ಕಾಂಗ್ರೆಸ್ ಪೋಷಿತ ಗಂಜಿ ಗಿರಾಕಿಗಳಿಗೆ ಅವಕಾಶ
ಬೆಂಗಳೂರು:ಸಂವಿಧಾನ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಅರ್ಬನ್ ನಕ್ಸಲ್‌ಗಳಿಗೆ, ಭಾರತದ ಸೈನಿಕರನ್ನು ರೇಪಿಸ್ಟ್‌ಗಳು ಎಂದು ಅವಮಾನಿಸಿದ ದೇಶದ್ರೋಹಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿಕೃತ ಮನಸ್ಕರಿಗೆ ಸರ್ಕಾರ ಜನರ ಹಣವನ್ನು ವೆಚ್ಚ ಮಾಡುತ್ತಿದೆ, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಆವರಿಸಿದೆ, 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೃಷಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಮನೆ, ಮಠ ಬಿಟ್ಟು ಗುಳೆ ಹೋಗುತ್ತಿದ್ದಾರೆ ಎಂದಿದ್ದಾರೆ.
ದುರ್ಭಿಕ್ಷದಲ್ಲಿ ಅಧಿಕ ಮಾಸ
ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ, ’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬಂತೆ ಸಂವಿಧಾನ ಸಮಾವೇಶಕ್ಕೆ ಆಗಮಿಸುವ ಅತಿಥಿಗಳಿಗೆ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಟಿಕೆಟ್, ಪಂಚತಾರಾ ಹೋಟೆಲ್ ವಾಸ್ತವ್ಯಕ್ಕೆ ನೂರಾರು ಕೋಟಿ ರೂ. ದುಂದು ವೆಚ್ಚ ಮಾಡಿದೆ, ಸಂವಿಧಾನ ಸಮಾವೇಶ ಮಾಡುವ ಅವಶ್ಯಕತೆ ಏನಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ್ ಪ್ರಶ್ನಿಸಿದ್ದಾರೆ.
ಇಂತಹ ಸಮಾವೇಶಗಳಿಂದ ಕಾಂಗ್ರೆಸ್ ಪೋಷಿತ ಗಂಜಿ ಗಿರಾಕಿಗಳಿಗೆ ಲಾಭವೇ ಹೊರತು ರಾಜ್ಯದ ಕನ್ನಡಿಗರಿಗೆ ಯಾವುದೇ ಲಾಭವಿಲ್ಲ, ಸಂವಿಧಾನ ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಗೌರವ ಇದ್ದಿದ್ದರೆ ಸಮಾವೇಶದ ಹಣವನ್ನ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಹಳ್ಳಿ ಹಳ್ಳಿಗಳಲ್ಲಿ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಬಹುದಿತ್ತು.
ಅದನ್ನು ಬಿಟ್ಟು ದೇಶದ್ರೋಹಿ ಹೇಳಿಕೆಗಳನ್ನು ನೀಡುವ ನಿತಾಶಾ ಕೌಲ್ ಅಂತಹವರಿಗೆ ಆಹ್ವಾನ ಕೊಟ್ಟಿದ್ದೀರಲ್ಲಾ, ಇದು ನಿಮ್ಮ ನಾಯಕ ರಾಹುಲ್ ಗಾಂಧಿ ಅಪ್ಪಣೆಯಂತೆ ನಡೆದಿದೆಯೇ ಎಂದಿದ್ದಾರೆ.
ಪ್ರಚಾರದ ಗೀಳಿಗೆ ವೆಚ್ಚ
ಪತ್ರಿಕೆ ಜಾಹೀರಾತಿಗೆ 21.27 ಕೋಟಿ ರೂ., ಇತರೆ ಜಾಹೀರಾತುಗಳಿಗೆ 100 ಕೋಟಿ ರೂ. ಸೇರಿದಂತೆ 122 ಕೋಟಿ ರೂ.ಗಳನ್ನು ಆರ್ಥಿಕ ಬಿಕ್ಕಟ್ಟಿನಲ್ಲೂ ಪ್ರಚಾರದ ಗೀಳಿಗೆ ವೆಚ್ಚ ಮಾಡಲಾಗಿದೆ.
ಕಾಂಗ್ರೆಸ್‌ನಲ್ಲಿನ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಗ್ಯಾರೆಂಟಿ ಜಾರಿ ಸಮಿತಿ, ನಿಗಮ ಮಂಡಳಿ, ಸಚಿವಾಲಯ ಸಲಹೆಗಾರರು ಎಂಬಿತ್ಯಾದಿ 90 ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡುವ ಮೂಲಕ ಕನ್ನಡಿಗರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.