ಥಾನಗಳು ನಿರಾಯಾಸವಾಗಿ ಗೆಲ್ಲುವ ಸಾಮರ್ಥ್ಯ ಇದ್ದರೂ ಆಪರೇಷನ್ ಬಿಜೆಪಿ-ಜೆಡಿಎಸ್ ಬಗ್ಗೆ ಸ್ವಲ್ಪ ಭಯ ಮೂಡಿದೆ.
ಇದಕ್ಕೆ ಪರ್ಯಾಯವಾಗಿ ಪ್ರತಿಪಕ್ಷದ ನಾಲ್ಕು ಸದಸ್ಯರ ಅಡ್ಡ ಮತದಾನ ಮಾಡಿಸಲು ಕೆಲವು ಸಚಿವರಿಗೆ ಹೊಣೆಗಾರಿಕೆ ವಹಿಸಲಾಗಿದೆ ಎನ್ನಲಾಗಿದೆ.
ಎಲ್ಲಿಯಾದರೂ ನಮ್ಮ ಮತಕ್ಕೆ ಪೆಟ್ಟು ಬಿದ್ದರೆ, ಹೆಚ್ಚುವರಿಯಾಗಿ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಅತೃಪ್ತರನ್ನು ಸೆಳೆಯುವ ಪ್ರಯತ್ನ ಆರಂಭಗೊಂಡಿದೆ.
ಬೆಂಗಳೂರು ಬಿಡಿ: ಚುನಾವಣೆಗೆ ಸಿದ್ಧರಾಗಿ
ರೆಡ್ಡಿ ಗೆಲುವಿಗಾಗಿ ತೆರೆಮರೆಯಲ್ಲೇ ಭಾರೀ ತಂತ್ರಗಾರಿಕೆ ನಡೆದಿದ್ದು, ಇದರಲ್ಲಿ ದೆಹಲಿಯ ಕೆಲವು ನಾಯಕರು ಕೈಜೋಡಿಸಿದ್ದಾರೆ.
ಇದರ ಸುಳಿವು ದೊರೆಯುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರೇ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ.
ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಆಡಳಿತ ಪಕ್ಷವೇ ಸ್ವಲ್ಪ ಅದುರಿದಂತೆ ಕಂಡಿದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆ ಪಕ್ಷದ ನಾಯಕರು ತಮ್ಮ ಮತಗಳು ಅಡ್ಡ ಮತದಾನವಾಗದಂತೆ ಜಾಗ್ರತೆ ವಹಿಸಿದ್ದಾರೆ. ಇದರ ಜೊತೆಗೆ ಬಿಜೆಪಿ-ಜೆಡಿಎಸ್ ವಿರುದ್ಧ ಹರಿಹಾಯುವ ಕೆಲಸವು ನಡೆದಿದೆ.
ಕಾಂಗ್ರೆಸ್ ತಂತ್ರಗಾರಿಕೆ ಮತ್ತು ಮುಖಂಡರುಗಳು ಮಾಡಿರುವ ಆರೋಪಗಳ ಬಗ್ಗೆ ಕುಮಾರಸ್ವಾಮಿ ದಾಖಲೆ ಸಮೇತ ಮಾಹಿತಿ ನೀಡಲಿದ್ದಾರಂತೆ.
ಕುಮಾರಸ್ವಾಮಿ ಮೇಲೆ ಧಮಕಿ ಹಾಕಿದ ಆರೋಪ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಶಾಸಕರನ್ನು ಹೊತ್ತೊಯ್ಯಲು ಜೆಡಿಎಸ್ ನಾಯಕ ಕುಮಾರಸ್ವಾಮಿ ಧಮಕಿ ಹಾಕುವ ಮಟ್ಟಕ್ಕಿಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಅಜಯ್ ಮಾಕೆನ್ ಅವರು ಕಣಕ್ಕಿಳಿದಿದ್ದು, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್ ಪಕ್ಷದಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ಕಣ್ಣು ಹಾಕಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ನಮ್ಮ ಪಕ್ಷದ ಶಾಸಕರಿಗೆ ಕರೆ ಮಾಡಿ ಆಫರ್ ಕೊಡುತ್ತಿರುವ ಕುಮಾರಸ್ವಾಮಿ, ಧಮಕಿಯನ್ನೂ ಹಾಕುತ್ತಿರುವ ಕುರಿತು ನನಗೆ ಮಾಹಿತಿ ಬಂದಿದೆ. ಅವರು, ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಯಾರಿಗೆ ಧಮಕಿ ಹಾಕುತ್ತಿದ್ದಾರೆ ಎಂಬ ಬಗ್ಗೆ ಸ್ವತಃ ಶಾಸಕರೇ ತಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ನಮ್ಮ ಪಕ್ಷದ ಶಾಸಕರ ಮೇಲೆ ಕಣ್ಣು ಹಾಕುವ ಬದಲು, ಕುಮಾರಸ್ವಾಮಿ ಅವರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದರಲ್ಲದೆ, ಈ ವಿಷಯದಲ್ಲಿ ನಾನು ಸದ್ಯ ಹೆಚ್ಚು ಮಾತನಾಡುವುದಿಲ್ಲ ಎಂದು ನುಡಿದರು.
ವಿರೋಧ ಪಕ್ಷಗಳು ನಿಮ್ಮ ಮತಗಳಿಗೆ ಕೈ ಹಾಕುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಐದನೇ ಅಭ್ಯರ್ಥಿಯನ್ನು ಹಾಕಿ ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಮಗೆ ಬೇರೆಯವರ ಮತಗಳ ಅಗತ್ಯವಿಲ್ಲ. ನಾವು ಗೆದ್ದಿರುವ ನೂರಾ ಮೂವತ್ತಾರು ಶಾಸಕರ ಜತೆ ಪಕ್ಷೇತರರೂ ನಮ್ಮ ಜತೆಗಿದ್ದಾರೆ ಎಂದರು.
ಕುಮಾರಸ್ವಾಮಿ ಅವರ ಪ್ರಯತ್ನದ ಬಗ್ಗೆ ಅನಿವಾರ್ಯವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ ಅವರು, ಯಾವ ಕಾರಣಕ್ಕೂ ನಮ್ಮ ಮನೆ ಹಾಳಾಗಲು ಬಿಡುವುದಿಲ್ಲ ಎಂದು ಹೇಳಿದರು.