ರಾಜ್ಯಪಾಲರಿಗೆ ಬಿಜೆಪಿ ಮನವಿ ಪತ್ರ
ಬೆಂಗಳೂರು:ಪಾಕಿಸ್ತಾನ ಪರ ಹೇಳಿಕೆ ನೀಡಿರುವುದರ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಆರೋಪಿಸಿದ್ದಾರೆ.
ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿಗಳ ರಕ್ಷಣೆ ಮಾಡುತ್ತಿರುವ ಈ ಸರ್ಕಾರ ವಜಾ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ, ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೂರವಾಗಿದೆ, ಪಾಕಿಸ್ತಾನ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುವ ಮೂಲಕ ನೈತಿಕವಾಗಿಯೂ ದಿವಾಳಿಯಾಗಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ರಕ್ಷಣೆಗೆ ಆಪತ್ತು
ವಿಧಾನಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಆಪತ್ತು ಉಂಟು ಮಾಡಿದೆ, ಅಧಿವೇಶನ ಮುಗಿದ ತಕ್ಷಣ ಎಲ್ಲವನ್ನೂ ಮರೆಯುತ್ತಾರೆ ಎಂದು ಕಾಂಗ್ರೆಸ್ ಅಂದುಕೊಂಡಿದೆ, ರಾಜ್ಯದ ಜನರು ಮರೆಯುವುದಿಲ್ಲ, ನಮ್ಮ ಹೋರಾಟ ಮುಂದುವರೆಯುತ್ತದೆ.
ಪಾಕಿಸ್ತಾನ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ, ಎಫ್‌ಎಸ್‌ಎಲ್ ವರದಿ ಕತೆ ಏಕೆ ಹೇಳಿ ಪ್ರಕರಣ ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ.
ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ, ಬೇರೆ ಘಟನೆ ನಡೆದಾಗ ಎಫ್‌ಎಸ್‌ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು.
ಸ್ವಯಂಪ್ರೇರಿತ ಪ್ರಕರಣ ದಾಖಲು
ಪ್ರಕರಣದಲ್ಲಿ ಏನೂ ಇಲ್ಲ ಎಂದಾದರೆ, ಪೋಲಿಸರು ಏಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು.
ರಾಜ್ಯದ ಜನರು ಪಾಕಿಸ್ತಾನ ಪರವಾದವರನ್ನು ಆಯ್ಕೆ ಮಾಡಿಲ್ಲ, ಇದು ಕನ್ನಡಿಗರ, ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದರು.