ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಗೆಲ್ಲಿಸಲು ಅಣಿಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪರ್ಕಿಸಿದ್ದಾರೆ. ಹೀಗೆ ಸಂಪರ್ಕಿಸಿದವರು ಹೊಸ ಪ್ರಪೋಸಲ್ ಒಂದನ್ನು ಮಂಡಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ಈ ಪ್ರಪೋಸಲ್ಲು. ಹೀಗೆ ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಅಂತ ಅಮಿತ್ ಷಾ ಅವರ ಮುಂದೆ ಪ್ರಪೋಸಲ್ಲು ಮಂಡಿಸಲು ಯಡಿಯೂರಪ್ಪ ಅವರಿಗೆ ಒಂದು ಕಾರಣವಿತ್ತು.
ಅದೆಂದರೆ, ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷದ ಕ್ಯಾಂಡಿಡೇಟ್ ಆಗಿ ಅಂತ ಕೆಲವೇ ದಿನಗಳ ಹಿಂದೆ ಅಮಿತ್ ಷಾ ಅವರು ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಸೂಚಿಸಿದ್ದರು. ಹೀಗೆ ಅವರು ಸೂಚನೆ ಕೊಟ್ಟಿರುವಾಗ ಅದನ್ನು ಮೀರಿ ತಾವು ಹೆಜ್ಜೆ ಇಡಲು ಸಾಧ್ಯವಿಲ್ಲವಲ್ಲ. ಹೀಗಾಗಿ ಕರ್ನಾಟಕದಿಂದ ಯಾರ್ಯಾರು ಚುನಾವಣೆಯ ಕಣಕ್ಕಿಳಿಯಬೇಕು ಎಂಬುದನ್ನು ತೀರ್ಮಾನಿಸುವ ಮುನ್ನ ಈ ವಿಷಯವನ್ನು ಷಾ ಅವರ ಗಮನಕ್ಕೆ ತರುವುದು ಯಡಿಯೂರಪ್ಪ ಅವರ ಉದ್ದೇಶ.
ಹೀಗೆ ಅಮಿತ್ ಷಾ ಅವರ ಮುಂದೆ ಸದರಿ ಪ್ರಪೋಸಲ್ಲು ಮಂಡಿಸಿದ ಯಡಿಯೂರಪ್ಪ ಅವರು, ಸಾರ್, ಮಾಧುಸ್ವಾಮಿ ಅವರು ದಿ ಬೆಸ್ಟು ಪಾರ್ಲಿಮೆಂಟೇರಿಯನ್. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎಂತಹ ಸವಾಲುಗಳು ಎದುರಾದರೂ, ಅದಕ್ಕೆ ಸರ್ಕಾರದ ಪರವಾಗಿ ಸಮರ್ಥ ಉತ್ತರ ನೀಡಿ ಎದುರಾಳಿಗಳ ಬಾಯಿ ಮುಚ್ಚಿಸುತ್ತಿದ್ದರು. ಇಂತವರು ಸಂಸತ್ತಿನಲ್ಲಿದ್ದರೆ ಸರ್ಕಾರಕ್ಕೆ ಆಸ್ತಿಯಾಗುತ್ತಾರೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಮಾತು ಕೇಳಿದ ಅಮಿತ್ ಷಾ ಅವರು ತಕ್ಷಣ ಯಾವ ಭರವಸೆ ನೀಡದಿದ್ದರೂ ಯಡಿಯೂರಪ್ಪ ಅವರ ಮಾತಿಗೆ ನಕಾರಾತ್ಮಕ ಉತ್ತರವನ್ನೂ ನೀಡಿಲ್ಲ. ಕಾರಣ, ಕರ್ನಾಟಕದಿಂದ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕ್ಯಾಂಡಿಡೇಟುಗಳನ್ನು ಲೋಕಸಭೆಗೆ ಕಳಿಸುವ ಜವಾಬ್ದಾರಿ ಹೊತ್ತವರು ಯಡಿಯೂರಪ್ಪ. ಹೀಗಿರುವಾಗ ಅವರು ತಂದ ಒಂದು ಪ್ರಪೋಸಲ್ಲಿಗೆ ಸಾರಾಸಗಟಾಗಿ ಉಲ್ಟಾ ಹೊಡೆಯುವುದು ಸರಿಯಲ್ಲ ಅಂತ ದೇಖೇಂಗೇ ಯಡೂರಪ್ಪಾಜಿ ಎಂದಿದ್ದಾರೆ.
