ಸದನ ಕಲಾಪ ಗುರುವಾರಕ್ಕೆ
ಬೆಂಗಳೂರು:ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗಿದ ವಿಷಯ ವಿಧಾನಮಂಡಲದಲ್ಲಿಂದು ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಮಂಗಳವಾರದ ಘಟನೆ ಪ್ರಸ್ತಾಪಿಸಿದ ಪ್ರತಿಪಕ್ಷ ಬಿಜೆಪಿ, ಸರ್ಕಾರದ ರಾಜೀನಾಮೆಗೆ ಆಗ್ರಹಿಸಿದ್ದಲ್ಲದೆ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಬಂಧನಕ್ಕೆ ಒತ್ತಾಯಿಸಿತು.
ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರರು, ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಚುನಾಯಿತ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಯನ್ನು ಕಿಡಿಗೇಡಿಯೊಬ್ಬ ಕೂಗಿದ್ದಾನೆ.
ಶಕ್ತಿಸೌಧದಲ್ಲಿ ಘಟನೆ
ಕರ್ನಾಟಕದ ಇತಿಹಾಸದಲ್ಲೇ ಶಕ್ತಿಸೌಧದಲ್ಲಿ ಇಂತಹ ಘಟನೆ ನಡೆದಿರಲಿಲ್ಲ, ಇದು ಶಾಸನ ರಚನೆ ಸ್ಥಳ ಇಂತಹ ಕೇಂದ್ರದಲ್ಲೇ ರಾಷ್ಟ್ರ ವಿರೋಧಿ ಚಟುವಟಿಕೆ ನಡೆದರೆ ಸರ್ಕಾರ ಯಾರಿಗೆ ರಕ್ಷಣೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಘಟನೆ ನಡೆದು 16 ಗಂಟೆಗಳಾದರೂ ಆರೋಪಿಯನ್ನು ಬಂಧಿಸದೆ ಸರ್ಕಾರ ರಕ್ಷಣೆ ಮಾಡುತ್ತಿದೆ, ಇಂತಹ ಸರ್ಕಾರ ನಮಗೆ ಬೇಕೆ ಎಂದರು.
ರಾಷ್ಟ್ರ ವಿರೋಧಿಗಳನ್ನು ಬೆಂಬಲಿಸುವ ನೀವು ಅಧಿಕಾರದಿಂದ ಕೆಳಗಿಳಿದು ಹೊರ ನಡೆಯಿರಿ, ನಾಸಿರ್ ಹುಸೇನ್ ಅವರನ್ನು ಬಂಧಿಸಿದರೆ ಸತ್ಯ ಬಯಲಾಗುತ್ತದೆ.
ನಿಮಗೆ ಮುಳುವಾಗುತ್ತದೆ
ರಾಷ್ಟ್ರದ ವಿರುದ್ಧ ಧ್ವನಿ ಎತ್ತುವವರಿಗೆ ನೀವು ರತ್ನಗಂಬಳಿ ಹಾಸುತ್ತಿದ್ದೀರಿ, ಇದು ನಿಮಗೆ ಮುಳುವಾಗುತ್ತದೆ.
ಕೆಡಿಎಫ್ ಸಂಘಟನಾ ಸದಸ್ಯರು ನಿಮ್ಮ ಜೊತೆ ಇರುವಂತೆ ನಟಿಸುತ್ತಾರೆ, ಅವರು ಬಲಿಷ್ಠವಾದ ನಂತರ ನಿಮಗೇ ಚೂರಿ ಹಾಕಿ ನಿಮ್ಮ ಮೇಲೇ ಕೂರುತ್ತಾರೆ, ಅವರನ್ನು ನಂಬಬೇಡಿ.
ಮೈಸೂರಿನ ನಿಮ್ಮ ಪಕ್ಷದ ಶಾಸಕ ತನ್ವೀರ್ ಸೇಠ್ ಪ್ರಕರಣ ನಮ್ಮ ಕಣ್ಣ ಮುಂದೆಯೇ ಇದೆ. ಹೀಗಿದ್ದೂ ನೀವು ಅವರ ರಕ್ಷಣೆಗೆ ನಿಂತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ತುಟಿ ಪಿಟಿಕ್ ಎನ್ನಲಿಲ್ಲ
ಇದರ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆ ಪ್ರತಿಪಕ್ಷದ ಸದಸ್ಯರಿಗೆ ತೃಪ್ತಿ ತರಲಿಲ್ಲ, ಸದನದಲ್ಲೇ ಇದ್ದ ಮುಖ್ಯಮಂತ್ರಿ ತುಟಿ ಪಿಟಿಕ್ ಎನ್ನಲಿಲ್ಲ.
ಇದು ಪ್ರತಿಪಕ್ಷದ ಸದಸ್ಯರನ್ನು ಮತ್ತಷ್ಟು ಕೆರಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸುವಂತೆ ಮಾಡಿತು.
