ಇತ್ತೀಚಿನ ದಿನಗಳಲ್ಲೇ ದಾಖಲೆ
ಬೆಂಗಳೂರು:ವಿಧಾನಮಂಡಲದ ಅಧಿವೇಶನವನ್ನು ಮತ್ತೆ ಒಂದು ದಿನಕ್ಕೆ ವಿಸ್ತರಣೆ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲೇ ಅಧಿವೇಶನವನ್ನು ಮೂರು ಬಾರಿ ವಿಸ್ತರಣೆ ಮಾಡಿರುವುದು ಇದೇ ಮೊದಲಾಗಿದೆ.
ಫೆಬ್ರವರಿ 23ರ ಶುಕ್ರವಾರದಂದೇ ಅಧಿವೇಶನ ಮುಗಿಯಬೇಕಿತ್ತು, ಅಂದು ಮುಖ್ಯಮಂತ್ರಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಸಾಧ್ಯವಾಗದ ಕಾರಣ ಫೆಬ್ರವರಿ 26 ರ ಸೋಮವಾರಕ್ಕೆ ವಿಸ್ತರಣೆ ಮಾಡಲಾಯಿತು.
ಆಡಳಿತ ಪಕ್ಷದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನದಿಂದ ಅಂದು ಕಲಾಪವನ್ನು ಮೊಟಕುಗೊಳಿಸಿ, ಸದನವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.
ಬಜೆಟ್‌ಗೆ ಅನುಮತಿ ಪಡೆಯಬೇಕಿತ್ತು
ಇಂದು ಮುಖ್ಯಮಂತ್ರಿ ಉತ್ತರ ನೀಡಿ ಬಜೆಟ್‌ಗೆ ಅನುಮತಿ ಪಡೆಯಬೇಕಿತ್ತು, ಆದರೆ, ರಾಜ್ಯಸಭಾ ಚುನಾವಣಾ ಫಲಿತಾಂಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಷಯ ವಿಧಾನಮಂಡಲದಲ್ಲಿ ಪ್ರತಿಧ್ವನಿಸಿ ಭಾರೀ ಕೋಲಾಹಲ ಉಂಟು ಮಾಡಿದ್ದರಿಂದ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಲು ಸಾಧ್ಯವಾಗಲಿಲ್ಲ.
ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅವರು ತಮ್ಮ ಉತ್ತರದಲ್ಲಿ ಗ್ಯಾರಂಟಿ ಯೋಜನೆ, ಕೇಂದ್ರದ ಮಲತಾಯಿ ಧೋರಣೆ ಹಾಗೂ ಕೆಲವು ಯೋಜನೆಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದಾರೆ.
ಇದಕ್ಕಾಗಿ ಅವರಿಗೆ ಒಂದಷ್ಟು ಸಮಯಾವಕಾಶ ಬೇಕಿದ್ದು, ಅದು ಇಂದು ದೊರೆಯದ ಕಾರಣ ನಾಳೆ ಉತ್ತರ ನೀಡುವುದಾಗಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.