ಅಡ್ಡ ಮತದಾನದ ಬೀತಿ ; ಅಷ್ಟ ದಿಗ್ಗಜರ ಕಾವಲು ಪಡೆ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ಫೆಬ್ರವರಿ 27ರಂದು ನಡೆಯುವ ಚುನಾವಣೆಯಲ್ಲಿ ಅಡ್ಡ ಮತದಾನದ ಬೀತಿಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಅಷ್ಟ ದಿಗ್ಗಜರ ಕಾವಲು ಪಡೆಯನ್ನು ಕಾಂಗ್ರೆಸ್ ರಚಿಸಿದೆ.
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ತಮ್ಮ ಅಧಿಕೃತ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯವಿದ್ದರೂ ಎನ್ ಡಿಎ ಕೂಟದ ಎರಡನೇ ಅಭ್ಯರ್ಥಿ ಸ್ಪರ್ಧೆಯಲ್ಲಿರುವ ಭಯದಿಂದ ತಮ್ಮ ಶಾಸಕರ ಮೇಲೆ ಕಾಂಗ್ರೆಸ್ ಕಣ್ಗಾವಲು ಹಾಕಿದೆ.
ಸಂಶಯಾಶ್ಪದ ಶಾಸಕರಿಗೆ ಕೆಲವು ಸಚಿವರ ಉಸ್ತುವಾರಿ ವಹಿಸಲಾಗಿದೆ. ಅಷ್ಟೇ ಅಲ್ಲದೆ, ಆ ಶಾಸಕರಿಗೆ ಆಂತರಿಕವಾಗಿ ಭದ್ರತೆ ನೀಡಲಾಗಿದೆ. ಇದರ ಜೊತೆಗೆ ಫೆಬ್ರವರಿ 26 ರಂದು ವಿಧಾನಸಭೆಯ ಅಧಿವೇಶನ ಮುಗಿಯುತ್ತಿದ್ದಂತೆ ಸಚಿವರೊಬ್ಬರ ಒಡೆತನಕ್ಕೆ ಸೇರಿದ ಹಿಲ್ಟನ್ ಹೋಟೆಲ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂದು ಮಧ್ಯಾಹ್ನ 12 ಗಂಟೆ ವೇಳೆಗೆ ಪಕ್ಷದ ಎಲ್ಲಾ ಶಾಸಕರು ಹಾಜರಿರುವಂತೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕಟ್ಟಾದೇಶ ಮಾಡಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗಸಭೆ ನಡೆಯುವುದರಿಂದ ಸಚಿವರು, ಶಾಸಕರು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ.
ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಬೈರತಿ ಸುರೇಶ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರು ಶಾಸಕರಾದ ಎನ್.ಎ.ಹ್ಯಾರೀಸ್, ಪಿ.ಎಂ.ಅಶೋಕ್, ಸಲೀಂ ಅಹಮದ್, ಕೆ.ಗೋವಿಂದರಾಜ್, ನಸೀರ್ ಅಹಮದ್ ಅವರು ಎಲ್ಲಾ ಶಾಸಕರ ಉಸ್ತುವಾರಿ ಮತ್ತು ಚಲನ ವಲನದ ಮೇಲೆ ನಿಗಾ ಇಡಬೇಕಾಗಿದೆ.
ಫೆಬ್ರವರಿ 26ರಂದು ಹೋಟೆಲ್ ನಲ್ಲೆ ತಂಗಿದ್ದು, ಮತದಾನದ ದಿನವಾದ ಮರುದಿನ ಪಕ್ಷದ ಎಲ್ಲಾ ಶಾಸಕರು ಮುಖ್ಯಮಂತ್ರಿ ಅವರ ಸಾರಥ್ಯದಲ್ಲಿ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಬೇಕು.
ಶಾಸಕರು ತಮ್ಮ ಯಾವುದೇ ಸಮಸ್ಯೆ ಸೇರಿದಂತೆ ಆತಂಕರಿಕ ವಿಚಾರಗಳಿದ್ದರೂ ಆ ಬಗ್ಗೆ ಉಸ್ತುವಾರಿ ಹೊಣೆ ಹೊತ್ತಿರುವ ಶಾಸಕರ ಗಮನಕ್ಕೆ ತಂದರೆ ಪರಿಹರಿಸಿಕೊಡಲಿದ್ದಾರೆ ಎಂದು ಹೇಳಲಾಗಿದೆ.