ಜೆಡಿಎಸ್ ಗೆ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳು
ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿದೇರ್ಶಕ ಡಾ.ಸಿ.ಎನ್. ಮಂಜುನಾಥ್ ಅವರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಸಿರು ನಿಶಾನೆ ತೋರಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಂಟುಂಬಕ್ಕೆ ಸೇರಿದ ಮಂಜುನಾಥ್ ಅವರನ್ನು ಬಿಜೆಪಿ ಚಿನ್ಹೆಯಡಿ ಬೆಂಗಳೂರು ಗ್ರಾಮಾಂತರ ಇಲ್ಲವೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಮಂಜುನಾಥ್ ಅವರನ್ನು ಕಣಕ್ಕಿಳಿಸುತ್ತಿರುವುದರಿಂದ ಜೆಡಿಎಸ್‌ಗೆ ನಾಲ್ಕು ಸ್ಥಾನಗಳ ಬದಲು ಮಂಡ್ಯ, ಹಾಸನ, ಕೋಲಾರ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರವಾಗಿದೆ.
ದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಸಿದ ಮಾತುಕತೆ ಸಂದರ್ಭದಲ್ಲಿ ಸೀಟು ಹಂಚಿಕೆ ಸೇರಿದಂತೆ ಕರ್ನಾಟಕದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ಮತ್ತೊಂದು ಕ್ಷೇತ್ರ ನೀಡುವ ಭರವಸೆ
ಚಿಕ್ಕಬಳ್ಳಾಪುರ ಇಲ್ಲವೆ ಹೈದರಾಬಾದ್ ಕರ್ನಾಟಕದಲ್ಲಿ ಮತ್ತೊಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಷಾ ಸಮ್ಮತಿಸಿದ್ದು, ಇದು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ನಂತರ ಜೆಡಿಎಸ್‌ಗೆ ನಾಲ್ಕನೇ ಕ್ಷೇತ್ರ ಯಾವುದು ಎಂಬುದು ಅಂತಿಮಗೊಳ್ಳಲಿದೆ.
ಕೇಂದ್ರ ಗೃಹ ಸಚಿವ ಅಮಿತಾ ಷಾ ಅವರ ಆಹ್ವಾನದ ಮೇರೆಗೆ ನಿನ್ನೆ ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಇಂದು ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.
ಅಲ್ಲದೆ, ನಿನ್ನೆ ರಾತ್ರಿ ಕೂಡಾ ಉಭಯ ನಾಯಕರು ಚರ್ಚೆ ಮಾಡಿದ್ದರು. ಇಂದು ಎರಡನೇ ಬಾರಿ ಮಾತುಕತೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ.
ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಕಣಕ್ಕಿಳಿಸಲು ಷಾ ಆಸಕ್ತಿ ತೋರಿರುವ ಜೊತೆಗೆ ಬೆಂಗಳೂರು ಉತ್ತರ ಕ್ಷೇತ್ರದ ಬಗ್ಗೆ ಮುಂದೆ ಪರಿಗಣಿಸೋಣ ಎಂದಿದ್ದಾರೆ.
ಮಂಡ್ಯ, ಹಾಸನಕ್ಕೆ ಸಂಬಂಧಿಸಿದಂತೆ ಯಾರು ಏನೇ ಹೇಳಿದರೂ ಇದೇ ಅಂತಿಮ. ನಿಮ್ಮ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ನಡೆಸಿ ಎಂದು ಅಮಿತ್ ಷಾ, ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.
ಎನ್ ಡಿಎ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಸ್ಪರ್ಧೆ
ಚರ್ಚೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖಂಡರ ನಡುವಿನ ಗೊಂದಲದ ಬಗ್ಗೆ ಷಾ ಮಾಹಿತಿ ಪಡೆದು ಕೆಲವು ಸಲಹೆಗಳನ್ನು ನೀಡಿದ್ದಾರೆನ್ನಲಾಗಿದೆ.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎಯ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಪೇಂದ್ರ ರೆಡ್ಡಿ ಗೆಲುವಿಗೆ ನಿಮ್ಮ ಪ್ರಯತ್ನ ಮುಂದುವರೆಸಿ, ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಉಳಿದಂತೆ ಚುನಾವಣಾ ಸಿದ್ಧತೆ, ಕಾಂಗ್ರೆಸ್ ಬಲಿಷ್ಠವಾದ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ ತಂತ್ರ ರೂಪಿಸುವ ಹಾಗೂ ಈ ಕ್ಷೇತ್ರಗಳಲ್ಲಿ ವರ್ಚಸ್ವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ.
ಜಂಟಿ ಹೋರಾಟ ನಡೆಸಲು ಷಾ ಸೂಚನೆದ
ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಎತ್ತುತ್ತಿರುವ ಅಪಸ್ವರಗಳನ್ನು ಷಾ ಗಮನಕ್ಕೆ ಕುಮಾರಸ್ವಾಮಿ ತಂದಿದ್ದಾರೆ.
ಅದೆಲ್ಲವನ್ನೂ ನನಗೆ ಬಿಡಿ, ನೀವು ನಿಮ್ಮ ಕೆಲಸ ಮಾಡಿಕೊಳ್ಳಿ, ಮೈತ್ರಿ ಕೂಟದಲ್ಲಿ ಯಾರಿಂದಲೂ, ಯಾರ ಕಡೆಯಿಂದಲೂ ಅಪಸ್ವರ ಬರುವುದು ಬೇಡ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ವೈಫಲ್ಯ ಹಾಗೂ ಅವರ ಮಂತ್ರಿಮಂಡಲದ ಕೆಲವು ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಜಂಟಿಯಾಗಿ ಹೋರಾಟ ನಡೆಸಿ.
ಚುನಾವಣೆಗೆ ಇನ್ನು ಸ್ವಲ್ಪ ದಿನಗಳಷ್ಟೇ ಉಳಿದಿದೆ, ಈಗಿನಿಂದಲೇ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿ ಮತಗಳು ಹಂಚಿ ಹೋಗದಂತೆ ನೋಡಿಕೊಳ್ಳಿ.
ನೀವು ಬಲಿಷ್ಠರಿರುವ ಕಡೆ ನಮ್ಮವರು ನಿಮಗೆ ಸಂಪುರ್ಣ ಬೆಂಬಲ ನೀಡಲಿದ್ದಾರೆ, ಅದೇ ರೀತಿ ನೀವು, ನಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದು ಕುಮಾರಸ್ವಾಮಿ ಅವರಿಗೆ ಷಾ ಕಿವಿಮಾತು ಹೇಳಿದ್ದಾರೆ.