ರಾಜ್ಯ ಸರ್ಕಾರ ಕೌಶಲ್ಯವನ್ನೂ ನೀಡುತ್ತಿದೆ
ಬೆಂಗಳೂರು:ನಿರುದ್ಯೋಗಿ ಯುವಜನರಿಗೆ ಯುವನಿಧಿ ಜೊತೆಗೆ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಕ್ಕೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಬೃಹತ್ ಯುವಸಮೃದ್ಧಿ ಸಮ್ಮೇಳನ ಮತ್ತು ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡುತ್ತಿದೆ, ಜೊತೆಗೆ ಉದ್ಯೋಗಗಳ ಸೃಷ್ಟಿ ಅಲ್ಲದೆ, ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯ ತರಬೇತಿಯನ್ನೂ ನೀಡಲಾಗುತ್ತಿದೆ, ಇದು ಸರ್ಕಾರ ಯುವಜನರಿಗೆ ನೀಡುವ ಅಭಯ ಎಂದರು.
ಇನ್ನಷ್ಟು ತರಬೇತಿ ಕೇಂದ್ರಗಳ ಸ್ಥಾಪನೆ
ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಅಗತ್ಯವಿರುವ ತರಬೇತಿಯನ್ನೂ ಸರ್ಕಾರ ನೀಡುತ್ತಿದ್ದು, ಈ ಗುರಿ ಸಾಧನೆಗೆ ಈಗಿರುವ ಸರ್ಕಾರಿ ತರಬೇತಿ ಕೇಂದ್ರಗಳ ಜೊತೆಗೆ ಹೊಸದಾಗಿ ಇನ್ನಷ್ಟು ಡಿಜಿಟಲೀಕೃತ ಸರ್ಕಾರಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.
ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ, ಪ್ರತಿ ವರ್ಷ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಿದ್ದು ಶೇ.8.40 ಗೆ ಏರಿಕೆಯಾಗಿದೆ.
ಇದ್ದ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ 2014 ರಲ್ಲಿ ಭರವಸೆ ನೀಡುವ ಮೂಲಕ ಯುವ ಸಮೂಹದ ಮತ ಗಳಿಸಿದರು, ಇದುವರೆಗೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು, ಆದರೆ, ಇದ್ದ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ ಎಂದು ಟೀಕಿಸಿದರು.
ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್, ಐಟಿಐ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಹತೆ ಹೊಂದಿದ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಒಂದು ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.
ಇತಿಹಾಸದಲ್ಲೇ ಚಾರಿತ್ರಿಕ ದಾಖಲೆ
ನಿರುದ್ಯೋಗಿ ಯುವಜನರಿಗೆ ಸ್ಥಳದಲ್ಲೇ ಉದ್ಯೋಗ ನೀಡಬೇಕು ಎಂಬುದು ಸರ್ಕಾರದ ಪ್ರಮುಖ ಆದ್ಯತೆಯಲ್ಲೊಂದಾಗಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಜನರಿಗೆ ಸ್ಥಳದಲ್ಲೇ ಉದ್ಯೋಗ ಒದಗಿಸಲು ಯುವಜನ ಸಮೃದ್ಧಿ ಸಮ್ಮೇಳನ ಏರ್ಪಡಿಸಿರುವುದು ರಾಜ್ಯದ ಇತಿಹಾಸದಲ್ಲೇ ಚಾರಿತ್ರಿಕ ದಾಖಲೆಯಾಗಲಿದೆ. ಉದ್ಯೋಗ ನಿರೀಕ್ಷಿಸಿ ಮೇಳದಲ್ಲಿ 75 ಸಾವಿರ ಯುವಜನರು ಹೆಸರು ನೋಂದಣಿ ಮಾಡಿಸಿಕೊಂಡಿರುವುದು ದೇಶದ ಇತಿಹಾಸದಲ್ಲೇ ದಾಖಲೆಯಾಗಿದೆ.
ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರದವರೆಗೂ ವಿವಿಧ ವಿದ್ಯಾರ್ಹತೆ ಹೊಂದಿರುವವರು ಮೇಳದಲ್ಲಿ ಭಾಗವಹಿಸಿದ್ದು, ಒಂದು ಲಕ್ಷ ಉದ್ಯೋಗಗಳ ನೇಮಕಾತಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿವೆ, ಇದು ಸಹಾ ದಾಖಲೆಯಾಗಿದೆ.
ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆ ನಿರುದ್ಯೋಗಿ ಯುವ ಸಮುದಾಯದ ಬೆನ್ನೆಲುಬಾಗಿದೆ, 1.40 ಲಕ್ಷ ಪದವೀಧರರು ಹಾಗೂ ಡಿಪ್ಲೊಮಾದಾರರ ಬ್ಯಾಂಕ್ ಖಾತೆಗಳಿಗೆ ಯೋಜನೆಯ ಹಣ ಸಂದಾಯವಾಗುತ್ತಿದೆ. ಸರ್ಕಾರ ಯುವ ಸಮುದಾಯದ ಜೊತೆಗಿದೆ ಎಂದು ಭರವಸೆ ನೀಡಿದರು.
ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ, ಇದರೊಂದಿಗೆ ಉದ್ಯೋಗಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು, ಇದು ನೆಪಮಾತ್ರದ ಉದ್ಯೋಗ ಮೇಳವಲ್ಲ, ಎಲ್ಲರಿಗೂ ಉದ್ಯೋಗ ಕೊಡಿಸಲಾಗುತ್ತಿದೆ.
ಕೌಶಲ್ಯ ಅಭಿವೃದ್ಧಿಗೆ ಆದ್ಯತೆ
ಮೇಳದಲ್ಲಿ ಉದ್ಯೋಗ ದೊರೆಯದ ನೋಂದಾಯಿತರ ದತ್ತಾಂಶಗಳನ್ನು ಆಧರಿಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು, ದೇಶದ ಎಲ್ಲಾ ರಾಜ್ಯಕ್ಕಿಂತ ಕರ್ನಾಟಕ ಮಾದರಿಯಾಗಿ ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ.
ಎರಡು ದಿನಗಳ ಉದ್ಯೋಗ ಮೇಳದಲ್ಲಿ ಯುವಜನರ ಸಮಸ್ಯೆಗಳಿಗೆ ಸರ್ಕಾರಿ ಯಂತ್ರ ಸ್ಪಂದಿಸಲಿದೆ, ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಶಿಕ್ಷಣಕ್ಕಿಂತಲೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಯುವಜನರ ಸಮಗ್ರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಮೇಳದಲ್ಲಿ ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯುವಸಮೃದ್ಧಿ ಲಾಂಛನ ಅನಾವರಣಗೊಳಿಸಲಾಯಿತು.