ಯಾವಾಗ ಈ ಬೆಳವಣಿಗೆ ನಡೆಯಿತೋ, ಇದಾದ ಎರಡು, ಮೂರು ದಿನಗಳ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಸಂಪರ್ಕಿಸಿದ್ದಾರೆ. ಹೀಗೆ ಸಂಪರ್ಕಿಸಿದವರು, ಅರೇ ಸೋಮನ್ನಾಜೀ, ಪಕ್ಷ ನಿಮಗೊಂದು ಹೊಸ ಆಫರ್ ಕೊಡಲು ಬಯಸಿದೆ ಅಂದಿದ್ದಾರೆ.
ಅದೇನು ಸಾರ್ ಅಂತ ಸೋಮಣ್ಣ ಕೇಳಿದರೆ, ಈ ಹಿಂದೆ ನೀವು ದಿಲ್ಲಿಗೆ ಬಂದಾಗ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಮನಸ್ಸಿಲ್ಲ, ಬದಲಿಗೆ ರಾಜ್ಯಸಭೆಗೆ ನನ್ನನ್ನು ಕ್ಯಾಂಡಿಡೇಟ್ ಮಾಡಿ ಅಂತ ಹೇಳಿದ್ದಿರಿ, ನಾವೂ ತುಂಬ ಚರ್ಚಿಸಿ ನಿಮ್ಮನ್ನು ರಾಜ್ಯಸಭೆಗೆ ಕಳಿಸಲು ಯೋಚಿಸಿದ್ದೇವೆ ಅಂತ ನಡ್ಡಾ ವಿವರಿಸಿದ್ದಾರೆ.
ನಡ್ಡಾ ಅವರ ಮಾತು ಕೇಳಿ ಅಚ್ಚರಿಗೊಂಡ ಸೋಮಣ್ಣ, ಅದ್ಹೇಗೆ ಸಾರ್, ನಾನು ರಾಜ್ಯಸಭೆಗೆ ಹೋಗಲು ಸಾಧ್ಯ, ಈಗಾಗಲೇ ಪಕ್ಷದ ಅಧಿಕೃತ ಅಭ್ಯರ್ಥಿ ಅಂತ ನಾರಾಯಣ ಭಾಂಡಗೆ ಅವರ ಹೆಸರನ್ನು ಘೋಷಿಸಲಾಗಿದೆಯಲ್ಲ ಎಂದರೆ, ಪ್ರತಿಯುತ್ತರಿಸಿದ ನಡ್ಡಾ ಅವರು, ನೀವು ಬಿಜೆಪಿಯ ಎರಡನೇ ಕ್ಯಾಂಡಿಡೇಟ್ ಆಗಿ ಕಣಕ್ಕೆ ಇಳಿಯಿರಿ. ಹೇಗಿದ್ದರೂ ನಿಮಗೆ ಜೆಡಿಎಸ್ ಪಕ್ಷದ ಹತ್ತೊಂಭತ್ತು ಮತಗಳು ಸಿಗುತ್ತವೆ. ಉಳಿದಂತೆ ನಿಮ್ಮ ಗೆಲುವಿಗೆ ಬೇಕಾದ ಹೆಚ್ಚುವರಿ ಮತಗಳೇನಿವೆ ಅದನ್ನು ಕೊಡಿಸಲು ನಾವು ಒಂದು ತಂತ್ರ ಮಾಡಿದ್ದೇವೆ ಎಂದರಂತೆ.
