ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಬರೆದಿರುವ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿದ್ದು, ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದು ಕಡ್ಡಾಯ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ಶಾಲೆಗಳಲ್ಲದೆ, ಸರ್ಕಾರಿ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳ ಪ್ರಾರಂಭದಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡಬೇಕು ಎಂಬುದು ಸರ್ಕಾರದ ಮೂಲ ಆದೇಶ ಎಂದರು.
ಪ್ರಿಂಟ್ ಮಿಸ್ಟೇಕ್‌ನಿಂದ ತಪ್ಪಾಗಿದೆ
ಈ ಮೊದಲು ಹೊರಡಿಸಿದ್ದ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್‌ನಿಂದ ತಪ್ಪು ಆಗಿದೆ, ಇಂದೇ ಶೀಘ್ರವೇ ಪ್ರಿಂಟ್ ಮಿಸ್ಟೇಕ್ ಸರಿ ಮಾಡಲಾಗುವುದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಎಂದರು.
ನಮಗೆ ಎಲ್ಲಾ ಶಾಲೆಗಳು ಒಂದೇ, ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ, ಅದು ಎಲ್ಲಾ ಶಾಲೆಗಳು ಅಂತಾ ಹಾಕಿಸುತ್ತೇವೆ, ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ, ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣ ಪುಟ್ಟ ಸಮಸ್ಯೆ ಆಗಿದೆ ಎಂದು ತಪ್ಪು ಒಪ್ಪಿಕೊಂಡರು.
ಸಚಿವರು ಕ್ಷಮೆ ಕೇಳಬೇಕು
ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ‘ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ತಿಳಿಸಲಾಗಿದೆ, ಇದರ ಅರ್ಥ ನಾಡಗೀತೆಯನ್ನು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಹಾಡಿದರೆ ಸಾಕು, ಖಾಸಗಿ ಶಾಲೆಗಳಲ್ಲಿ ಹಾಡಬೇಕಾಗಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ, ಸಚಿವರು ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ಸದಸ್ಯರ ಆಕ್ಷೇಪಕ್ಕೆ ಸಚಿವರು ನೀಡಿದ ಸ್ಪಷ್ಟನೆ ನಂತರ ವಿವಾದಕ್ಕೆ ತೆರೆ ಬಿದ್ದಿತು.