ಸದನ ಮುಂದೂಡಿಕೆ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ಸಮಸ್ಯೆಯಿಂದ ವಿಧಾನಮಂಡಲದ ಇಂದಿನ ಪ್ರಮುಖ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ವಿಧಾನಮಂಡಲದ ಅಧಿಕೃತ ಕಾರ್ಯಕ್ರಮಗಳ ಪ್ರಕಾರ ಮುಖ್ಯಮಂತ್ರಿ ಅವರಿಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ, 2024-25ನೇ ಸಾಲಿನ ಮುಂಗಡಪತ್ರಕ್ಕೆ ಅನುಮೋದನೆ ಪಡೆದ ನಂತರ ಸದನಗಳನ್ನು ಅನಿದಿರ್ಷ್ಟಾವಧಿಗೆ ಮುಂದೂಡಬೇಕಿತ್ತು.
ಪೀಠಾಸೀನಾಧಿಕಾರಿಗಳಿಗೆ ಪತ್ರ
ಮುಖ್ಯಮಂತ್ರಿ ಅವರಿಗೆ ಫುಡ್ ಪಾಯಿಸನ್‌ನಿಂದ ಗಂಟಲು ನೋವು, ತೀವ್ರ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಅವರ ಸಚಿವಾಲಯ ಉಭಯ ಸದನಗಳ ಪೀಠಾಸೀನಾಧಿಕಾರಿಗಳಿಗೆ ಪತ್ರ ಬರೆದು, ಇಂದು ಮುಖ್ಯಮಂತ್ರಿ ಅವರಿಂದ ಸದನಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ, ಸೋಮವಾರಕ್ಕೆ ಮುಂದೂಡಿ, ಅಂದು ಬಜೆಟ್ ಅನುಮೋದನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು.
ಮನವಿ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಮುಗಿಸಿ, ನಂತರ ಸದನ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಶಾಸಕರ ಜೊತೆಗೂಡಿ ರೆಸಾರ್ಟ್‌ಗೆ
ಮುಖ್ಯಮಂತ್ರಿ ಅವರು, ಸೋಮವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಅನುಮೋದನೆ ಪಡೆದು, ನಂತರ ತಮ್ಮ ಪಕ್ಷದ ಶಾಸಕರ ಜೊತೆಗೂಡಿ ನಗರದ ಹೊರವಲಯದ ರೆಸಾರ್ಟ್‌ಗೆ ತೆರಳಲಿದ್ದಾರೆ.
ಮಂಗಳವಾರ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ತಮ್ಮ ಪಕ್ಷದ ಮೂವರು ಅಭ್ಯರ್ಥಿಗಳ ಗೆಲುವಿಗೆ ರೆಸಾರ್ಟ್‌ನಲ್ಲಿ ತಮ್ಮ ಶಾಸಕರೊಂದಿಗೆ ಚರ್ಚೆ ನಡೆಸಿ, ಅಂದು ನೇರವಾಗಿ ಎಲ್ಲರೂ ಮತಗಟ್ಟೆಗೆ ಧಾವಿಸಿ ಮತದಾನ ಮಾಡಲಿದ್ದಾರೆ.