ಯಾವಾಗ ನಡ್ಡಾ ಈ ಮಾತು ಹೇಳಿದರೋ, ಆಗ ಸೋಮಣ್ಣ ಅವರ ಮನಸ್ಸಿಗೆ ಕೊಳ್ಳಿ ಇಟ್ಟಂತಾಗಿದೆ. ಹಾಗಂತಲೇ, ಅದ್ಹೇಗೆ ಸಾರ್ ನಾನು ಎರಡನೇ ಅಭ್ಯರ್ಥಿಯಾಗಲಿ, ಕರ್ನಾಟಕದಲ್ಲಿ ಗೆಲ್ಲಲು ಅವಕಾಶ ಇರುವುದೇ ನಾಲ್ಕು ಮಂದಿಗೆ, ಐದನೇ ಕ್ಯಾಂಡಿಡೇಟು ಗೆಲ್ಲುವುದು ಇಂಪಾಸಿಬಲ್, ಇಂತಹ ಸೀಟಿಗೆ ಸ್ಪರ್ಧಿಸಲು ನನಗೆ ಹೇಳಿದರೆ ಏನರ್ಥ, ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ನನಗೆ ಇಷ್ಟವಿಲ್ಲದಿದ್ದರೂ ವರಿಷ್ಟರು ಹೇಳಿದರು ಅಂತ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಆಗ ಏನಾಯಿತು ನನ್ನನ್ನು ಸೋಲಿಸಲು ಯಾರು ಶ್ರಮಿಸಿದರು ಅಂತ ನಿಮಗೆ ಗೊತ್ತು.
ಹೀಗಿದ್ದಾಗ ಪುನಃ ಗೆಲ್ಲಲು ಅಸಾಧ್ಯವಾದ ಸೀಟು ಕೊಟ್ಟು ರಾಜ್ಯಸಭೆಗೆ ಕಳಿಸುತ್ತೇವೆ ಎನ್ನುತ್ತೀರಲ್ಲ, ನೀವೇ ಹೀಗೆ ಹೇಳಿದರೆ ಏನು ಗತಿ ಸಾರ್, ಅಂತ ಅವರು ನಡ್ಡಾ ಅವರಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಯಾವಾಗ ಸೋಮಣ್ಣ ಉಲ್ಟಾ ಹೊಡೆದರೋ, ಆಗ ಕಸಿವಿಸಿಗೊಂಡ ನಡ್ಡಾ ಅವರು, ಇದೊಂದು ರಿಸ್ಕು ಅಂತ ನಮಗೂ ಗೊತ್ತು, ಆದರೆ ರಿಸ್ಕು ತಗೊಂಡಾಗ ಪಾಸಿಟಿವ್ ರಿಸಲ್ಟು ಬರಬಾರದು ಅಂತೇನಿಲ್ಲವಲ್ಲ, ಹೀಗಾಗಿ ನಿಮಗೆ ಹೇಳಿದೆ, ನಿಮಗೆ ಇಷ್ಟವಿಲ್ಲದಿದ್ದರೆ ನಾನು ಒತ್ತಾಯ ಮಾಡುವುದಿಲ್ಲ ಎಂದವರೇ ಲೈನು ಕಟ್ ಮಾಡಿದ್ದಾರೆ.
ಇದಾದ ನಂತರ ನಡ್ಡಾ ಅವರ ಧಿಡೀರ್ ಕರೆಯ ಹಿಂದಿನ ರಹಸ್ಯ ಕೆದಕಲು ಹೋದಾಗ ಸೋಮಣ್ಣ ಅವರಿಗೆ ಒಂದು ವಿಷಯ ಕ್ಕಿಯರ್ ಆಗಿದೆ. ಅದೆಂದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಜೋಡಿಗೆ ಇಷ್ಟವಿಲ್ಲ ಎಂಬುದು. ಹೀಗಾಗಿಯೇ ಅವರು ಅಮಿತ್ ಷಾ ಅವರನ್ನು ಭೇಟಿ ಮಾಡಲು ದಿಲ್ಲಿ ಯಾತ್ರೆಗೆ ಅಣಿಯಾಗುತ್ತಿದ್ದಾರೆ.
