ಹೋಟೆಲ್ ನಲ್ಲಿ ನಡೆದ ಸ್ಪೋಟಕ್ಕೆ ಬೆಚ್ಚಿ ಬಿದ್ದ ಜನ
ಬೆಂಗಳೂರು: ಬೆಂಗಳೂರಿನ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ಒಂದರ ಮಧ್ಯಾಹ್ನ ಬಾಂಬ್ ಸ್ಪೋಟಗೊಂಡು ಹತ್ತು ಜನರು ಗಾಯಗೊಂಡಿರುವ ಘಟನೆ ಜರುಗಿದೆ. ಹಾಡಹಗಲೇ ನಡೆದ ಸ್ಪೋಟದಿಂದ ಬೆಂಗಳೂರಿಗರು ಆತಂಕಕ್ಕೆ ಒಳಗಾಗಿದ್ದಾರೆ.
ಮಾರ್ಚ್ 1ರ ಮಧ್ಯಾಹ್ನ ಸುಮಾರು 12:50ರಿಂದ 1 ಗಂಟೆ ಸಮಯದಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರು ಸೇರಿದಂತೆ ಹೋಟೆಲ್ ನಲ್ಲಿದ್ದ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು, ಬಾಂಬ್ ನಿಷ್ಕ್ರಿಯದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಪೋಟ ಎಂಬುದು ಖಚಿತವಾಗುತ್ತಿದ್ದಂತೆ ಬೆಂಗಳೂರು ಪೊಲೀಸ್ ಆಯುಕ್ತರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಪರಮೇಶ್ವರ ಅವರು ಕೂಡ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಬಂಧ ಪ್ರತಿಕ್ರಿಯಿಸಿ ಇಂತಹ ಘಟನೆ ನಡೆಯಬಾರದಿತ್ತು. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಸ್ಪೋಟವೊಂದು ನಡೆದಿತ್ತು. ಬಳಿಕ ಈ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಇದನ್ನು ಯಾರೇ ಮಾಡಿದ್ದರೂ ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರಭಾವೀ ಕುಟುಂಬಗಳಿಗೆ ಕಾಂಗ್ರೆಸ್ ಟಿಕೆಟ್
ಡಾ.ಪರಮೇಶ್ವರ ಅವರು ಮಾತನಾಡಿ, ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಪೋಟದ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ತನಿಖೆ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಬಾಂಬ್ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ತನಿಖೆಯನ್ನು ಎನ್ಐಎಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇನ್ನು ಮುಂದಾದರೂ ಕರ್ನಾಟಕದ ಜನತೆ ಹಾಗೂ ಬೆಂಗಳೂರಿಗೆ ಶಾಂತಿ ಮತ್ತು ಸುರಕ್ಷತೆಯ ಗ್ಯಾರಂಟಿ ನೀಡುವತ್ತ ಗಮನ ಹರಿಸಬೇಕು. ಬ್ರಾಂಡ್ ಬೆಂಗಳೂರು ರೂಪಿಸದಿದ್ದರೂ ಪರವಾಗಿಲ್ಲ. ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ. ಇಂತಹ ಕೃತ್ಯಗಳಿಗೆ ಓಲೈಕೆ ರಾಜಕಾರಣವೇ ಕಾರಣ ಎಂದು ಆರೋಪಿಸಿದ್ದಾರೆ.
ಜಾತಿ ಸಮೀಕ್ಷೆ ವರದಿ ಸ್ವೀಕಾರ: ಬೆಂಕಿ ಜೊತೆ ಸರಸ