ರಾಜ್ಯ ಘಟಕಕ್ಕೆ ಮಾರ್ಗಸೂಚಿ ನೀಡಿದ ಬಿಜೆಪಿ ವರಿಷ್ಠರು
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಘಟಕ ರವಾನಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ವರಿಷ್ಠರು ತಿರಸ್ಕರಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ರಾಜ್ಯ ನಾಯಕರು ಪರಿಗಣಿಸಿರುವ ಮಾನದಂಡಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವರಿಷ್ಠರು ಕೆಲವು ಸ್ಪಷ್ಟ ಮಾರ್ಗಸೂಚಿಗಳನ್ನು ರವಾನಿಸಿದ್ದು, ಅದರ ಆಧಾರದಲ್ಲಿಯೇ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.
ಕೋರ್ ಕಮಿಟಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನೊಳಗೊಂಡ ಕಮಿಟಿ ಸದಸ್ಯರು ತಮಗೆ ಇಲ್ಲವೇ ತಮ್ಮ ಕುಟುಂಬ ವರ್ಗದವರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಶಿಫಾರಸು ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಸ್ಪರ್ಧೆ: ದೆಹಲಿಯಲ್ಲಿ ನಿರ್ಧಾರ
ವರಿಷ್ಠರ ಕೆಂಗಣ್ಣಿಗೆ ಗುರಿ, ಮಾರ್ಚ್ 10 ಕ್ಕೆ ಎರಡನೇ ಪಟ್ಟಿ ಪ್ರಕಟ
ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ತಮ್ಮ ಪುತ್ರ ರಾಘವೇಂದ್ರ ಅವರಿಗೂ, ಕೆ.ಎಸ್. ಈಶ್ವರಪ್ಪ ಅವರೂ ತಮ್ಮ ಪುತ್ರನಿಗೆ ಟಿಕೆಟ್ ಕೋರಿದ್ದಾರೆ, ಇದು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ಥಳೀಯ ಮಟ್ಟದ ಕಾರ್ಯಕರ್ತರ ಅಭಿಪ್ರಾಯ, ನಾಯಕರ ಸಲಹೆ ಮತ್ತು ಮತದಾರರ ಅಭಿಪ್ರಾಯ ಆಲಿಸಿ, ಗೆಲುವಿನ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ, ಕೆಲವು ಮಾರ್ಗಸೂಚಿಗಳನ್ನು ಕಳುಹಿಸಿ, ಪಟ್ಟಿ ಸಿದ್ಧ ಪಡಿಸುವಂತೆ ದೆಹಲಿ ವರಿಷ್ಠರು ಹೇಳಿದ್ದಾರೆ.
ಪಕ್ಷದ ಎರಡನೇ ಪಟ್ಟಿ ಮಾರ್ಚ್ 10 ರ ವೇಳೆಗೆ ಪ್ರಕಟಗೊಳ್ಳಲಿದ್ದು, ಅದಕ್ಕೂ ಮುನ್ನವೇ ನಾವು ನೀಡಿರುವ ಮಾನದಂಡಗಳ ಆಧಾರದ ಮೇಲೆ ಕರ್ನಾಟಕದ ೨೮ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡುವಂತೆ ತಿಳಿಸಿದೆ.
ಪ್ರತಿ ಲೋಕಸಭಾ ಕ್ಷೇತ್ರಕ್ಕೆ ತಲಾ ಮೂವರು ಪದಾಧಿಕಾರಿಗಳ ಸಮಿತಿ
ವರಿಷ್ಠರ ಸೂಚನೆಯಂತೆ ನಿನ್ನೆ ರಾತ್ರಿ ಸೇರಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, 28 ಲೋಕಸಭಾ ಕ್ಷೇತ್ರಗಳಿಗೂ ತಲಾ ಮೂವರು ಪದಾಧಿಕಾರಿಗಳ ಸಮಿತಿ ರಚಿಸಿ ಪ್ರತಿ ಕ್ಷೇತ್ರಕ್ಕೂ ಕಳುಹಿಸಿಕೊಟ್ಟಿದೆ.
ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಉಸ್ತುವಾರಿಯ ಜೊತೆಗೆ ರಾಜ್ಯ ಮಟ್ಟದ ಇಬ್ಬರು ನಾಯಕರನ್ನು ಕಳುಹಿಸಿ ಎರಡರಿಂದ ಮೂರು ದಿನಗಳ ಕಾಲ ಅವರು ಅಲ್ಲಿಯೇ ವಾಸ್ತವ್ಯ ಹೂಡಿ ಕಾರ್ಯಕರ್ತರು, ಮುಖಂಡರು, ಜನಾಭಿಪ್ರಾಯ ಆಲಿಸಿ, ವರದಿ ನೀಡುವಂತೆ ಸೂಚಿಸಲಾಗಿದೆ.
ಬಿಜೆಪಿ ವರಿಷ್ಠರು ರಾಜ್ಯದ ನಾಲ್ಕು ವಲಯಗಳಿಗೂ ಮುಖಂಡರನ್ನು ಕಳುಹಿಸಲಿದ್ದು, ಅವರು ಈ ಸಮಿತಿಯ ಸದಸ್ಯರು ಹಾಗೂ ರಾಜ್ಯದ ನಾಯಕರೊಂದಿಗೆ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿದ ನಂತರ ವರಿಷ್ಠರಿಗೆ ಶಿಫಾರಸು ಮಾಡಲಿದ್ದಾರೆ.
ದೇಶ ದ್ರೋಹಿ ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದು
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ, ಬೆಳಗಾವಿಗೆ ಧಾವಿಸಿದ್ದು ಅವರು, ಆ ವಿಭಾಗಕ್ಕೆ ಬರುವ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ನಾಳೆ ಚರ್ಚೆ ಮಾಡಲಿದ್ದಾರೆ. ಅದೇ ರೀತಿ ಬೇರೆ ವಿಭಾಗಗಳಿಗೂ ಪಕ್ಷದ ಮುಖಂಡರು ಧಾವಿಸಲಿದ್ದು ಅದಕ್ಕೂ ಮುನ್ನವೇ ವರದಿ ಸಿದ್ಧಗೊಳ್ಳಬೇಕಿದೆ.
ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಎರಡನೇ ಪಟ್ಟಿಯಲ್ಲಿ ರಾಜ್ಯದ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ವರಿಷ್ಠರು ಪ್ರಕಟಿಸಲಿದ್ದಾರೆ.