ಕೇಶವ ಕೃಪಾ ಮೀಟಿಂಗಿನ ರಹಸ್ಯ
ಅಂದ ಹಾಗೆ ರಾಜ್ಯದ ಬಿಜೆಪಿ ನಾಯಕರು ಫೆಬ್ರವರಿ ೧೩ ರಂದು ಬೆಂಗಳೂರಿನ ಕೇಶವ ಕೃಪಾದಲ್ಲಿ ಸಭೆ ಸೇರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಅಂತ ಚರ್ಚೆ ನಡೆಸಿದ್ದಾರೆ.
ಈ ಚರ್ಚೆಯ ಸಂದರ್ಭದಲ್ಲಿ ಹಾಲಿ ಸಂಸದರ ಪೈಕಿ ಬಹುತೇಕರಿಗೆ ಟಿಕೆಟ್ ಕೊಡಲು ಸಭೆ ಒಲವು ವ್ಯಕ್ತಪಡಿಸಿದೆಯಾದರೂ ರಾಜಧಾನಿ ಬೆಂಗಳೂರಿನ ಕ್ಷೇತ್ರಗಳಿಗೆ ಹೊರರಾಜ್ಯದವರು ಕ್ಯಾಂಡಿಡೇಟ್ ಆಗುವ ಸಾಧ್ಯತೆಗಳ ಬಗ್ಗೆಯೂ ಪ್ರಸ್ತಾಪವಾಗಿದೆ.
ಈ ಪೈಕಿ ಬೆಂಗಳೂರು ದಕ್ಷಿಣಕ್ಕೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್, ಬೆಂಗಳೂರು ಸೆಂಟ್ರಲ್ಲಿಗೆ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಲ್ಲವೇ, ರಾಜೀವ್ ಚಂದ್ರಶೇಖರ್ ಪೈಕಿ ಯಾರಾದರೂ ಕ್ಯಾಂಡಿಡೇಟ್ ಆದರೂ ಅಚ್ಚರಿಯಿಲ್ಲ ಎಂಬುದು ಈ ನಾಯಕರಿಗಿರುವ ಮಾಹಿತಿ.
ಆದರೆ ಇಂತಹ ಮಾಹಿತಿ ಏನೇ ಇದ್ದರೂ ಕೇಶವ ಕೃಪಾದಲ್ಲಿ ನಡೆದ ಸಭೆ, ಬೆಂಗಳೂರು ದಕ್ಷಿಣದಿಂದ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ಲಿನಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಅವರಿಗೇ ಟಿಕೆಟ್ ಕೊಡಬೇಕು ಅಂತ ಶಿಫಾರಸು ಮಾಡಿದೆ.
ರಾಜಧಾನಿ ಬೆಂಗಳೂರಿನ ಕ್ಷೇತ್ರಗಳಲ್ಲಿ ಹೊರರಾಜ್ಯದವರಿಗಿಂತ ರಾಜ್ಯದವರಿಗೇ ಟಿಕೆಟ್ ಕೊಡುವುದು ಸೂಕ್ತ ಎಂಬುದು ಇದರ ಹಿಂದಿನ ಲೆಕ್ಕಾಚಾರ.
ಮುಂದೆ ಈ ವಿಷಯದಲ್ಲಿ ಹೈಕಮಾಂಡ್ ವರಿಷ್ಟರು ಏನು ಹೇಳುತ್ತಾರೋ ಅದು ಬೇರೆ ಮಾತು. ಆದರೆ ಸದ್ಯಕ್ಕಂತೂ ಕರ್ನಾಟಕದಿಂದ ಕರ್ನಾಟಕದವರಿಗೇ ಟಿಕೆಟ್ ಕೊಡುವುದು ಬೆಸ್ಟು ಎಂಬುದು ಈ ನಾಯಕರ ಯೋಚನೆ.
ಅಂದ ಹಾಗೆ ಕೇಶವ ಕೃಪಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ಬಿ.ಎಲ್.ಸಂತೋಷ್, ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಮತ್ತಿತರರು ಸುಮಾರು ಇಪ್ಪತ್ತು ಕ್ಷೇತ್ರದ ಕ್ಯಾಂಡಿಡೇಟುಗಳ ಹೆಸರುಗಳನ್ನು ಅಂತಿಮಗೊಳಿಸಿ ದಿಲ್ಲಿ ವರಿಷ್ಟರಿಗೆ ಕಳಿಸಿದ್ದಾರೆ. ಮುಂದೇನು ಕತೆಯೋ?
