ಲೋಕಸಭೆ ಚುನಾವಣೆ ಸ್ಪರ್ಧೆ ಸುದ್ದಿ ಬೆನ್ನಲೆ ಕಾಂಗ್ರೆಸ್ ಸರ್ಕಾರದ ಯತ್ನ
ಬೆಂಗಳೂರು: ಸಾರ್ವಜನಿಕ ಜೀವನಕ್ಕೆ ಪ್ರಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ಪಾದಾರ್ಪಣೆ ಮಾಡುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಯದೇವ ಆಸ್ಪತ್ರೆಯಲ್ಲಿ ಕಳೆದ ಹದಿನಾರು ವರ್ಷಗಳಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ನೇಮಕಾತಿ ಬಗ್ಗೆ ತನಿಖೆ ನಡೆಸಲು ಸಿದ್ಧತೆ ಆರಂಭಿಸಿದೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಲು ಮುಂದಾಗಿರುವ ಬೆನ್ನಲ್ಲೇ ಅವರನ್ನು ಹಿಮ್ಮೆಟ್ಟಿಸಿ ತಂತ್ರವಾಗಿ ತನಿಖೆಯ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಕಳೆದ ಮೂರು ಬಾರಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಮಲದ ಚಿಹ್ನೆಯಡಿ ಮಂಜುನಾಥ್ ಕಣಕ್ಕಿಳಿದರೆ, ಚುನಾವಣಾ ಸ್ಪರ್ಧೆ ತೀವ್ರ ಪೈಪೋಟಿಯಾಗಲಿದೆ ಎಂಬ ದೃಷ್ಟಿಯಿಂದ ತನಿಖೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಉನ್ನತ ಮೂಲಗಳ ಪ್ರಕಾರ ಉಪ ಮುಖ್ಯಮಂತ್ರಿ ಸಚಿವಾಲಯವು ಮಂಜುನಾಥ್ ಅವರ ಆಡಳಿತಾವಧಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಇವರ ಆಡಳಿತಾವಧಿಯಲ್ಲಿ ಮೈಸೂರು ಮತ್ತು ಕಲ್ಬುರಗಿಯಲ್ಲಿ ಜಯದೇವ ಆಸ್ಪತ್ರೆ ಶಾಖೆಯ ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕಾತಿ, ಪಿಠೋಪಕರಣ ಖರೀದಿ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಆದರೆ, ಈ ಯಾವುದೇ ವಿಚಾರಗಳು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ಬಂದಿಲ್ಲ ಎಂಬುದನ್ನು ಅವರ ಕಚೇರಿ ಸ್ಪಷ್ಟಪಡಿಸಿದೆ.
ಉಪ ಮುಖ್ಯಮಂತ್ರಿಗಳು ಜಯದೇವ ಆಸ್ಪತ್ರೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಒಂದು ವೇಳೆ ತನಿಖೆಗೆ ತೀರ್ಮಾನ ತೆಗೆದುಕೊಳ್ಳುವುದಾದರೆ, ವೈಯಕೀಯ ಶಿಕ್ಷಣ ಸಚಿವರ ಗಮನಕ್ಕೂ ಬಾರದೆ ಇಲಾಖಾ ಪ್ರಧಾನ ಕಾರ್ಯದರ್ಶಿ ಮೂಲಕ ತನಿಖೆಗೆ ಆದೇಶಿಸಬಹುದಾಗಿದೆ.
ಸರ್ಕಾರ ಇಂತಹ ಒಂದು ತೀರ್ಮಾನ ಕೈಗೊಳ್ಳಲು ಮುಂದಾಗಿದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸೇರಿದ ಮಂಜುನಾಥ್ ಅವರ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯವಿದೆ.
ಜಯದೇವ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗಿಂತ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಟ್ಟಕ್ಕೆ ಮಂಜುನಾಥ್ ಬೆಳೆಸಿದ್ದಾರೆ. ಯಾವುದೇ ರೀತಿಯ ತಪ್ಪು ಮಾಡಿದ್ದರೆ, ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಬೆಳೆಸಲು ಸಾಧ್ಯವಿರಲಿಲ್ಲ. ಲಕ್ಷಾಂತರ ರೋಗಿಗಳಿಗೆ ಸೇವೆ ಸಲ್ಲಿಸಲಾಗುತ್ತಿರಲಿಲ್ಲ. ಇಂತಹ ಹೆದರಿಕೆ-ಬೆದರಿಕೆಗೆ ಬಗ್ಗುವುದಿಲ್ಲ ಎಂದು ಗೌಡರ ಕುಟುಂಬದ ಮೂಲಗಳು ತಿಳಿಸಿವೆ.