ವಾರದಲ್ಲಿ ಮೊದಲ ಪಟ್ಟಿ ಬಿಡುಗಡೆ
ಬೆಂಗಳೂರು:ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಭಾವೀ ರಾಜಕೀಯ ಕುಟುಂಬಗಳ ಮೊರೆ ಹೋಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾರ್ಚ್ 10 ರೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ.
15 ಕ್ಷೇತ್ರಗಳಿಗೆ ಏಕೈಕ ಅಭ್ಯರ್ಥಿ
15 ಕ್ಷೇತ್ರಗಳಿಗೆ ಏಕೈಕ ಅಭ್ಯರ್ಥಿ ಹೆಸರನ್ನು ಕೆಪಿಸಿಸಿ, ಎಐಸಿಸಿಗೆ ಕಳುಹಿಸಿದ್ದು, ಇದಕ್ಕೆ ಹಸಿರು ನಿಶಾನೆ ದೊರೆತು ಪಟ್ಟಿ ಹೊರಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಡೇ ಗಳಿಗೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕುಸುಮಾ ಜೊತೆಗೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೆಸರು ಮುನ್ನೆಲೆಗೆ ಬಂದಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ, ದಿವಂಗತ ಬಂಗಾರಪ್ಪ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕಾಶೆಪ್ಪನವರ್ ಸೇರಿದಂತೆ ಪ್ರಮುಖ ರಾಜಕೀಯ ಕುಟುಂಬಕ್ಕೆ ಸೇರಿದವರಿಗೆ ಮೊದಲ ಪಟ್ಟಿಯಲ್ಲಿ ಪ್ರಾತಿನಿಧ್ಯ ದೊರೆತಿದೆ.
ಎಐಸಿಸಿಗೆ ಶಿಫಾರಸು
ಮೊದಲ ಪಟ್ಟಿಯಲ್ಲೇ ಶಿವಕುಮಾರ್ ಸಹೋದರ ಹಾಲಿ ಸಂಸದ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ, ಮಹದೇವಪ್ಪ ಪುತ್ರ ಸುನೀಲ್ ಬೋಸ್ ಚಾಮರಾಜನಗರ ಮೀಸಲು, ಶಾಸಕ ಹಾಗೂ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್ ಅವರ ಪತ್ನಿ ವೀಣಾ ಕಾಶೆಪ್ಪನವರ್ ಬಾಗಲಕೋಟೆ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸಲು ಕೆಪಿಸಿಸಿ, ಎಐಸಿಸಿಗೆ ಶಿಫಾರಸು ಮಾಡಿದೆ.
ಉಳಿದಂತೆ ಮೊದಲ ಪಟ್ಟಿಯಲ್ಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಲಕ್ಷ್ಮಣ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಟಾರ್ ಚಂದ್ರು. ಬಂಗಾರಪ್ಪ ಅವರ ಪುತ್ರಿ ಹಾಗೂ ಮಧುಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಹಿರಿಯ ನಾಯಕ ಎಸ್.ಪಿ.ಮುದ್ದಹನುಮೇಗೌಡ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಿಂದ ವಿ.ಎಸ್.ಉಗ್ರಪ್ಪ, ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಚಂದ್ರಪ್ಪ, ಬೀದರ್ ಲೋಕಸಭಾ ಕ್ಷೇತ್ರದಿಂದ ರಾಜಶೇಖರ ಪಾಟೀಲ್, ದಾವಣಗೆರೆಯಿಂದ ವಿನಯ್, ಕೊಪ್ಪಳದಿಂದ ರಾಘವೇಂದ್ರ ಇಟ್ನಾಳ್ ಅವರು ಕಣಕ್ಕಿಳಿಯಲಿದ್ದಾರೆ.
ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವಿನ ಗುರಿ
ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದಕ್ಕಾಗಿ ಭಾರೀ ಕಸರತ್ತು ನಡೆಸಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆ, ಜಿಲ್ಲಾ ಉಸ್ತುವಾರಿ ಸಚಿವರ ತಂಡ ನೀಡಿರುವ ವರದಿ, ಎಲ್ಲವನ್ನು ಆಧರಿಸಿ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಶಿಫಾರಸು ಮಾಡಲಾಗಿದೆ. ಉಳಿದ 13 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.
ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ಪಕ್ಷದ ಕೆಲವು ಮುಖಂಡರುಗಳೇ ಆಸಕ್ತಿ ತೋರದ ಕಾರಣ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕುವುದೇ ರಾಜ್ಯ ಮುಖಂಡರಿಗೆ ಕಷ್ಟವಾಗಿದೆ.
ಈ ಕಾರಣಕ್ಕಾಗಿ ಪ್ರಭಾವಿ ರಾಜಕಾರಣಿ ಕುಟುಂಬ, ಉದ್ದಿಮೆ ಮತ್ತು ಗುತ್ತಿಗೆದಾರರು ಹಾಗೂ ಬಿಜೆಪಿಯಿಂದ ಕೆಲವು ಮುಖಂಡರನ್ನು ಸೆಳೆದು ಟಿಕೆಟ್ ನೀಡಲು ಪಕ್ಷ ಮುಂದಾಗಿದೆ.