ಸುಮಲತಾ ಕೈಲಿ ’ಬಿ’ ಪ್ಲಾನು
ಈ ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಹರಸಾಹಸ ಮಾಡುತ್ತಿರುವ ಅಂಬರೀಷ್ ಪತ್ನಿ, ಸಂಸದೆ ಸುಮಲತಾ ’ಬಿ’ ಪ್ಲಾನು ರೆಡಿ ಮಾಡಿಕೊಂಡಿದ್ದಾರೆ.
ಈಗಿನ ’ಎ’ ಪ್ಲಾನಿನ ಪ್ರಕಾರ, ಅವರಿಗೆ ಮಂಡ್ಯದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗಲಿದೆ. ಆದರೆ ಇದು ಸಕ್ಸಸ್ ಆಗುತ್ತದೆ ಅಂತ ಹೇಳಲೂ ಸಾಧ್ಯವಿಲ್ಲ. ಕಾರಣ, ಪ್ರಧಾನಿ ಮೋದಿ ಅವರು ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಮತ್ತು ದೇವೇಗೌಡರ ವಿಷಯದಲ್ಲಿ ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಮೋದಿ ಅವರ ಸದ್ಯದ ಮನಃಸ್ಥಿತಿಯನ್ನು ಗಮನಿಸಿದರೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್‌ಗೇ ದಕ್ಕಬಹುದು.
ಒಂದು ವೇಳೆ ಹಾಗಾದರೆ ತಾವೇನು ಮಾಡಬೇಕು ಎಂಬುದೇ ಸುಮಲತಾ ಕೈಲಿರುವ ’ಬಿ’ ಪ್ಲಾನಿನ ವಿವರ. ಅದರ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ತಮಗೆ ಬಿಜೆಪಿ ಟಿಕೆಟ್ಟು ಸಿಗದಿದ್ದರೆ ಸುಮಲತಾ ಇಂಡಿಪೆಂಡೆಂಟಾಗಿ ಸ್ಪರ್ಧೆ ಮಾಡಲಿದ್ದಾರೆ.
ಆದರೆ ಹೀಗೆ ಸ್ಪರ್ಧಿಸುವುದರಲ್ಲೂ ಒಂದು ಟ್ವಿಸ್ಟು ಇದೆ. ಅದೆಂದರೆ, ಕಣಕ್ಕಿಳಿಯುವ ಸುಮಲತಾ ಅವರನ್ನು ಬೆಂಬಲಿಸುವಂತೆ ಅವರ ಹಿಂದಿರುವ ವಾರ್ ಗ್ರೂಪು ಕಾಂಗ್ರೆಸ್ಸಿನ ಪ್ರಮುಖ ನಾಯಕರನ್ನು ಕೋರಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಸ್ಟಾರ್ ಚಂದ್ರು ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗುವ ಲಕ್ಷಣಗಳಿದ್ದು, ಹಾಗಾಗುವ ಮುನ್ನವೇ ನಿಮ್ಮ ಬೆಂಬಲ ನಮಗಿರಲಿ ಎಂಬುದು ಸುಮಲತಾ ವಾರ್ ಗ್ರೂಪಿನ ಇಂಡೆಂಟು.
ಎಷ್ಟೇ ಆದರೂ ಜೆಡಿಎಸ್ ಜತೆಗಿನ ಮೈತ್ರಿ ಮಂಡ್ಯದ ಹಲ ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಬಹುತೇಕರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದು ಸುಮಲತಾ ಅವರ ಥಿಂಕಿಂಗು.
ಈ ಮಧ್ಯೆ ಕಾಂಗ್ರೆಸ್ ಪಕ್ಷ ಕ್ಯಾಂಡಿಡೇಟನ್ನು ಕಣಕ್ಕಿಳಿಸದೆ ತಮಗೆ ಬೆಂಬಲ ಘೋಷಿಸಿದರೆ ಗೆಲ್ಲುವುದು ಸುಲಭ ಎಂಬುದು ಅವರ ಲೆಕ್ಕಾಚಾರ.
