26 ಮತ್ತು 27 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ
ಬೆಂಗಳೂರು:ಪದವಿ, ಇಂಜನಿಯರಿಂಗ್, ಡಿಪ್ಲೊಮಾ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶ ಕಲ್ಪಿಸುವ ಬೃಹತ್ ಯುವಸಮೃದ್ಧಿ ಸಮ್ಮೇಳನ ಇದೇ 26 ಮತ್ತು 27ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಹಭಾಗಿತ್ವದಲ್ಲಿ ಯುವಸಮೃದ್ಧಿ ಸಮ್ಮೇಳನ ಆಯೋಜಿಸಲಾಗಿದೆ, ರಾಜ್ಯಾದ್ಯಂತ 31 ಸಾವಿರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ 500 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ, ಅಂದಾಜು ಒಂದು ಲಕ್ಷ ಹುದ್ದೆಗಳು ಲಭ್ಯವಿದ್ದು, ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಒದಗಿಸಲು ಇದು ವೇದಿಕೆಯಾಗಲಿದೆ.
ಉದ್ಯೋಗ ಮೇಳದಲ್ಲಿ 600 ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಹಾಕಲಾಗಿದೆ, ಅಭ್ಯರ್ಥಿಗಳು ಪ್ರತಿಯೊಂದು ಸ್ಟಾಲ್‌ಗೂ ಭೇಟಿ ನೀಡಿ, ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಎಲ್ಲಿ, ಯಾವ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಪಡೆಯಬಹುದಾಗಿದೆ, ಉದ್ಯೋಗ ಅರಸಿ ಬರುವವರಿಗೆ ಆಯಾ ಕಂಪನಿಗಳ ನುರಿತ ತಜ್ಞರು, ಪರಿಣಿತರು ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ತರಬೇತಿ ನಂತರ ಉದ್ಯೋಗ
ಉದ್ಯೋಗ ಮೇಳದಲ್ಲಿ ಕೆಲಸ ಸಿಗದವರಿಗೆ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ತರಬೇತಿ ನಂತರ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಉದ್ಯೋಗ ಮೇಳದಲ್ಲಿ ಹೆಸರು ನೋಂದಣಿ ಮಾಡಿಕೊಂಡವರಿಗೆ ಸ್ಟಾಲ್‌ಗಳ ಮಾಹಿತಿ ಕುರಿತು ಮೆಸೇಜ್ ಕಳಿಸಲಾಗುವುದು.
ಸ್ಕಿಲ್ ಗ್ಯಾಪ್ ಕೇಂದ್ರ
ಇದು ಕೇವಲ ಉದ್ಯೋಗ ಮಾತ್ರ ಕೊಡುವುದಲ್ಲ, ಸ್ಕಿಲ್ ಗ್ಯಾಪ್ ಸರಿಪಡಿಸುವ ಕೇಂದ್ರಗಳನ್ನು ತೆರೆಯಲಾಗಿದೆ, ನೋಂದಣಿಯಾದವರನ್ನು ಗುರುತಿಸಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುವುದು.
ಯುವಸಮೃದ್ಧಿ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದು, ಸಮ್ಮೇಳನಕ್ಕೆ ಬರುವವರಿಗೆ ಉಚಿತ ಊಟದ ವ್ಯವಸ್ಥೆ ಹಾಗೂ ಮೆಜೆಸ್ಟಿಕ್‌ನ ರೈಲ್ವೆ ಹಾಗೂ ಬಸ್ ನಿಲ್ದಾಣಗಳಿಂದ ಮತ್ತು ಶಾಂತಿನಗರ ಬಸ್ ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.