ಚುನಾವಣಾ ಆಯೋಗದ ಆದೇಶ
ಬೆಂಗಳೂರು:ಮೂರು ವರ್ಷಗಳಿಗಿಂದ ಹೆಚ್ಚು ಕಾಲ ಒಂದೇ ಕಡೆ ಜಂಡಾ ಹೂಡಿರುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳನ್ನು ತಕ್ಷಣವೇ ವರ್ಗಾಯಿಸುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಕಟ್ಟಾದೇಶ ಮಾಡಿದೆ.
ಅಧಿಕಾರಿಯನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಸದರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ವರ್ಗಾವಣೆ ಮಾಡಬೇಕು.
ಕೆಲವು ಸರ್ಕಾರಗಳು ನಮ್ಮ ಆದೇಶವನ್ನು ತಪ್ಪಾಗಿ ಅರ್ಥೈಸಿ ಕ್ಷೇತ್ರದ ವ್ಯಾಪ್ತಿಯ ಬೇರೆ ಸ್ಥಳಕ್ಕೆ ವರ್ಗಾವಣೆ ಇಲ್ಲವೇ ನಿಯೋಜನೆ ಮಾಡಿರುವುದು ಗಮನಕ್ಕೆ ಬಂದಿದೆ.
ರಾಜಕಾರಣಿಗಳೊಂದಿಗೆ ಒಡನಾಟ
ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಆಯಾ ಕ್ಷೇತ್ರದ ರಾಜಕಾರಣಿಗಳೊಂದಿಗೆ ಒಡನಾಟವಿರುತ್ತದೆ.
ಆಯೋಗ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕಾಗಿದೆ, ಇಂತಹ ಸಮಯದಲ್ಲಿ ನಮಗೆ ಅಧಿಕಾರಿಗಳ ಸಹಕಾರವೂ ಅಗತ್ಯ.
ಒಂದೇ ಜಾಗದಲ್ಲಿ ಜಂಡಾ ಹೂಡಿರುವ ಅಧಿಕಾರಿಗಳನ್ನು ಮೊದಲು ನಮ್ಮ ನಿಯಮಾವಳಿ ಪ್ರಕಾರ ವರ್ಗಾವಣೆ ಮಾಡಿ, ಇದರಲ್ಲಿ ಯಾವುದೇ ರಾಜಿ ಇಲ್ಲ.
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ನೌಕರರು ಮತ್ತು ಅಧಿಕಾರಿಗಳನ್ನು ಎಲ್ಲಿಗಾದರೂ ವರ್ಗಾಯಿಸಿಕೊಳ್ಳಿ, ಆದರೆ, ಜಂಡಾ ಹೂಡಿರುವ ಅಧಿಕಾರಿಗಳು ಆ ಕ್ಷೇತ್ರದಲ್ಲೇ ಮುಂದುವರೆಯಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.
ವರ್ಗಾವಣೆಗೆ ಆದೇಶ
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಗೆ ಆದೇಶ ನೀಡಲಾಗಿತ್ತು ಎಂಬುದನ್ನು ಆಯೋಗ ನೆನಪಿಸಿದೆ.
ರಾಜ್ಯ ಸರ್ಕಾರಗಳು ಅಧಿಕಾರಿಗಳ ವರ್ಗಾವಣೆ ಸಂದರ್ಭದಲ್ಲಿ ಈ ಮೊದಲು ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಗೆ ಒಳಪಡುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೇ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡಿರುವ ನಿದರ್ಶನಗಳು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆ ವಹಿಸಲು ಸೂಚಿಸಿದೆ.
ಪ್ರಸಕ್ತ ಲೋಕಸಭಾ ಅವಧಿ ಮೇ ತಿಂಗಳ ಕೊನೆಯ ಭಾಗದಲ್ಲಿ ಮುಗಿಯುವುದರಿಂದ ಕೇಂದ್ರ ಚುನಾವಣಾ ಆಯೋಗ ಮುಂದಿನ ಲೋಕಸಭಾ ಅವಧಿಗೆ ಚುನಾವಣೆ ನಡೆಸಲು ಕಳೆದ ಆರು ತಿಂಗಳಿಂದ ಪೂರ್ವ ಸಿದ್ಧತೆ ನಡೆಸಿದೆ.
ಕಳೆದ ಮೂರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ವರ್ಗಾವರ್ಗಿಗಳನ್ನು ಸ್ಥಗಿತಗೊಳಿಸಿತ್ತು, ಇದರ ನಡುವೆ ಆಯೋಗದ ಸೂಚನೆ ಮೇರೆಗೆ ಜಿಲ್ಲಾ ವರಿಷ್ಠರು ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬಂದಿದೆ.
ಕೆಳಹಂತದ ಅಧಿಕಾರಿಗಳ ವರ್ಗಾವಣೆ
ಇದೀಗ ಬಂದಿರುವ ಆಯೋಗದ ಆದೇಶದಿಂದ ಕೆಳಹಂತದ ಬಹುತೇಕ ಅಧಿಕಾರಿಗಳು ವರ್ಗಾವಣೆಗೊಳ್ಳಲಿದ್ದಾರೆ.
ರಾಜ್ಯ ಸರ್ಕಾರ ಏಪ್ರಿಲ್ ತಿಂಗಳಲ್ಲಿ ಸಾರ್ವತ್ರಿಕ ವರ್ಗಾವರ್ಗಿ ಕೈಗೊಳ್ಳುತ್ತಿತ್ತು, ಆದರೆ ಈ ಬಾರಿ ಚುನಾವಣೆ ಇರುವುದರಿಂದ ಅದರ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ತನ್ನ ನೌಕರರನ್ನು ವರ್ಗಾವಣೆ ಮಾಡಿಕೊಳ್ಳಬೇಕಿದೆ.