ಆದರೆ ಸುಮಲತಾ ಅವರ ವಾರ್ ಗ್ರೂಪು ತಯಾರಿಸಿರುವ ’ಬಿ’ ಪ್ಲಾನು ವರ್ಕ್ ಔಟ್ ಆಗುತ್ತದಾ ಕಾದು ನೋಡಬೇಕು.
ಕೇಂದ್ರ ಮಂತ್ರಿಯಾಗುತ್ತಾರಾ ಬೊಮ್ಮಾಯಿ?
ಜೆಡಿಎಸ್ ಪಕ್ಷದ ಟಾಪ್ ಲೀಡರ್ ಒಬ್ಬರಿಗೆ ಮೊನ್ನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಕ್ಕಿದ್ದರಂತೆ. ಆ ಸಂದರ್ಭದಲ್ಲಿ ಅದು, ಇದು ಮಾತನಾಡುತ್ತಾ, ನೀವೇಕೆ ಪಾರ್ಲಿಮೆಂಟಿಗೆ ಹೋಗಬಾರದು ಬ್ರದರ್ ಅಂತ ಈ ಲೀಡರು ಕೇಳಿದ್ದಾರೆ.
ಅದಕ್ಕುತ್ತರಿಸಿದ ಬೊಮ್ಮಾಯಿ, ಅಯ್ಯೋ ದಿಲ್ಲಿಗೆ ಹೋಗಿ ಏನು ಮಾಡಬೇಕು, ಪಾರ್ಲಿಮೆಂಟಿಗೆ ಹೋದರೆ ತುಂಬ ಸ್ಕೋಪ್ ಏನೂ ಇರಲ್ಲ, ಅದರ ಬದಲು ಕರ್ನಾಟಕದಲ್ಲಿ ಶಾಸಕರಾಗಿರುವುದೇ ಬೆಟರ್ರು ಅಂದಿದ್ದಾರೆ.
ಆದರೆ ಪಟ್ಟು ಬಿಡದ ಜೆಡಿಎಸ್ಸಿನ ಈ ಲೀಡರು, ಹೇಗಿದ್ರೂ ಹಾವೇರಿಯಿಂದ ಸ್ಪರ್ಧಿಸಲ್ಲ ಅಂತ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಹೀಗಿರುವಾಗ ಈ ಕ್ಷೇತ್ರದಲ್ಲಿ ಮತ್ತೊಬ್ಬ ಲಿಂಗಾಯತರೇ ಸ್ಪರ್ಧಿಸಬೇಕು. ಈ ವಿಷಯ ಬಂದಾಗ ನಿಮಗಿಂತ ದೊಡ್ಡ ಲಿಂಗಾಯತ ನಾಯಕರು ಎಲ್ಲಿದ್ದಾರೆ ಅಂತ ಪ್ರಶ್ನಿಸಿದರಂತೆ.
ಅಷ್ಟೇ ಅಲ್ಲ, ನನಗಿರುವ ಮಾಹಿತಿಯ ಪ್ರಕಾರ ಬಿಜೆಪಿ ವರಿಷ್ಟರಿಗೆ ನಿಮ್ಮ ವಿಷಯದಲ್ಲಿ ತುಂಬ ವಿಶ್ವಾಸವಿದೆ. ಎಷ್ಟೇ ಆದರೂ ನೀವು ಮುಖ್ಯಮಂತ್ರಿಯಾದವರು. ನಾಳೆ ನೀವು ಪಾರ್ಲಿಮೆಂಟಿಗೆ ಹೋದರೆ ಅವರು ನಿಮ್ಮನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಹೀಗೆ ಅವರಾಡಿದ ಮಾತು ಕೇಳಿ ಹಸನ್ಮುಖಿಯಾದ ಬಸವರಾಜ ಬೊಮ್ಮಾಯಿ ಅವರು, ನನ್ನ ಸ್ಪರ್ಧೆಯ ವಿಷಯದಲ್ಲಿ ವರಿಷ್ಟರು ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡೋಣ ಎಂದರಂತೆ