ದೇಶದ್ರೋಹಿಗಳಿಗೆ ಪರೋಕ್ಷ ಬೆಂಬಲ
ಬೆಂಗಳೂರು: ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಲು ಮತ್ತು ಸುಳ್ಳು ಹೇಳಲು ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಅಧಿವೇಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ 60 ಗಂಟೆ ಆಗಿದ್ದರೂ ಆರೋಪಿಗಳ ಬಂಧನ ಮಾಡದೆ, ದೇಶದ್ರೋಹಿಗಳಿಗೆ ಪರೋಕ್ಷ ಬೆಂಬಲ ಕೊಡುವ ಎಲ್ಲ ಕೆಲಸಗಳನ್ನು ಮುಖ್ಯಮಂತ್ರಿ, ಗೃಹಸಚಿವರು ಮತ್ತು ಇಡೀ ಸಚಿವ ಸಂಪುಟ ಮಾಡುತ್ತಿದೆ ಎಂದರು.
ರಾಜ್ಯಪಾಲರಿಗೆ ದೂರು
ದೇಶ ಮೊದಲು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ ಪಾಕಿಸ್ತಾನ ನೆರೆರಾಷ್ಟ್ರ, ಶತ್ರು ರಾಷ್ಟ್ರವಲ್ಲ ಎಂದು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಾರೆ, ಈ ಕುರಿತು ರಾಜ್ಯಪಾಲರಿಗೆ ದೂರು ನೀಡಿದ್ದೇವೆ.
ವಿಧಾನಸೌಧದಲ್ಲೇ ಭಾರತ ವಿರೋಧಿ ಘೋಷಣೆ ಕೂಗಿದ್ದರ ಕುರಿತು ರಾಜ್ಯಪಾಲರು ಅಚ್ಚರಿ ವ್ಯಕ್ತಪಡಿಸಿದ್ದಾರೆ, ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಪ್ರಕರಣದ ವಿಡಿಯೊ ಕುರಿತ ಎಫ್‌ಎಸ್‌ಎಲ್ ವರದಿ ಸರ್ಕಾರದ ಕೈಸೇರಿದೆ, ಪಾಕ್ ಪರ ಘೋಷಣೆ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭ್ಯವಿದೆ, ಇಷ್ಟಾದರೂ ಆರೋಪಿಗಳನ್ನು ಬಂಧಿಸಿಲ್ಲ.
ತುರ್ತು ಪರಿಸ್ಥಿತಿ ವಾತಾವರಣ
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಕಂಡ ನಾಸೀನ್ ಹುಸೇನ್ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆ ಪತ್ರಿಕಾರಂಗವನ್ನೂ ದಬ್ಬಾಳಿಕೆ ಮೂಲಕ ಪ್ರತಿಬಂಧಿಸಿ, ಮತ್ತೊಮ್ಮೆ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪ್ರತಿ ತಿಂಗಳು ೨೨ ಲಕ್ಷ ಕ್ವಿಂಟಲ್ ಅಕ್ಕಿ ಬರುತ್ತದೆ, ಬಿಪಿಎಲ್ ಪಡಿತರ ಚೀಟಿಯವರಿಗೆ 5 ಕೆಜಿಯಂತೆ ನೀಡಲಾಗುತ್ತಿದೆ, ಮೊದಲು ಗೋಣಿಚೀಲದ ವೆಚ್ಚ ಕೊಡಬೇಕಿತ್ತು, ಈಗ ಸಾಗಾಟ ಸೇರಿ ಪೂರ್ಣ ವೆಚ್ಚವನ್ನು ಕೇಂದ್ರವೇ ಕೊಡುತ್ತಿದೆ, ಕೇಂದ್ರದ ಅಕ್ಕಿ ಕೊಡುತ್ತಿರುವುದಾಗಿ ಜನತೆಗೆ ತಿಳಿಸುತ್ತಿಲ್ಲ, ಪಡಿತರ ಅಕ್ಕಿಯ ಹಣ ಕೇವಲ ಶೇ.50 ಜನರಿಗಷ್ಟೇ ಸಿಗುತ್ತಿದೆ ಎಂದರು.