ಸಭಾಧ್ಯಕ್ಷ ಯು.ಟಿ ಖಾದರ್, ಸದನವನ್ನು ಎರಡು ಬಾರಿ ಮುಂದೂಡಿ ತೆರೆಮರೆಯಲ್ಲಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ, ನಂತರ ಸದನವನ್ನು ನಾಳೆಗೆ ಮುಂದೂಡಿದರು.
ಇದಕ್ಕೂ ಮುನ್ನ ಆರ್.ಅಶೋಕ್ ಮಾತನಾಡಿ, ಶಕ್ತಿಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನಲು ಸಾಧ್ಯವಾದರೆ ರಾಜ್ಯದ ಬೇರೆ ಎಲ್ಲಿ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲು ನಿಮ್ಮಿಂದ ಸಾಧ್ಯ ಎಂದು ಪ್ರಶ್ನಿಸಿದರು.
ದೇಶದ ಗೌರವದ ಪ್ರಶ್ನೆ
ಇದು ದೇಶದ ಗೌರವದ ಪ್ರಶ್ನೆ, ಯಾವ ಕಾರಣಕ್ಕೂ ಇಂತಹ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಪ್ರಕರಣ ನಡೆದು ಇಷ್ಟು ಸಮಯ ಕಳೆದರೂ ಒಬ್ಬನನ್ನೂ ಸರ್ಕಾರ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಎಫ್‌ಎಸ್‌ಎಲ್ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳುತ್ತೀರಿ, ವರದಿ ಬರುವುದು ಒಂದು ವಾರವೋ, ತಿಂಗಳೋ ಆಗಬಹುದು, ಅಲ್ಲಿಯವರೆಗೆ ಕಾಯಲು ಸಾಧ್ಯವಿಲ್ಲ, ಇದು ದೇಶದ್ರೋಹದ ಪ್ರಕರಣ, ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು, ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸೌಧದಲ್ಲೇ ಇಂತಹ ಘಟನೆ ನಡೆದರೂ ನೀವು ಸುಮ್ಮನಿದ್ದೀರಿ ಎಂದರೆ ಇಲ್ಲಿ ನಮಗೆ ಭದ್ರತೆ ಇರಲು ಸಾಧ್ಯವೇ ಇಲ್ಲ, ಇಂತಹ ಸ್ಥಿತಿಯಲ್ಲಿ ನಾವು ಸದನದಲ್ಲಿ ಏಕೆ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ನೈತಿಕತೆ ಕಳೆದುಕೊಂಡಿದೆ
ಸರ್ಕಾರ ನೈತಿಕತೆಯನ್ನು ಕಳೆದುಕೊಂಡಿದೆ, ಅದು ಅಧಿಕಾರದಲ್ಲಿ ಮುಂದುವರಿಯುವ ಶಕ್ತಿಯನ್ನು ಕಳೆದುಕೊಂಡಿದೆ, ಆದ್ದರಿಂದ ತಕ್ಷಣವೇ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದರು.
ಈ ಹಂತದಲ್ಲಿ ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ಯುದ್ಧ ನಡೆಯಿತಲ್ಲದೆ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಸದನ ಕಲಾಪವನ್ನು ಹದಿನೈದು ನಿಮಿಷಗಳ ಕಾಲ ಮುಂದೂಡಿ ಹೊರನಡೆದರು.
ತದನಂತರ ಸದನ ಸಲಹಾ ಸಮಿತಿಯ ಸಭೆ ನಡೆಸಿದ ಅವರು, ಪ್ರತಿಪಕ್ಷಗಳನ್ನು ಸಮಾಧಾನ ಪಡಿಸುವ ಯತ್ನ ನಡೆಸಿದರಾದರೂ ಅದು ಯಶಸ್ವಿಯಾಗಲಿಲ್ಲ, ಪುನಃ ಸದನ ಸೇರಿದಾಗ ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ನಾಸಿರ್ ಹುಸೇನ್ ಅವರನ್ನು ಬಂಧಿಸುವಂತೆ ಆಗ್ರಹಿಸತೊಡಗಿದರು.
ಈ ಹಂತದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಸದನದಲ್ಲಿ ಕೆಲವು ಪ್ರಕಟಣೆಗಳನ್ನು ನೀಡತೊಡಗಿದಾಗ, ಸುಮ್ಮನಿರದ ಬಿಜೆಪಿ ಸದಸ್ಯರು ಒಂದೇ ಸಮನೆ ನಾಸಿರ್ ಹುಸೇನ್ ಅವರನ್ನು ಬಂಧಿಸುವಂತೆ ಒಕ್ಕೊರಲಿನಿಂದ ಕೂಗತೊಡಗಿದರು.
ಬಿಜೆಪಿ ಸದಸ್ಯರ ಈ ಕೂಗಾಟ ಮುಂದುವರಿದು ಪರಿಸ್ಥಿತಿ ಪುನಃ ನಿಯಂತ್ರಣ ಕಳೆದುಕೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಸದನ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.