ಜಲಸಂಪನ್ಮೂಲ ಇಲಾಖೆಯಿಂದ ಹೊಸ ಯೋಜನೆ ಜಾರಿ
ಬೆಂಗಳೂರು: ಜಮೀನಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಮಾತ್ರ ನೀರು ಒದಗಿಸುವ ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ತನಲ್ಲಿ ಘೋಷಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಹಲವು ಸದಸ್ಯರ ಪ್ರಸ್ತಾವಗಳಿಗೆ ಉತ್ತರಿಸಿದ ಸಚಿವರು, ಮಧ್ಯ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಹನಿ ನೀರಾವರಿ ಯೋಜನೆಯನ್ನು ಕರ್ನಾಟಕದಲ್ಲೂ ಅನುಷ್ಟಾನಗೊಳಿಸಲಾಗುವುದು ಎಂದರು.
ನದಿ, ಕೆರೆ ಮೂಲಗಳಿಂದ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. ಕೃಷಿಕರು ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿರುವುದರಿಂದ ನೀರು ಪೋಲಾಗುತ್ತಿದೆ. ಇದನ್ನು ತಪ್ಪಿಸಲು ರೈತರ ಜಮೀನುಗಳಿಗೆ ನೇರವಾಗಿ ಕೊಳವೆಗಳನ್ನು ಅಳವಡಿಸಿ, ನೀರು ಪೂರೈಸಲಾಗುವುದು.
ಇಲಾಖೆ ಕೇವಲ ಜಮೀನಿನ ಒಂದು ಭಾಗಕ್ಕೆ ಕೊಳವೆ ಅಳವಡಿಕೆ ಮಾಡಲಿದೆ. ಕೃಷಿ ಮಾಡುವ ರೈತರು ಅಲ್ಲಿಂದ ತಮ್ಮ ಹೊಲಕ್ಕೆ ಡ್ರಿಪ್ ಯೋಜನೆ ಮೂಲಕ ಅಥವಾ ಕೊಳವೆಗಳನ್ನು ವಿಸ್ತರಿಸಿಕೊಂಡು ನೀರು ಪಡೆಯಬೇಕು.
ಒಂದು ವೇಳೆ ರೈತ ತನ್ನ ಭೂಮಿಯಲ್ಲಿ ಆ ಸಾಲಿನಲ್ಲಿ ಬೆಳೆ ತೆಗೆಯದಿದ್ದರೆ ನೀರಿನ ಕೊಳವೆಯನ್ನು ಸ್ಥಗಿತಗೊಳಿಸಬೇಕು. ಎಲ್ಲ ತೆರನಾದ ಕೃಷಿ ಚಟುವಟಿಕೆಗೆ ರೈತರು ಡ್ರಿಪ್ ವ್ಯವಸ್ಥೆ ಮಾಡಿಕೊಂಡರೆ ಬಳಕೆಯಲ್ಲಿ ಶೇ.50ರಷ್ಟು ನೀರನ್ನು ಉಳಿಸಲು ಸಾಧ್ಯ.
ನದಿ ಪಾತ್ರದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ
ಮಧ್ಯ ಪ್ರದೇಶ ಹಾಗೂ ರಾಜಸ್ತಾನದ ಕೆಲವು ಭಾಗಗಳಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ತಾವೇ ಖುದ್ದಾಗಿ ಅಲ್ಲಿ ಅಧ್ಯಯನ ನಡೆಸಿ, ಕರ್ನಾಟಕದಲ್ಲೂ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನದಿ ಪಾತ್ರದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹೆಚ್ಚು ಒತ್ತು ನೀಡಲಾಗುವುದು.
ಮಳೆಗಾಲದಲ್ಲೇ ಇಂತಹ ಕಾರ್ಯಕ್ರಮ ಕೈಗೆತ್ತಿಕೊಂಡರೆ, ಹೆಚ್ಚುವರಿಯಾಗಿ ನೀರು ಸಮುದ್ರಕ್ಕೆ ಹರಿದು ಹೋಗುವುದನ್ನು ತಪ್ಪಿಸಬಹುದು ಹಾಗೂ ಅಂತರ್ಜಲ ಹೆಚ್ಚಳಕ್ಕೂ ಸಹಕಾರಿಯಾಗುತ್ತದೆ ಎಂದರು.
ಈಗಾಗಲೇ ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆಗಳ ಮೂಲಕ ಕೆರೆ ತುಂಬಿಸುವ ಕಾರ್ಯ ನಡೆದಿದೆ. ಬಜೆಟ್‌ನಲ್ಲಿ ಇಲಾಖೆಗೆ 4 ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಣಕಾಸಿನ ಸಾಧ್ಯತೆ ನೋಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ.
ಜಲಸಂಪನ್ಮೂಲ ಇಲಾಖೆಯಲ್ಲಿ 1.25 ಲಕ್ಷ ಕೋಟಿ ರೂ.ನಷ್ಟು ಕಾಮಗಾರಿಗಳು
ನಮ್ಮ ಇಲಾಖೆಯಲ್ಲಿ ಈಗಾಗಲೇ 1.25 ಲಕ್ಷ ಕೋಟಿ ರೂ.ನಷ್ಟು ಕಾಮಗಾರಿಗಳು ನಡೆಯುತ್ತಿವೆ. ಈಗ ನಡೆಯುತ್ತಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಶೇ.10 ರಿಂದ 15ರಷ್ಟು ಬಿಲ್ ಪಾವತಿ ಮಾಡುವ ಪರಿಸ್ಥಿತಿ ಇದೆ.
ಗುತ್ತಿಗೆದಾರರಿಗೆ ಹಣ ನೀಡಿದರೆ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತವೆ. ಕೇಂದ್ರದ ಅಸಹಕಾರದಿಂದ ನಾವು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದೇವೆ. ಮುಂದಿನ ಹಣಕಾಸು ಪರಿಸ್ಥಿತಿ ನೋಡಿಕೊಂಡು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.